ಮಂಗಳವಾರ, ಫೆಬ್ರವರಿ 25, 2020
19 °C
ಕೆಪಿಸಿಸಿ ಅಧ್ಯಕ್ಷರ ಶೀಘ್ರ ನೇಮಕ: ರಾಜ್ಯ ಮುಖಂಡರ ಮನವಿ

ಪಕ್ಷದ ಪುನಶ್ಚೇತನಕ್ಕೆ ಹೆಚ್ಚಿದ ಒತ್ತಡ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಕೆಪಿಸಿಸಿ) ಪದಾಧಿಕಾರಿಗಳ ನೇಮಕ ಪ್ರಕ್ರಿಯೆಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ ಕಾಂಗ್ರೆಸ್‌ ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ಪಕ್ಷದ ರಾಜ್ಯ ಮುಖಂಡರು ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ.

ಕೂಡಲೇ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಪ್ರಕಟಿಸುವ ಮೂಲಕ ಪಕ್ಷದಲ್ಲಿನ ಆಂತರಿಕ ಗೊಂದಲ ನಿವಾರಿಸಬೇಕು ಎಂದು ಸಿದ್ದರಾಮಯ್ಯ ಅವರ ಬಣ ವರಿಷ್ಠರನ್ನು ಕೋರಿದೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಶುಕ್ರವಾರ ಭೇಟಿ ಮಾಡಿ ಈ ಕುರಿತು ಚರ್ಚಿಸಿರುವ ಶಾಸಕ ಕೆ.ಜೆ. ಜಾರ್ಜ್‌, ‘ರಾಜ್ಯ ವಿಧಾನ ಮಂಡಲದ ಅಧಿವೇಶನ ಇದೇ 17ರಂದು ಆರಂಭವಾಗಲಿದೆ. ವಿಧಾನ
ಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಸಿದ್ದರಾಮಯ್ಯ ಅವರನ್ನೇ ಮುಂದುವರಿಸಬೇಕು. ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಪ್ರತ್ಯೇಕ ನೇಮಕ ಬೇಡ’ ಎಂದು ಅವರು ಮನವಿ ಮಾಡಿದ್ದಾಗಿ ಮೂಲಗಳು ತಿಳಿಸಿವೆ.

ರಾಜ್ಯದ ಕೆಲವು ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಉತ್ತಮ ಫಲಿತಾಂಶ ದೊರೆತಿದೆ. ಜನರು ಪಕ್ಷದ ಜೊತೆ ಇದ್ದಾರೆ. ಕೂಡಲೇ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿ ‘ಅರಾಜಕ’ ಸ್ಥಿತಿಯನ್ನು ನಿವಾರಿಸಬೇಕು ಎಂದು ಸಿದ್ದರಾಮಯ್ಯ ಅವರ ಪರವಾಗಿ ಬಂದಿದ್ದ ಜಾರ್ಜ್‌ ಮನವಿ ಸಲ್ಲಿಸಿದ್ದಾರೆ.

‘ನೇಮಕದಲ್ಲಿ ವಿಳಂಬ ಆಗುತ್ತಿರುವುದರಿಂದ ಕಾಂಗ್ರೆಸ್‌ ಮುಖಂಡರು ಆಡಳಿತಾರೂಢ ಬಿಜೆಪಿಯ ಟೀಕೆಗೆ ಆಹಾರ ಆಗುವಂತಾಗಿದೆ. ಈ ಮುಜುಗರ ತಪ್ಪಿಸಬೇಕು. ರಾಜ್ಯ ಘಟಕಕ್ಕೆ ಬಲ ತುಂಬಬೇಕು ಎಂದೂ ಅವರು ಭೇಟಿಯ ಸಂದರ್ಭ ಆಗ್ರಹಿಸಿದರು ಎಂದು ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವರಿಷ್ಠರಿಗೆ ಎಚ್ಕೆ ಮನವಿ: ಪ್ರದೇಶ ಕಾಂಗ್ರೆಸ್‌ ಪದಾಧಿಕಾರಿಗಳ ನೇಮಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಮತ್ತು ಶಾಸಕಂಗ ಪಕ್ಷದ ನಾಯಕನ ನೇಮಕ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಕೋರಿ ವರಿಷ್ಠರಿಗೆ ಮನವಿ ಸಲ್ಲಿಸಲು ಹಿರಿಯ ಮುಖಂಡ ಎಚ್‌.ಕೆ. ಪಾಟೀಲ ನಿರ್ಧರಿಸಿದ್ದಾರೆ.

ಫೆ. 20ರೊಳಗೆ ನೇಮಕ ಸಾಧ್ಯತೆ: ಕೆಪಿಸಿಸಿ ಪದಾಧಿಕಾರಿಗಳ ನೇಮಕದ ಸಂಬಂಧ ತಲೆದೋರಿದ್ದ ಗೊಂದಲ ನಿವಾರಣೆ ಆಗಿದ್ದು, ಇದೇ 20ರೊಳಗೆ ನೇಮಕದ ಪಟ್ಟಿಯನ್ನು ಹೈಕಮಾಂಡ್‌ ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಶಾಸಕ ಡಿ.ಕೆ. ಶಿವಕುಮಾರ್‌ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಎಂ.ಬಿ. ಪಾಟೀಲ ಅವರನ್ನು ಈ ಸ್ಥಾನಕ್ಕೆ ಪರಿಗಣಿಸುವಂತೆ ಸಲಹೆ ನೀಡಿದ್ದಾರೆ. ಇಬ್ಬರನ್ನೂ ಪರಿಗಣಿಸದೆ ಬೇರೆಯವರನ್ನು ನೇಮಕ ಮಾಡಬೇಕು ಎಂದು ಇನ್ನೂ ಕೆಲವು ಮುಖಂಡರು ತಿಳಿಸಿದ್ದಾರೆ. ಇದರಿಂದಾಗಿ ತಲೆದೋರಿದ್ದ ಗೊಂದಲ ನಿವಾರಣೆಯಾಗಿದ್ದು, ಶೀಘ್ರವೇ ನೇಮಕಾತಿ ಪಟ್ಟಿ ಹೊರಬೀಳಲಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು