ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್ ತಾಲ್ಲೂಕು ಉದ್ಘಾಟನೆ ಇಂದು

Last Updated 28 ಫೆಬ್ರುವರಿ 2018, 7:26 IST
ಅಕ್ಷರ ಗಾತ್ರ

ಗುರುಮಠಕಲ್: ಗುರುಮಠಕಲ್‌ ತಾಲ್ಲೂಕು ಕೇಂದ್ರವನ್ನಾಗಿಸುವ ಘೋಷಣೆ ಹಿಂದೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮಾಡಲಾಗಿತ್ತು. ಬಹುದಿನಗಳ ಕನಸು ನನಸಾಗುವ ಭರವಸೆ ಸಿಕ್ಕಿತ್ತು. ಆದರೆ ಚುನಾವಣೆ ನಂತರ ಹೊಸ ತಾಲ್ಲೂಕು ರಚನೆಯು ವಿಳಂಬವಾಯಿತು, ಗುರುಮಠಕಲ್ ತಾಲ್ಲೂಕು ಕೇಂದ್ರವು ಬುಧವಾರ (ಫೆ.28) ಕಾರ್ಯಾರಂಭ ಮಾಡಲಿದೆ.

ನೂತನ ತಾಲ್ಲೂಕುಗಳ ರಚನೆ ಕುರಿತು ಕಳೆದ ಮುಂಗಡ ಪತ್ರದಲ್ಲಿ ಸರ್ಕಾರ ಹೇಳಿತ್ತಾದರೂ ಈವರೆಗೂ ತಾಲ್ಲೂಕು ರಚನೆಗೆ ವೇಗ ಸಿಕ್ಕಿರಲಿಲ್ಲ, ಇದೀಗ ತಾಲ್ಲೂಕು ಕೇಂದ್ರವನ್ನು ಉದ್ಘಾಟನೆ ನೆರವೇರುತ್ತಿರುವುದು ಕೇವಲ ಚುನಾವಣೆ ಗಿಮಿಕ್ ಎಂಬ ಆರೋಪ ಕೇಳಿ ಬಂದಿದೆ. ಆದರೆ ಉದ್ಘಾಟನೆಯ ಕುರಿತು ಸಾರ್ವಜನಿಕರಿಗೆ ಈವರೆಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

‘ಸರ್ಕಾರ, ಶಾಸಕರಿಗೆ, ಸಚಿವರಿಗೆ ಹಾಗೂ ಸಂಸದರಿಗೆ ನಿಜವಾಗಿಯೂ ನಮ್ಮ ಕ್ಷೇತ್ರದ ಕುರಿತು ಕಾಳಜಿಯಿದ್ದಿದ್ದರೆ ತಾಲ್ಲೂಕು ಕೇಂದ್ರವಾಗಿಸಲು ಬೇಕಿದ್ದ ಎಲ್ಲಾ ಸೌಲಭ್ಯ ಒದಗಿಸುವಲ್ಲಿ ಯಾಕೆ ವಿಫಲರಾಗಿದ್ದಾರೆ? ತಾಲ್ಲೂಕು ಕೇಂದ್ರವೆಂದು ಉದ್ಘಾಟಿಸಿದರೆ ಸಾಕೆ? ಈವರೆಗೆ ಕಚೇರಿಗಳಿಗೆ ಸ್ಥಳಾವಕಾಶ, ಸಿಬ್ಬಂದಿ ಸೇರಿದಂತೆ ಕನಿಷ್ಟ ಸೌಲಭ್ಯ ಒದಗಿಸಲಾಗಿಲ್ಲ. ತಾಲ್ಲೂಕು ಉದ್ಘಾಟನೆಯಿಂದ ಆಗುವ ಪ್ರಯೋಜನವೇನು. ಚುನಾವಣೆ ದೃಷ್ಟಿಯಿಂದ ತಾಲ್ಲೂಕು ಉದ್ಘಾಟಿಸಲಾಗುತ್ತಿದೆ’ ಎಂದು ಬಿಜೆಪಿಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶರಣಗೌಡ ಬಾಡಿಯಾಳ ಆರೋಪಿಸುತ್ತಾರೆ.

‘ದೂರದ ಯಾದಗಿರಿ ಬದಲು ಗುರುಮಠಕಲ್ ತಾಲ್ಲೂಕಾದರೆ ಕಚೇರಿ ಕೆಲಸ ಸುಲಭವಾಗುತ್ತದೆ. ದೂರದೂರಿಗೆ ಅಲೆಯುವುದು ತಪ್ಪುತ್ತದೆ. ಆದರೆ ಇದು ಯಾವುದರ ಬಗ್ಗೆಯೂ ಮಾಹಿತಿ ನೀಡಲಾಗಿಲ್ಲ. ಜನರಿಗೆ ಸಮರ್ಪಕ ಮಾಹಿತಿ ನೀಡಲಾಗಿಲ್ಲ. ಸಿಬ್ಬಂದಿ, ಕಛೇರಿಗಳಿಗೆ ಸಂಬಂಧಿಸಿದಂತೆ ಸೂಕ್ತ ಸಿದ್ಧತೆಗಳು ನಡೆದಿಲ್ಲ’ ಎಂದರು.

‘ತಾಲ್ಲೂಕು ವ್ಯಾಪ್ತಿ ನಿಗದಿ ಮಾಡುವಾಗಲೇ ಸರ್ಕಾರ ಅವೈಜ್ಞಾನಿಕವಾಗಿ ನಡೆದುಕೊಂಡಿದೆ, ಗುರುಮಠಕಲ್ ತಾಲ್ಲೂಕು ಹೆಸರಿಗೆ ಮಾತ್ರ ಅಸ್ತಿತ್ವಕ್ಕೆ ಬಂದಂತಿದೆ. ಇಲ್ಲಿ ಯಾವುದೇ ರೀತಿಯ ಆದಾಯದ ಮೂಲಗಳಿಲ್ಲ,

ಹೆಚ್ಚಿನ ಹಳ್ಳಿಗಳನ್ನು ಕೈಬಿಡಲಾಗಿದೆ. ಜನರು ರಸ್ತೆಗಿಳಿದು ಪ್ರತಿಭಟಿಸಿದರೂ ಅದಕ್ಕೆ ಸ್ಪಂದಿಸದೆ ಅವೈಜ್ಞಾನಿಕ ಮಾದರಿಯಲ್ಲಿ ತಾಲ್ಲೂಕು ರಚಿಸಲಾಗಿದೆ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶರಣಗೌಡ ಕಂದಕೂರು ಹೇಳುತ್ತಾರೆ.

ಸಿಗದ ‘ಸೇರ್ಪಡೆ ಭಾಗ್ಯ’: ಗುರುಮ ಠಕಲ್ ಮತಕ್ಷೇತ್ರದ ಸೈದಾಪೂರ ಹೋಬಳಿ, ಹತ್ತಿಕುಣಿ ಹೋಬಳಿ ಸೇರಿದಂತೆ ಗುರುಮಠಕಲ್ ಗಡಿಗೆ ಹಂಚಿಕೊಂಡ ಸೇಡಂ ತಾಲ್ಲೂಕಿನ 15 ಕಿ.ಮೀ ವ್ಯಾಪ್ತಿಯೊಳಗಿನ ಗ್ರಾಮಗಳನ್ನು

ಗುರುಮಠಕಲ್ ತಾಲ್ಲೂಕಿಗೆ ಸೇರಿಸುವಂತೆ ಜನರು ಪ್ರತಿಭಟನೆ ನಡೆಸಿದ್ದರು. ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರಿಗೆ, ಎರಡೂ ಮತಕ್ಷೇತ್ರಗಳ ಶಾಸಕರಿಗೆ ಹಾಗೂ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರೂ ಆ ಗ್ರಾಮಗಳಿಗೆ ತಾಲ್ಲೂಕಿಗೆ ಸೇರ್ಪಡೆಗೊಳ್ಳುವ ಭಾಗ್ಯ ಸಿಗಲಿಲ್ಲ.

ಸಂಜೆ 4ಕ್ಕೆ ಸಮಾರಂಭ

ಗುರುಮಠಕಲ್ ತಾಲ್ಲೂಕು ಉದ್ಘಾಟನಾ ಸಮಾರಂಭ ಬುಧವಾರ (ಫೆ.28) ಸಂಜೆ 4ಕ್ಕೆ ಗಾಂಧಿ ಮೈದಾನದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಬಾಬುರಾವ್ ಚಿಂಚನಸೂರ್ ಅಧ್ಯಕ್ಷತೆ ವಹಿಸುವರು.

ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ಬಿ.ವ್ಹಿ.ನಾಯಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರೆಡ್ಡಿ ಅನಪೂರ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT