ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದಂಗಡಿ ಮುಂದೆ ಮುಂಜಾನೆಯೇ ಸರದಿ !

ಪಾನಮುಕ್ತ ಚುನಾವಣೆಗೆ ಮಾರಾಟಗಾರರ ಒಲವು: ಷರತ್ತು ಉಲ್ಲಂಘಿಸಿದ 19 ಸನ್ನದು ಅಮಾನತು
Last Updated 21 ಏಪ್ರಿಲ್ 2018, 9:02 IST
ಅಕ್ಷರ ಗಾತ್ರ

ಹಾವೇರಿ: ಚುನಾವಣಾ ನೀತಿ ಸಂಹಿತೆಯ ಬಿಸಿ ಮದ್ಯ ಮಾರಾಟಕ್ಕೂ ತಟ್ಟಿದ್ದು, ಮದ್ಯದಂಗಡಿಗಳ ಮುಂದೆ ಮುಂಜಾನೆಯಿಂದಲೇ ಸರದಿ ಹೆಚ್ಚುತ್ತಿದೆ. ಇನ್ನೊಂದೆಡೆ, ಚುನಾವಣೆ ಮುಗಿಯುವ ತನಕ ಸ್ವಯಂ ಪ್ರೇರಣೆಯಿಂದ ಬಂದ್‌ ಮಾಡಲು ಅವಕಾಶ ಕಲ್ಪಿಸಿ ಎಂದು ಜಿಲ್ಲಾ ಮದ್ಯ ಮಾರಾಟಗಾರರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ನೀತಿ ಸಂಹಿತೆ ಘೋಷಣೆಯ ಬಳಿಕ ಮದ್ಯ ಮಾರಾಟದ ಮೇಲೆ ಅಬಕಾರಿ ಇಲಾಖೆಯು ತೀವ್ರ ನಿಗಾ ವಹಿಸಿ, ಅಕ್ರಮಗಳಿಗೆ ಕಡಿವಾಣ ಹಾಕುತ್ತಿದೆ. ಸನ್ನದು ಷರತ್ತುಗಳನ್ನು ಉಲ್ಲಂಘಿಸಿದ ಜಿಲ್ಲೆಯ 19 ಮದ್ಯದಂಗಡಿಗಳ ಪರವಾನಗಿಯನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಗುರುವಾರ ಆದೇಶಿಸಿ
ದ್ದಾರೆ. ಈ ಮದ್ಯದಂಗಡಿಗಳಿಗೆ ಅಬಕಾರಿ ಇಲಾಖೆಯು ಶುಕ್ರವಾರ ಬೀಗ ಜಡಿದಿದೆ. ಇದರಿಂದಾಗಿ ಜಿಲ್ಲೆಯ 156 ಮದ್ಯದಂಗಡಿಗಳ ಪೈಕಿ 137 ಮಾತ್ರ ಈಗ ಕಾರ್ಯ ನಿರ್ವಹಿಸುತ್ತಿವೆ.

ಅಲ್ಲದೇ, ಈ ಹಿಂದೆ ಗೂಡಂಗಡಿ, ಬೀದಿ ಬದಿ, ಹಳ್ಳಿಯ ಕೆಲವು ಮನೆಗಳಲ್ಲಿ ನಡೆಯುತ್ತಿದ್ದ ಅಕ್ರಮ ಮಾರಾಟದ ಮೇಲೂ ದಾಳಿಗಳು ನಡೆಯುತ್ತಿವೆ. ಮದ್ಯದಂಗಡಿಗಳ ಪರವಾನಗಿಗೆ ತಕ್ಕಂತೆ ಮಾರಾಟದ ಸಮಯವನ್ನೂ ಕಟ್ಟುನಿಟ್ಟುಗೊಳಿಸಲಾಗುತ್ತಿದೆ.

ಪ್ರತಿ ಮದ್ಯದಂಗಡಿಯಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ (ಏಪ್ರಿಲ್ 2017) ಮಾರಾಟಗೊಂಡ ಮದ್ಯಕ್ಕಿಂತ ಹೆಚ್ಚು ಮದ್ಯ ಮಾರಾಟಗೊಳ್ಳದಂತೆ ಇಲಾಖೆ ನಿಗಾ ವಹಿಸಿದೆ. ಮದ್ಯದಂಗಡಿಗಳು ಕರ್ನಾಟಕ ಪಾನೀಯ ನಿಗಮದಿಂದ ಖರೀದಿ ಮಾಡುವ ಮದ್ಯದ ಮೇಲೂ ಕಣ್ಣಿಟ್ಟಿದೆ.

‘ಪ್ರತಿ ಮದ್ಯದಂಗಡಿ ಕಳೆದ ವರ್ಷ ಖರೀದಿಸಿದ್ದ ಮದ್ಯದ ಆಧಾರದಲ್ಲಿ ಈ ಬಾರಿ ಮದ್ಯವನ್ನು ನೀಡುತ್ತಿದ್ದೇವೆ. ಕಳೆದ ವರ್ಷದ ಏಪ್ರಿಲ್ ತಿಂಗಳ ಮಿತಿಯನ್ನು ತಲುಪಿದ ಕೂಡಲೇ ಮದ್ಯ ನೀಡುವುದನ್ನೇ ಸ್ಥಗಿತಗೊಳಿಸಲಾಗುತ್ತಿದೆ’ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಗೋಪಾಲಕೃಷ್ಣ ಗೌಡ ಪಿ. ‘ಪ್ರಜಾವಾಣಿ’ಗೆ ತಿಳಿಸಿದರು.ಜಿಲ್ಲೆಯಲ್ಲಿ ತಿಂಗಳಿಗೆ ಸರಾಸರಿ ಒಂದು ಲಕ್ಷ ಕಾರ್ಟೂನ್ ಬಾಕ್ಸ್ (ಒಂದು ಬಾಕ್ಸ್ 8.64 ಲೀಟರ್‌) ಮದ್ಯ ಮಾರಾಟಗೊಳ್ಳುತ್ತದೆ ಎಂದರು.

ಬಿಸಿಲಿ ಝಳಕ್ಕೆ ಬಿಯರ್‌ಗೆ ಬೇಡಿಕೆ: ಬೇಸಿಗೆಯ ಝಳದ ಪರಿಣಾಮ ನೀತಿ ಸಂಹಿತೆಯ ಕಟ್ಟುನಿಟ್ಟಿನ ನಡುವೆಯೂ ‘ಬಿಯರ್‌’ಗೆ ಬೇಡಿಕೆ ಹೆಚ್ಚುತ್ತಿದೆ. ಚಳಿ, ಮಳೆಗಾಲದಲ್ಲಿ ಸ್ವದೇಶಿ ಮದ್ಯ, ವಿದೇಶಿ ಪಾನೀಯ, ಲೋಕಲ್‌ ಬ್ರಾಂಡ್‌ ಸೇವಿಸುತ್ತಿದ್ದ ‘ಮದ್ಯ ಪ್ರಿಯ’ರು ತಾಪಮಾನ ಹೆಚ್ಚಿದಂತೆ ಬಿಯರ್‌ಗೆ ಮೊರೆ ಹೋಗುತ್ತಿದ್ದಾರೆ.

ಜಿಲ್ಲೆಯಲ್ಲಿ ತಿಂಗಳಿಗೆ 24 ಸಾವಿರ ಕಾರ್ಟೂನ್ ಬಾಕ್ಸ್ ಬಿಯರ್‌ (ಒಂದು ಬಾಕ್ಸ್ 7.8ರಿಂದ 8 ಲೀಟರ್‌ ಇರುತ್ತದೆ) ಮಾರಾಟಗೊಳ್ಳುತ್ತದೆ. ಪ್ರತಿ ವರ್ಷ ಬಿಯರ್ ಮಾರಾಟದಲ್ಲಿ ಶೇ 12ರಷ್ಟು ಏರಿಕೆಯಾಗುತ್ತಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ ಎಂದು ಗೋಪಾಲಕೃಷ್ಣ ಗೌಡ ಪಿ. ವಿವರಿಸಿದರು.ಪ್ರತಿ ವರ್ಷ ಬೇಸಿಗೆಯ ಮಾರ್ಚ್‌, ಏಪ್ರಿಲ್‌ ಮತ್ತು ಮೇ ತಿಂಗಳಲ್ಲೇ ಬಿಯರ್‌ ಹೆಚ್ಚು ಮಾರಾಟವಾಗುತ್ತದೆ ಎಂದರು.

ಮಳೆಗಾಲದ ಜುಲೈನಿಂದ ಡಿಸೆಂಬರ್‌ ತನಕ ಬಿಯರ್‌ ಮಾರಾಟ ಕುಸಿಯುತ್ತದೆ. ಆಗ ಮದ್ಯ ಮಾರಾಟ ಏರುಗತಿ ಕಾಣುತ್ತದೆ. ರಾಜ್ಯದಲ್ಲಿ ಸಾರಾಯಿ ನಿಷೇಧದ ಬಳಿಕ ಮದ್ಯ ಮಾರಾಟವು ಗಣನೀಯವಾಗಿ ವೃದ್ಧಿಯಾಗಿರುವುದು ದಾಖಲೆಗಳಿಂದ ತಿಳಿದುಬರುತ್ತದೆ.

ಜಿಲ್ಲೆಯಲ್ಲಿ ವಾರ್ಷಿಕ ಒಂದು ಕೋಟಿ ಲೀಟರ್‌ಗೂ ಅಧಿಕ ಮದ್ಯ ಹಾಗೂ 25 ಲಕ್ಷ ಲೀಟರ್ ಬಿಯರ್‌ ಮಾರಾಟವಾಗುತ್ತಿದೆ. ಇದರಿಂದಾಗಿ ಒಟ್ಟಾರೆ, ಸುಮಾರು ₹500 ಕೋಟಿ ವಹಿವಾಟು ನಡೆಯುತ್ತದೆ.

ಚುನಾವಣಾ ಆಯೋಗಕ್ಕೆ ಮನವಿ

ಈ ಬಾರಿ ಪಾನ ಮುಕ್ತ ಚುನಾವಣೆ ನಡೆಸುವುದಿದ್ದರೆ, ಸಂಪೂರ್ಣ ಸಹಕಾರ ನೀಡುತ್ತೇವೆ. ಚುನಾವಣೆಯ ಅವಧಿಯಲ್ಲಿ ಎಲ್ಲ ಮದ್ಯದಂಗಡಿಗಳನ್ನು ಮುಚ್ಚಲು ಸಿದ್ಧರಿದ್ದೇವೆ ಎಂದು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಬಸವರಾಜ ಬಿ. ಬೆಳವಡಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದರು.
ಈ ಅಧಿಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಅಥವಾ ಯಾವುದೇ ಅಹಿತರ ಘಟನೆ ನಡೆಯಬಾರದು ಎಂಬ ದೃಷ್ಟಿಯಿಂದ ನಮ್ಮ ಬೆಂಬಲ ನೀಡುತ್ತಿದ್ದೇವೆ ಎಂದರು.
19 ಮದ್ಯದಂಗಡಿಗಳ ಸನ್ನದು ಅಮಾನತು ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಜಿಲ್ಲಾಡಳಿತವು ನೋಟಿಸ್‌ ನೀಡಿ ಅಮಾನತು ಮಾಡಬೇಕಿತ್ತು. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಪ್ರಜಾಪ್ರತಿನಿಧಿ ಕಾಯಿದೆ ಪ್ರಕಾರ ಕ್ರಮ ಕೈಗೊಂಡಿದೆ’ ಎಂದರು.

ಸಮತೋಲನ ಅಗತ್ಯ: ಡಿ.ಸಿ.

ಕಾನೂನು ಉಲ್ಲಂಘಿಸಿದ ಮದ್ಯದಂಗಡಿಗಳ ವಿರುದ್ಧ ಮಾತ್ರ ಕ್ರಮ ಕೈಗೊಂಡಿದ್ದೇವೆ. ಇದು ಮೇ 15ರ ತನಕ ಜಾರಿಯಲ್ಲಿ ಇರುತ್ತದೆ. ಆದರೆ, ಎಲ್ಲ ಮದ್ಯದಂಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲು ಬರುವುದಿಲ್ಲ. ಆಗ ಕಳ್ಳಬಟ್ಟಿ ಅಥವಾ ಮತ್ತಿತರ ಅಹಿತಕರ ಬೆಳವಣಿಗೆಗಳ ಅಪಾಯ ಇರುತ್ತದೆ. ಹೀಗಾಗಿ, ಒಟ್ಟು ಸಮತೋಲನದ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡು ವುದು ಹಾಗೂ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸುವುದು ನಮ್ಮೆಲ್ಲರ ಕರ್ತವ್ಯ. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಡಿ.ಸಿ ಡಾ.ವೆಂಕಟೇಶ್ ಎಂ.ವಿ. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT