ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಸುವ್ಯವಸ್ಥೆ: ಹದ್ದಿನ ಕಣ್ಣಿಡುವಂತೆ ಬಿಎಸ್‌ವೈ ಸೂಚನೆ

ಹಿರಿಯ ಪೊಲೀಸ್‌ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಭೆ
Last Updated 1 ಆಗಸ್ಟ್ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ‘ಹೆಚ್ಚುತ್ತಿರುವ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಹದ್ದಿನ ಕಣ್ಣಿಡಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದರು.

ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು‌ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಗುರುವಾರ ಮುಖ್ಯಮಂತ್ರಿ ಚರ್ಚೆ ನಡೆಸಿದರು.

‘ಅಕ್ರಮ ಚಟುವಟಿಕೆ ನಡೆಯದಂತೆ ನಿಗಾ ವಹಿಸಬೇಕು. ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6ರವರೆಗೆ ಗಸ್ತು ತಿರುಗಬೇಕು. ಬೆಂಗಳೂರಿನಲ್ಲಿ ಭಯೋತ್ಪಾದಕ ಚಟುವಟಿಕೆಗೆ ಆಸ್ಪದವಾಗದಂತೆ ಎಚ್ಚರದಿಂದ ಕೆಲಸ ನಿರ್ವಹಿಸಬೇಕು’ ಎಂದು ಸೂಚಿಸಿದರು. ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಲೂ ಸಲಹೆ ನೀಡಿದರು.

‘ಎಲ್ಲ ಧರ್ಮದವರ ಹಬ್ಬಗಳ ಆಚರಣೆಯು ಅಡ್ಡಿ, ಆತಂಕಗಳಿಲ್ಲದಂತೆ ನಡೆಯುವ ವಾತಾವರಣ ಸೃಷ್ಟಿಸಬೇಕು. ಇಂಥ ಸಂದರ್ಭದಲ್ಲಿ ಕೋಮುಗಲಭೆಗಳಿಗೆ ಪ್ರಚೋದನೆ ನೀಡುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದರು.

ಜಿಲ್ಲಾವಾರು ಮಾಹಿತಿಗೆ ಸೂಚನೆ: ಪೊಲೀಸ್‌ ಇಲಾಖೆಗೆ ಸಂಬಂಧಿಸಿದ ಕಟ್ಟಡಗಳ ನಿರ್ಮಾಣ ಕುರಿತಂತೆ ಜಿಲ್ಲಾವಾರು ಪಟ್ಟಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.

‘ನಿರ್ಮಾಣ ಹಂತದಲ್ಲಿರುವ ಪೊಲೀಸ್‌ ವಸತಿಗೃಹಗಳನ್ನು ಪೂರ್ಣಗೊಳಿಸಲು ಒತ್ತು ನೀಡಲಿದ್ದೇವೆ. ಪೊಲೀಸ್ ಸಿಬ್ಬಂದಿಯ ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು. ಹಣಕಾಸಿನ ಸ್ಥಿತಿಗತಿ ಪರಿಶೀಲಿಸಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

*
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 25,174 ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರವೇ ಕ್ರಮ ತೆಗೆದುಕೊಳ್ಳಲಾಗುವುದು
-ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT