ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌: ಮರೆಯಾಗುತ್ತಿವೆ ಅಪರೂಪದ ಮರಗಳು

Last Updated 21 ಜೂನ್ 2019, 19:30 IST
ಅಕ್ಷರ ಗಾತ್ರ

ಒಡಲಿನಲ್ಲಿ ಅಗಾಧ ಸಸ್ಯ ಸಂಪತ್ತು ಹೊಂದಿರುವ ಲಾಲ್‌ಬಾಗ್‌ನಲ್ಲಿ 50 ವರ್ಷಗಳಿಂದ ಈಚೆಗೆ ಹಲವುಅಪರೂಪದ ಪ್ರಭೇದದ ಸಸ್ಯಗಳು ಕಣ್ಮರೆಯಾಗಿವೆ.

ಎರಡೂವರೆ ಶತಮಾನಗಳ ಇತಿಹಾಸವಿರುವ ಲಾಲ್‌ಬಾಗ್‌ನ 240 ಎಕರೆಯಲ್ಲಿ ಬೇರೂರಿದ್ದ ದೇಶ, ವಿದೇಶಗಳ 1,303 ಜಾತಿಯ ಸಸ್ಯಗಳ ಪೈಕಿ 500ಕ್ಕೂ ಹೆಚ್ಚು ಗಿಡ, ಮರ, ಬಳ್ಳಿ ನಾಶವಾಗಿರುವ ಅಚ್ಚರಿಯ ಸಂಗತಿ ಗಣತಿಯ ವೇಳೆ ಬೆಳಕಿಗೆ ಬಂದಿದೆ.

ಫೌಂಡೇಶನ್‌ ಆಫ್‌ ರೀವೈಟಲೈಸೇಷನ್‌ ಆಫ್‌ ಲೋಕಲ್‌ ಹೆಲ್ತ್‌ ಟ್ರೇಡಿಶನ್ಸ್‌ ಸಂಸ್ಥೆಯ (ಎಫ್‌ಆರ್‌ಎಲ್‌ಎಚ್‌ಟಿ) ಡಾ. ರವಿಕುಮಾರ್‌ ನೇತೃತ್ವದ ಮೂವರುತಜ್ಞರ ತಂಡ ಆರು ತಿಂಗಳಿಂದ ಲಾಲ್‌ಬಾಗ್‌ನಲ್ಲಿ ಮರಗಳ ಸಮೀಕ್ಷೆ ಕಾರ್ಯ ಕೈಗೆತ್ತಿಕೊಂಡಿದೆ. 500ಕ್ಕೂ ಹೆಚ್ಚು ಜಾತಿಯ ಮರಗಳು ಕಣ್ಮರೆಯಾಗಿರುವುದು ಈ ವೇಳೆ ಬೆಳಕಿಗೆ ಬಂದಿದೆ.

50 ವರ್ಷಗಳ ಹಿಂದೆ ಅಂದರೆ, 1968ರಲ್ಲಿ ಮೊದಲ ಬಾರಿಗೆ ಡಾ. ಎಂ.ಎಚ್‌. ಮರಿಗೌಡ ಅವರು ಲಾಲ್‌ಬಾಗ್‌ನಲ್ಲಿದ್ದ ಮರಗಳ ಗಣತಿ ನಡೆಸಿದ್ದರು. ‘ಲಾಲ್‌ಬಾಗ್‌ನ ಸಸ್ಯ ಸಂಪತ್ತು’ ಎಂಬ ಪುಸ್ತಕದಲ್ಲಿ ಅವರು ಒಟ್ಟು 1,303 ಜಾತಿಗಳ ಸಸ್ಯಗಳನ್ನು ಹೆಸರಿಸಿದ್ದರು. ಆ ಪೈಕಿ ಈಗ ಉಳಿದುಕೊಂಡಿದ್ದು ಕೇವಲ 760 ಜಾತಿಯ ಸಸ್ಯಗಳು ಮಾತ್ರ!

ವಿದೇಶಿ ಸಸ್ಯಗಳ ವಿನಾಶ

ಹಲವಾರು ವರ್ಷಗಳ ಭಾರಿ ಗಾಳಿ, ಮಳೆಗೆ ಉದ್ಯಾನದಲ್ಲಿದ್ದ 225 ಜಾತಿಯ ಮರಗಳು ಹಂತ, ಹಂತವಾಗಿ ಬುಡಮೇಲಾಗಿವೆ. ಇನ್ನೂ ಕೆಲವು ವಯಸ್ಸಾದ ಮರಗಳು ಸಹಜವಾಗಿ ಬಿದ್ದುಹೋಗಿವೆ. ಸ್ಥಳೀಯ ಹವಾಮಾನ, ತಾಪಮಾನಕ್ಕೆ ಒಗ್ಗಿಕೊಳ್ಳದೆ ಕೆಲವು ವಿದೇಶಿ ಮೂಲದ ಸಸ್ಯಗಳು ನಶಿಸಿ ಹೋಗಿವೆ.

ಅದನ್ನೆಲ್ಲಸರಿದೂಗಿಸಲು ಲಾಲ್‌ಬಾಗ್ ತೋಟಗಾರಿಕೆ ಇಲಾಖೆ ದೇಶದ ನಾನಾ ಭಾಗ ಮತ್ತು ವಿದೇಶಗಳಿಂದ ತರಿಸಿರುವ 125 ಸಸ್ಯ ಪ್ರಬೇಧಗಳನ್ನು ಹೊಸದಾಗಿ ಉದ್ಯಾನದಲ್ಲಿ ನೆಡಲಿದೆ ಎಂದು ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್‌ ‘ಮೆಟ್ರೊ’ಗೆ ತಿಳಿಸಿದರು.

ಡಾ. ಮರಿಗೌಡರ ನಂತರ ಮರಗಳ ಸಮೀಕ್ಷೆ ನಡೆದಿರಲಿಲ್ಲ. 50 ವರ್ಷಗಳಲ್ಲಿ ಹಲವಾರು ಗಿಡ, ಮರಗಳ ಹೆಸರು ಬದಲಾಗಿವೆ. ಇನ್ನೂ ಕೆಲವು ಅಳಿವಿನಂಚಿನಲ್ಲಿರುವ ಮರಗಳಿವೆ. ಅವುಗಳನ್ನೆಲ್ಲ ಮತ್ತೆ ಹೊಸದಾಗಿ ಅಂತರರಾಷ್ಟ್ರೀಯ ಮಾನದಂಡದಂತೆ ವ್ಯವಸ್ಥಿತವಾಗಿ ವರ್ಗೀಕರಿಸಿ, ಹೊಸ ಹೆಸರು ನೀಡುವ ಕೆಲಸ ಈಗ ಶುರುವಾಗಿದೆ. ಆರು ತಿಂಗಳಲ್ಲಿ ಇದು ಪೂರ್ಣಗೊಳ್ಳಲಿದೆ ಎಂದು ಜಗದೀಶ್‌ ಆಶಾಭಾವನೆ ವ್ಯಕ್ತಪಡಿಸಿದರು.

ಮರಿಗೌಡ ಅವರು ಪುಸ್ತಕದಲ್ಲಿ ಹೆಸರಿಸಿದ 232 ಹಳೆಯ ಸಸ್ಯ ಪ್ರಭೇದಗಳು ಈಗ ಕಾಣಿಸುತ್ತಿಲ್ಲ. ಇನ್ನೂ ಕೆಲವು ಸ್ಥಳೀಯ ಕಳೆ ಸಸ್ಯಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಸ್ಥಳೀಯ ಪ್ರಬೇಧಗಳಾದ ಏಷಿಯನ್‌ ತಾಳೆ, ಗುಟ್ಟಾ, ಕುಡಂಪುಲಿ ಪ್ರಭೇದಗಳು ನಾಶವಾಗಿವೆ. ಅಕೇಶಿಯಾ ವರ್ಗಕ್ಕೆ ಸೇರಿದ 30 ಪ್ರಭೇದಗಳಲ್ಲಿ ಈಗ ಕೇವಲ ಹತ್ತು ಮಾತ್ರ ಉಳಿದುಕೊಂಡಿವೆ.

ಲಾಲ್‌ಬಾಗ್‌ ಉದ್ಯಾನದಲ್ಲಿರುವ ಸಸ್ಯಗಳ ಪೈಕಿ ಶೇ 80ರಷ್ಟು ವಿದೇಶಿ ಮೂಲದ ಸಸ್ಯಗಳು. ಆ ಪೈಕಿ 20 ಜಾತಿಯ ಮರಗಳನ್ನು ತಪ್ಪಾಗಿ ಹೆಸರಿಸಲಾಗಿದೆ ಎಂದು ತಜ್ಞರ ತಂಡ ಪತ್ತೆ ಹಚ್ಚಿದೆ.

ವರ್ಷಾಂತ್ಯದಲ್ಲಿ ಮರಗಣತಿ ವರದಿ

ಕಳೆದ ಆಗಸ್ಟ್‌ನಲ್ಲಿ ಸಮೀಕ್ಷೆ ಕಾರ್ಯ ಆರಂಭಿಸಿರುವ ತಂಡ ವರ್ಷಾಂತ್ಯದಲ್ಲಿ ತೋಟಗಾರಿಕಾ ಇಲಾಖೆಗೆ ವರದಿ ಸಲ್ಲಿಸಲಿದೆ. ‘ಲಾಲ್‌ಬಾಗ್‌ ಮರಗಳು‘ ಮತ್ತು ‘ಲಾಲ್‌ಬಾಗ್‌ ಸಸ್ಯ ಸಂಪತ್ತು ‘ಎಂದು ಎರಡು ಭಾಗಗಳಲ್ಲಿ ವರದಿ ಸಲ್ಲಿಸಲಿದೆ.

ಪ್ರಮುಖಾಂಶಗಳು...

* 51 ವರ್ಷಗಳ ಬಳಿಕ ಲಾಲ್‌ಬಾಗ್‌ನಲ್ಲಿ ಮರಗಳ ಗಣತಿ

* 1968ರಲ್ಲಿ ಮೊದಲ ಬಾರಿಗೆ ನಡೆದಿದ್ದ ಗಣತಿ

* 1,303 ಜಾತಿಯ ಗಿಡ, ಮರ, ಕಂಟಿ, ಬಳ್ಳಿಗಳಲ್ಲಿ ಉಳಿದಿದ್ದು 760

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT