ಶನಿವಾರ, ಜುಲೈ 31, 2021
28 °C
ಸಾಫ್ಟ್‌ವೇರ್ ಕಂಪನಿಗೆ ಕನ್ನ l ಹೋಟೆಲ್‌ ನೌಕರರಿಬ್ಬರ ಸೆರೆ

₹500ಕ್ಕೆ ಒಂದರಂತೆ 10 ಲ್ಯಾಪ್‌ಟಾಪ್ ಮಾರಿದ್ದರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಫ್ಟ್‌ವೇರ್ ಕಂಪನಿಗೆ ನುಗ್ಗಿ ಹತ್ತು ಲ್ಯಾಪ್‌ಟಾಪ್‌ಗಳನ್ನು ದೋಚಿದ್ದ ಈ ಇಬ್ಬರು ಚಾಲಾಕಿಗಳು, ಅವುಗಳನ್ನು ₹ 500ಕ್ಕೆ ಒಂದರಂತೆ ಮಾರುತ್ತಿದ್ದರು. ಬಂಧನದ ಭೀತಿಯಿಂದ ವಾಸ್ತವ್ಯ ಬದಲಿಸಿ ಚರಂಡಿಗಳಲ್ಲೇ ಮಲಗುತ್ತಿದ್ದ ಇವರು, ಕೊನೆಗೂ ಬೆಳ್ಳಂದೂರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಮಣಿಪುರದ ಕೂಮ್‌ ಪಾವ್ (20) ಹಾಗೂ ಮಾಂಗ್‌ಮಿನ್ ಲೂನ (21) ಬಂಧಿತರು. ಇವರಿಂದ ಲ್ಯಾಪ್‌ಟಾಪ್‌ಗಳನ್ನು ಖರೀದಿಸಿದ ತಪ್ಪಿಗೆ, ಆಟೊ ಚಾಲಕ ಹಾಗೂ ಐಸ್‌ಕ್ರೀಂ ಅಂಗಡಿ ನೌಕರನನ್ನು ಸಹ ಪೊಲೀಸರು ಬಂಧಿಸಿದ್ದಾರೆ.

ಕೆಲಸ ಹುಡುಕಿಕೊಂಡು ಆರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಕೂಮ್ ಹಾಗೂ ಲೂನ, ಬೆಳ್ಳಂದೂರು ಹೊರವರ್ತುಲ ರಸ್ತೆಯ ಹೋಟೆಲ್‌ವೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಆ ಹೋಟೆಲ್‌ನ ಪಕ್ಕದಲ್ಲೇ ಇರುವ ಕಟ್ಟಡದ 4ನೇ ಮಹಡಿಯಲ್ಲಿ ‘ಎವಿಎಸ್–ಇಡಿಯು ಸೊಲ್ಯುಷನ್’ ಸಾಫ್ಟ್‌ವೇರ್ ಕಂಪನಿ ಇದೆ.

ಮದ್ಯ ವ್ಯಸನಿಗಳಾಗಿದ್ದ ಈ ಹುಡುಗರು, ಕುಡಿಯಲು ಹಣ ಬೇಕಾದಾಗ ರಾತ್ರಿ ವೇಳೆ ಸೈಕಲ್‌ಗಳನ್ನು ಕಳ್ಳತನ ಮಾಡುತ್ತಿದ್ದರು. ಒಮ್ಮೆ ಸ್ಥಳೀಯರಿಗೆ ಸಿಕ್ಕಿಬಿದ್ದು ಥಳಿತಕ್ಕೂ ಒಳಗಾಗಿದ್ದರು. ಪಕ್ಕದ ಸಾಫ್ಟ್‌ವೇರ್ ಕಂಪನಿಗೆ ಶನಿವಾರ ಹಾಗೂ ಭಾನುವಾರ ರಜೆ ಇರುತ್ತದೆ ಎಂಬುದನ್ನು ಅರಿತಿದ್ದ ಅವರು, ವಾರಾಂತ್ಯದ ದಿನಗಳಲ್ಲಿ ಕಂಪನಿಗೆ ಕನ್ನ ಹಾಕುವುದಕ್ಕೆ ಸಂಚು ರೂಪಿಸಿದ್ದರು.

ಅಂತೆಯೇ ಜೂನ್ 29ರ (ಶುಕ್ರವಾರ) ರಾತ್ರಿ 11 ಗಂಟೆಗೆ ಕಾರ್ಯಾಚರಣೆಗೆ ಇಳಿದಿದ್ದರು. ಸೆಕ್ಯುರಿಟಿ ಗಾರ್ಡ್ ನಿದ್ರೆಗೆ ಜಾರಿರುವುದನ್ನು ಗಮನಿಸಿ, ಸಜ್ಜಾ ಹಾಗೂ ಕಿಟಕಿ ಮೂಲಕವೇ ಕಟ್ಟಡವನ್ನೇರಿ ನಾಲ್ಕನೇ ಮಹಡಿಗೆ ತೆರಳಿದ್ದರು. ಅಲ್ಲಿ ಕಿಟಕಿಯ ಗಾಜು ಸರಿಸಿ ಕಂಪನಿಯೊಳಗೆ ನುಗ್ಗಿದ್ದರು ಎಂದು ಪೊಲೀಸರು ಹೇಳಿದರು.

ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆ: ವಿದ್ಯಾರ್ಥಿಯಂತೆ ಬ್ಯಾಗ್ ಹಾಕಿಕೊಂಡು ಬರುವ ಒಬ್ಬಾತ, ಟೇಬಲ್ ಹತ್ತಿ ಬಂದು ಲ್ಯಾಪ್‌ಟಾಪ್‌ಗಳನ್ನು ತೆಗೆದುಕೊಳ್ಳುತ್ತಾನೆ. ಒಂದರ ಮೇಲೆ ಒಂದರಂತೆ ಜೋಡಿಸಿಕೊಂಡು, ಅವುಗಳನ್ನು ಬ್ಯಾಗ್‌ನಲ್ಲಿ ಹಾಕಿಕೊಳ್ಳುತ್ತಾನೆ. ಬಳಿಕ, ಟೇಬಲ್ ಮೇಲಿಂದ ಎಗರಿ ಹೊರನಡೆಯುತ್ತಾನೆ. ಇವಿಷ್ಟೂ ದೃಶ್ಯಗಳು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಉದ್ಯೋಗಿಗಳು ಸೋಮವಾರ (ಜುಲೈ 2) ಬೆಳಿಗ್ಗೆ ಕೆಲಸಕ್ಕೆ ಬಂದಾಗ ಕಳ್ಳತನ ಪ್ರಕರಣ ಬಯಲಾಗಿತ್ತು. ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಸೋಮಾನಿ ಬೆಳ್ಳಂದೂರು ಠಾಣೆಗೆ ದೂರು ಕೊಟ್ಟಿದ್ದರು.

ಚರಂಡಿಯಲ್ಲಿ ಮಲಗುತ್ತಿದ್ದರು!
‘ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಆರೋಪಿಗಳ ಚಹರೆಯನ್ನು ತೋರಿಸಿದಾಗ ಸ್ಥಳೀಯರು ಇಬ್ಬರನ್ನೂ ಗುರುತಿಸಿದರು. ಅಷ್ಟರಲ್ಲಾಗಲೇ ಆರೋಪಿಗಳು ಲ್ಯಾಪ್‌ಟಾಪ್‌ಗಳನ್ನು ಮಾರಾಟ ಮಾಡಿ, ಹೋಟೆಲ್‌ ಕೆಲಸವನ್ನೂ ತೊರೆದಿದ್ದರು. ಇಬ್ಬಲೂರಿನ ಮೋರಿಯಲ್ಲಿ ಮಲಗುತ್ತಿದ್ದ ಇವರು, ಇತ್ತೀಚೆಗೆ ‘ಪಂಜಾಬ್‌ ಟೈಮ್ಸ್‌’ ಹೋಟೆಲ್‌ಗೆ ಬಂದಿದ್ದರು. ಪಿಎಸ್‌ಐ ವಿ.ರಾಜಶೇಖರ್ ನೇತೃತ್ವದ ತಂಡ ಅವರನ್ನು ವಶಕ್ಕೆ ಪಡೆಯಿತು’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.


–ಮಾಂಗ್‌ಮಿನ್ ಹಾಗೂ ಕೂಮ್‌ ಪಾವ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು