‘ಕೃಂಬಿಗಲ್‌ ಹಾಲ್‌ ಪುನಶ್ಚೇತನ: ಶೀಘ್ರ ಟೆಂಡರ್‌’

7
ಲಾಲ್‌ಬಾಗ್‌: ಹಲವು ದಶಕಗಳಿಂದ ಬಿಸಿಲು–ಮಳೆಗೆ ಮೈಯೊಡ್ಡಿ ಶಿಥಿಲಾವಸ್ಥೆಗೆ ತಲುಪಿದ ಕಟ್ಟಡ

‘ಕೃಂಬಿಗಲ್‌ ಹಾಲ್‌ ಪುನಶ್ಚೇತನ: ಶೀಘ್ರ ಟೆಂಡರ್‌’

Published:
Updated:
Deccan Herald

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಹಲವು ದಶಕಗಳಿಂದ ಬಿಸಿಲು–ಮಳೆಗೆ ಮೈಯೊಡ್ಡಿ ಶಿಥಿಲಾವಸ್ಥೆ ತಲುಪಿ‌ ನೆಲಕಚ್ಚಿದ ಕೃಂಬಿಗಲ್‌ ಹಾಲ್‌ ಪುನಶ್ಚೇತನ ಕಾರ್ಯಕ್ಕೆ ಪುರಾತತ್ವ ಇಲಾಖೆ‌ ಶೀಘ್ರವೇ ಟೆಂಡರ್‌ ಕರೆಯಲಿದೆ. 

‘ಕೃಂಬಿಗಲ್‌ ಉಪನ್ಯಾಸ ಹಾಲ್‌ನ ಪುನಶ್ಚೇತನ ಕಾರ್ಯವನ್ನು ಪುರಾತತ್ವ ಇಲಾಖೆಗೆ ವಹಿಸಿದ್ದೇವೆ. ಟೆಂಡರ್‌ ಕರೆಯಲು ತಯಾರಿ ಮಾಡಿಕೊಳ್ಳಲಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಾಲ್‌ಗೆ ಸುಮಾರು 200 ವರ್ಷಗಳ ಇತಿಹಾಸವಿದೆ. 2017ರಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈ ಹಾಲ್‌ನ ಕಟ್ಟಡವು ಭಾಗಶಃ ಕುಸಿದಿತ್ತು. ಅದರ ಅವಶೇಷಗಳನ್ನು ತೆರವುಗೊಳಿಸುವಾಗ ಉಳಿದ ಭಾಗವೂ ಕುಸಿದಿತ್ತು. ಪುನಶ್ಚೇತನ ಮಾಡಲು ಪುರಾತತ್ವ ಇಲಾಖೆಗೆ ₹98 ಲಕ್ಷ ಹಣ ನೀಡಲಾಗಿದೆ’ ಎಂದು ತಿಳಿಸಿದರು.

‘ಮಾರ್ಚ್‌ನಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಟೆಂಡರ್‌ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಆದರೆ, ಈಗಾಗಲೇ ಇಲಾಖೆಗೆ ತಾಂತ್ರಿಕ ಅನುಮೋದನೆ ದೊರೆತಿದೆ’ ಎಂದೂ ತಿಳಿಸಿದರು.

ಜಿ.ಎಚ್.ಕೃಂಬಿಗಲ್ ಎಂದೇ ಖ್ಯಾತರಾಗಿರುವ ಗುಸ್ತಾವ್ ಹರ್ಮನ್ ಕೃಂಬಿಗಲ್ ಅವರು ತೋಟಗಾರಿಕೆ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ಸ್ಮರಣಾರ್ಥ ಈ ಕಟ್ಟಡಕ್ಕೆ ಅವರ ಹೆಸರಿಡಲಾಗಿದೆ.

ತೋಟಗಾರಿಕಾ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ತರಬೇತಿ ನೀಡುವ ಉದ್ದೇಶದಿಂದ 1860ರಲ್ಲಿ ಸುಮಾರು 25X35 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿದ ಅಲಂಕಾರಿಕ ಕಟ್ಟಡವಿದು.

‘ಹಾಲ್‌ನ ಸಾಮರ್ಥ್ಯದ ಬಗ್ಗೆ ಸಿವಿಲ್‌– ಏಡ್‌ ಟೆಕ್ನೋಕ್ಲಿನಿಕ್‌ ಪ್ರೈವೇಟ್‌ ಲಿಮಿಟೆಡ್‌ 2007ರಲ್ಲಿ ತಾಂತ್ರಿಕ ವರದಿ ಸಲ್ಲಿಸಿತ್ತು. ಕಟ್ಟಡದ ಗಾರೆ, ಕಬ್ಬಿಣವು ಸಾಮರ್ಥ್ಯ ಕಳೆದುಕೊಂಡಿದ್ದು, ಕಬ್ಬಿಣ ತುಕ್ಕು ಹಿಡಿದು ದುರ್ಬಲಗೊಂಡಿದೆ. ಈ ಕಟ್ಟಡವನ್ನು ನವೀಕರಣ ಮಾಡಬಹುದಾದರೂ ಅದಕ್ಕೆ ಅಧಿಕ ಹಣ ಖರ್ಚಾಗುತ್ತದೆ. ಜತೆಗೆ ಅದು ದೀರ್ಘಾವಧಿಯವರೆಗೆ ಸುಸ್ಥಿತಿಯಲ್ಲಿ ಇರುವುದಿಲ್ಲ. ಈ ಕಟ್ಟಡವನ್ನು ಕೆಡವಿ, ಮರು ನಿರ್ಮಾಣ ಮಾಡುವುದೇ ಸೂಕ್ತ ಎಂದು ವರದಿಯಲ್ಲಿ ಹೇಳಲಾಗಿತ್ತು’ ಎಂದು ವಿವರಿಸಿದರು.

‘ಈ ವರದಿಯನ್ನು ಲೋಕೋಪಯೋಗಿ ಇಲಾಖೆಯ ಪರಿಶೀಲನೆಗೆ ಕಳುಹಿಸಿಕೊಟ್ಟಿದ್ದೆವು. ಅದನ್ನು ಪರಿಶೀಲಿಸಿದ್ದ ಅಧಿಕಾರಿಗಳು, ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ಕೆಡವಿ, ಮರು ನಿರ್ಮಾಣ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದರು’ ಎಂದರು.

‘₹1.95 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿ ಕೊಡುವುದಾಗಿ ಇಂಟ್ಯಾಕ್‌ ಸಂಸ್ಥೆಯು ಅಂದಾಜು ಪಟ್ಟಿ ಸಲ್ಲಿಸಿತ್ತು. ಲೋಕೋಪಯೋಗಿ ಇಲಾಖೆಯು ₹1.1 ಕೋಟಿ ವೆಚ್ಚದಲ್ಲಿ ನಿರ್ಮಿಸುವುದಾಗಿ ಅಂದಾಜು ಪಟ್ಟಿ ಸಲ್ಲಿಸಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ಕೃಂಬಿಗಲ್‌ ಹಾಲ್‌ ಪುರಾತನ ಕಟ್ಟಡವಾಗಿರುವುದರಿಂದ ಮರು ನಿರ್ಮಾಣ ಮಾಡದೆ ಇದ್ದ ಮಾದರಿಯಲ್ಲೇ ಪುನಶ್ಚೇತನ ಮಾಡಲು ಪುರಾತತ್ವ ಇಲಾಖೆ ಮುಂದಾದರೆ ಚೆನ್ನಾಗಿರುತ್ತದೆ ಎಂಬ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ಹೇಳಿದರು.

**

‘ಗ್ರಂಥಾಲಯ ಸದ್ಯದಲ್ಲೇ ಸಾರ್ವಜನಿಕರ ಬಳಕೆಗೆ ಮುಕ್ತ’

‘ಡಾ.ಎಂ.ಎಚ್‌.ಮರೀಗೌಡ ರಾಷ್ಟ್ರೀಯ ತೋಟಗಾರಿಕಾ ಗ್ರಂಥಾಲಯ ಸದ್ಯದಲ್ಲೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ’ ಎಂದು ಜಗದೀಶ್‌ ತಿಳಿಸಿದರು. 

‘ಗ್ರಂಥಾಲಯದ ಪುನಶ್ಚೇತನಕ್ಕೆ ಪುರಾತತ್ವ ಇಲಾಖೆಗೆ ₹98 ಲಕ್ಷ ನೀಡಲಾಗಿತ್ತು. 2 ತಿಂಗಳ ಹಿಂದೆಯೇ ಪುನಶ್ಚೇತನ ಕಾರ್ಯ ಪೂರ್ಣಗೊಂಡಿದ್ದು, 10 ದಿನಗಳ ಒಳಗಾಗಿ ಸಂಪೂರ್ಣ ಕಾರ್ಯ ಪೂರ್ಣಗೊಳ್ಳಲಿದೆ’ ಎಂದರು.

‘ಗ್ರಂಥಾಲಯಕ್ಕೆ ಬೇಕಾದ ಪೀಠೋಪಕರಣ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡಬೇಕಿದೆ. ಅದಕ್ಕೆ ಬೇಕಾದ ಅಂದಾಜು ಖರ್ಚುವೆಚ್ಚ ಕುರಿತು ತೋಟಗಾರಿಕೆ ಇಲಾಖೆಯ ಎಂಜಿನಿಯರ್‌ಗಳು ಯೋಜನೆ ರೂಪಿಸಿದ್ದಾರೆ. ಅಗತ್ಯ ಅನುದಾನ ಬಿಡುಗಡೆಯಾದ ನಂತರ ಕೇಂದ್ರ ಗ್ರಂಥಾಲಯದ ಮಾದರಿಯಲ್ಲಿಯೇ ಒಳಾಂಗಣ ವಿನ್ಯಾಸ ರೂಪುಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !