ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕಾ ಮಾಧ್ಯಮದ ಆಯ್ಕೆ: ಆಯಾ ರಾಜ್ಯಗಳಿಗೆ ಅಧಿಕಾರ ಕೊಡಲಿ

Last Updated 7 ಜನವರಿ 2019, 7:08 IST
ಅಕ್ಷರ ಗಾತ್ರ

ಹುಬ್ಬಳ್ಳಿ:‘ಯಾವ ಮಾಧ್ಯಮದಲ್ಲಿವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಬೇಕು ಎನ್ನುವುದನ್ನು ತೀರ್ಮಾನಿಸುವ ಅಧಿಕಾರವನ್ನು ಆಯಾ ರಾಜ್ಯಕ್ಕೆ ನೀಡಬೇಕು’ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ ಅವರ ತಂದೆ ಇತ್ತೀಚಿಗೆ ನಿಧನರಾಗಿದ್ದರಿಂದ ಅವರ ಮನೆಗೆ ಸೋಮವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಮಕ್ಕಳ ಶಿಕ್ಷಣ ಮಾಧ್ಯಮವನ್ನು ಪೋಷಕರೇ ನಿರ್ಧರಿಸಬೇಕೆಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದ್ದರಿಂದ ಆಯಾ ರಾಜ್ಯದವರಿಗೆ ಅಧಿಕಾರ ಕೊಡಬೇಕು. ಈ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕು’ ಎಂದರು.

‘ಭಾಷಾ ಮಾಧ್ಯಮ ವಿಚಾರ ಕನ್ನಡ ಭಾಷೆಗೊಂದೇ ಸಂಬಂಧಿಸಿದ್ದಲ್ಲ. ಎಲ್ಲ 22 ಭಾಷೆ ಮತ್ತು ರಾಜ್ಯಗಳಿಗೆ ಸಂಬಂಧಪಟ್ಟ ವಿಚಾರವಾಗಿದೆ. ಇದರ ಸಾಧಕ, ಬಾಧಕಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು’ ಎಂದರು.

ಸಚಿವ ಪುಟ್ಟರಂಗ ಶೆಟ್ಟಿ ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸುತ್ತಿದೆಯಲ್ಲ ಎನ್ನುವ ಪ್ರಶ್ನೆಗೆ ‘ಪುಟ್ಟರಂಗ ಯಾಕೆ ರಾಜೀನಾಮೆ ಕೊಡಬೇಕು. ಅದರಲ್ಲಿ ಅವರ ತಪ್ಪೇನಿದೆ. ಹಣ ನೇರವಾಗಿ ಅವರ ಬಳಿ ಸಿಕ್ಕಿದೆಯೇ’ ಎಂದು ಮರು ಪ್ರಶ್ನೆ ಹಾಕಿದರು. ಈ ಕುರಿತು ಎಸಿಬಿ ತನಿಖೆ ನಡೆಯುತ್ತಿದೆ. ಬಳಿಕ ಸತ್ಯ ಗೊತ್ತಾಗುತ್ತದೆ’ ಎಂದರು.

‘ಬಿಜೆಪಿ ಅಧಿಕಾರದಲ್ಲಿದ್ದರೆ ಅವರಿಗೆ ಸಿಬಿಐ ಮೇಲೆ ಭರವಸೆ ಇರುವುದಿಲ್ಲ. ಅಧಿಕಾರದಲ್ಲಿ ಇರದೇ ಇದ್ದಾಗ ಎಸಿಬಿ ಮೇಲೆ ಭರವಸೆ ಇರುವುದಿಲ್ಲ. ಅವರ ಬಗ್ಗೆ ಅವರಿಗೇ ಭರವಸೆ ಇಲ್ಲ. ಮಹದಾಯಿ ಮತ್ತು ಕಳಸಾಬಂಡೂರಿ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕು ಅವರಿಗಿಲ್ಲ’ ಎಂದು ಟೀಕಿಸಿದರು.

ನಿಗಮ ಮಂಡಳಿ ನೇಮಕ ಬಗ್ಗೆ ಪ್ರತಿಕ್ರಿಯಿಸಿ ‘ಕಾಂಗ್ರೆಸ್‌ ಸೂಚಿಸಿದ್ದ ಪಟ್ಟಿಯಲ್ಲಿ ಕೆಲವರನ್ನು ಕೈಬಿಟ್ಟಿದ್ದು ಏಕೆ ಎಂಬುದು ಗೊತ್ತಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿ ಬಳಿ ಮಾತನಾಡುತ್ತೇನೆ’ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ, ಕಾಂಗ್ರೆಸ್‌ ಪ್ರಮುಖರಾದ ಡಾ. ಮಹೇಶ ನಾಲವಾಡ, ಸದಾನಂದ ಡಂಗನವರ, ಅಲ್ತಾಫ್‌ ಕಿತ್ತೂರ, ರಜತ್‌ ಉಳ್ಳಾಗಡ್ಡಿಮಠ ಇದ್ದರು.

ಇವುಗಳನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT