ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಇದು ಜಾಹ್ನವಿ ‘ಧಡ್ಕನ್‌’

Last Updated 11 ಜೂನ್ 2018, 12:59 IST
ಅಕ್ಷರ ಗಾತ್ರ

‘ನಾನು ನಿನಗೊಂದು ದೊಡ್ಡ ಬಂಗಲೆ ಕಟ್ಟಿಸ್ತೀನಿ’ ಅನ್ನುತ್ತಾನೆ ಅವನು. ನನಗೆ ಬಂಗ್ಲೆ ಬೇಡ, ಪುಟ್ಟ ಮನೆ ಬೇಕು. ನನ್ನ ಮನೆ’ ಅನ್ನುತ್ತಾಳೆ ಅವಳು. ದೊಡ್ಡ ಬಂಗಲೆಯಲ್ಲಿದ್ದವಳಿಗೆ ಪುಟ್ಟ ಪ್ರೀತಿಯ ಮನೆ ಬೇಕು. ಬಂಗಲೆಯ ಹುಡುಗಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅವನಿಗೆ ಅವಳಿಗಾಗಿ ಪ್ರೀತಿಯ ಅರಮನೆಯನ್ನೇ ಕಟ್ಟಿಸುವಾಸೆ!.

ಸೋಮವಾರ ಬಿಡುಗಡೆಯಾಗಿರುವ ಜಾಹ್ನವಿ ಕಪೂರ್ ಮತ್ತು ಇಶಾನ್ ಕಟ್ಟರ್ ಅಭಿನಯದ ‘ಧಡ್ಕನ್’ ಸಿನಿಮಾದ ಟ್ರೇಲರ್‌ನ ಮೊದಲ ಮಾತೇ ಹಟ್ಟಿ ಮತ್ತು ಮೊಹಲ್ಲಾಗಳ ನಡುವೆ ಅರಳಿನಿಂತ ಪ್ರೀತಿಯ ಕಥೆಗೆ ಮುನ್ನುಡಿ ಬರೆಯುತ್ತದೆ. ಮರಾಠಿ ಚಿತ್ರರಂಗದಲ್ಲಿ ದೊಡ್ಡ ಸಂಚಲನವುಂಟು ಮಾಡಿದ್ದ ‘ಸೈರಾಟ್’ ಹಿಂದಿ ಅವತರಣಿಕೆಯಾಗಿರುವ ‘ಧಡ್ಕನ್‌’ನಲ್ಲಿ ನಾಯಕಿ ಜಾಹ್ನವಿ ಕಪೂರ್‌ ಆಕರ್ಷಣೆಯ ಬಿಂದು.

ಟ್ರೇಲರ್‌ ಉದ್ದಕ್ಕೂ ತನ್ನ ಮುಗ್ಧ ಸೌಂದರ್ಯದಿಂದ ಗಮನ ಸೆಳೆಯುವ ಜಾಹ್ನವಿ ಭರವಸೆ ಮೂಡಿಸುತ್ತಾಳೆ. ಇಷ್ಟಪಡುವ ಹುಡುಗನನ್ನು ಗೆಳತಿಯರೊಂದಿಗೆ ಸೇರಿ ಗೋಳು ಹೊಯ್ದುಕೊಳ್ಳುತ್ತಲೇ ಬಿಚ್ಚು ಮನದಿಂದಲೇ ‘ಐ ಲವ್‌  ಯೂ’ ಹೇಳುತ್ತಾಳೆ. ನಾಚಿಕೆಯಿಂದ ಹುಡುಗ ‘ಐ ಲವ್‌ ಯೂ ಟೂ’ ಅಂತ ಹೇಳಲು ನಿಧಾನಿಸಿದಾಗ ಕೆನ್ನೆಗೊಂದು ಕೊಡ್ತೀನಿ ನೋಡು! ಅಂತ ಹೆದರಿಸುತ್ತಾಳೆ ಒಳಗೊಳಗೇ ನಾಚುವ ಜಾಹ್ನವಿ ಮನ ಸೆಳೆಯುತ್ತಾಳೆ.

‘ಸೈರಾಟ್’ನಲ್ಲಿ ಕಣ್ಣುಗಳಲ್ಲೇ ಭಾವಾಭಿವ್ಯಕ್ತಿ ತೋರಿದ್ದ ರಿಂಕು ರಾಜ್‌ಗುರುಗೂ ‘ಧಡ್ಕನ್‌’ನ ಜಾಹ್ನವಿಗೂ ಹೋಲಿಕೆ ಸಲ್ಲದು. ಜಮೀನ್ದಾರಿಕೆ ಕುಟುಂಬದ ಮಗಳಾಗಿ ರಿಂಕು ಮೊದಲ ನೋಟದಲ್ಲೇ ಪ್ರೇಕ್ಷಕರ ಮನ ಗೆದ್ದರೆ, ಇಲ್ಲಿ ಜಾಹ್ನವಿ ಸೌಂದರ್ಯ ಮತ್ತು ದಪ್ಪ ದನಿಯಿಂದ ಗಮನ ಸೆಳೆಯುತ್ತಾರೆ. ಜಾಹ್ನವಿಯಲ್ಲಿ ಶ್ರೀದೇವಿ ಹುಡುಕಹೊರಟರೆ ತುಸು ನಿರಾಸೆಯಾದೀತು.

ಶಾಹೀದ್ ಕಪೂರ್ ಸಂಬಂಧಿ ಇಶಾನ್ ಕಟ್ಟರ್‌ ಅಭಿನಯ ಜಾಹ್ನವಿಯನ್ನೂ ಮೀರಿಸುವಂತಿದೆ. ತುಂಟ ಪ್ರೇಮಿಯಾಗಿ, ಓಡಿ ಹೋಗುವ ಹುಡುಗನಾಗಿ ಇಶಾನ್ ಪಾತ್ರಕ್ಕೆ ಜೀವತುಂಬುವಂತೆ ನಟಿಸಿದ್ದಾನೆ. ಮುಗ್ಧ ಪ್ರೇಮಿಗಳಾಗಿ ಜಾಹ್ನವಿ–ಇಶಾನ್ ನೋಡುಗರ ಮನಸನ್ನು ಆವರಿಸುತ್ತಾರೆ. ಟ್ರೇಲರ್‌ನ ಕೊನೆಯಲ್ಲಿರುವ ‘ಜಿಗಟ್’ ಹಾಡು ಯುವಜನರಿಗೆ ಇಷ್ಟವಾಗುವಂತಿದೆ.

ತಾಯಿ ಜತೆ ಮನೆಯಲ್ಲಿ ‘ಸೈರಾಟ್’ ಸಿನಿಮಾ ನೋಡಿದ್ದೆ. ಆಗ ಅಮ್ಮಾ ಇಂಥ ಸಿನಿಮಾದ ಮೂಲಕವೇ ಸಿನಿ ಜಗತ್ತಿಗೆ ನನ್ನ ಪ್ರವೇಶ ಆಗಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಎಂದಿದ್ದೆ. ಆಗ ಅಮ್ಮಾ ನನಗೆಂಥ ಪಾತ್ರ ಒಪ್ಪುತ್ತೆ ಅನ್ನುವ ಬಗ್ಗೆ ಚರ್ಚಿಸಿದ್ದರು. ಆದಾದ ಸ್ವಲ್ಪ ದಿನಗಳಲ್ಲೇ ನನಗೆ ಸೈರಾಟ್ ಹಿಂದಿ ಅವತರಣಿಕೆಯಲ್ಲಿ ಆಹ್ವಾನ ಕೋರಿ ನಿರ್ಮಾಪಕ ಕರಣ್ ಜೋಹರ್ ಅವರಿಂದ ಕರೆ ಬಂತು. ಆಗ ನನಗೆ ಎಷ್ಟೊಂದು ಖುಷಿಯಾಗಿತ್ತು. ಈ ಸಮಯದಲ್ಲಿ ಅಮ್ಮ ನನ್ನ ಜತೆಗಿದ್ದಿದ್ದರೆ ಎಷ್ಟೊಂದು ಖುಷಿ ಪಡುತ್ತಿದ್ದಳು...’ ಎಂದು ‘ಧಡ್ಕನ್’ ಪ್ರೀಮಿಯರ್ ಷೋನಲ್ಲಿ ಜಾಹ್ನವಿ ಭಾವುಕವಾಗಿ ಮಾತನಾಡಿ, ನೆರೆದವರ ಕಣ್ಣು ಒದ್ದೆಯಾಗುವಂತೆ ಮಾಡಿದ್ದಾರೆ. ಸಿನಿಮಾ ಜುಲೈ 20ರಂದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT