ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿ ದಂಡೆಗಳಲ್ಲಿ ಪ್ರವಾಹದ ಗಡಿ ಗುರುತಿಸಿ

ವಿಧಾನ ಪರಿಷತ್‌ನಲ್ಲಿ ಕೇಳಿಬಂದ ಉಪಯುಕ್ತ ಸಲಹೆ
Last Updated 11 ಅಕ್ಟೋಬರ್ 2019, 20:07 IST
ಅಕ್ಷರ ಗಾತ್ರ

ಬೆಂಗಳೂರು: ನದಿ ಪ್ರವಾಹ ಗಡಿ ಗುರುತಿಸಬೇಕು, ಪ್ರವಾಹದ ಅಂದಾಜಿನಂತೆಯೇ ಸೇತುವೆಗಳನ್ನು ಎತ್ತರಿಸಿಯೇ ನಿರ್ಮಿಸಬೇಕು. ಇದರಿಂದ ಭವಿಷ್ಯದಲ್ಲಿ ನೆರೆ ಹಾವಳಿಯಿಂದ ದೊಡ್ಡ ಪ್ರಮಾಣದ ಅನಾಹುತ ನಿವಾರಿಸಬಹುದು ಎಂಬ ಸಲಹೆ ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಕೇಳಿಬಂತು.

ನೆರೆ ಪರಿಹಾರ ಕುರಿತು ದಿನವಿಡೀ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್‌ ಸದಸ್ಯ ಬಸವರಾಜ ಇಟಗಿ,ರಾಜ್ಯದಲ್ಲಿ 105 ವರ್ಷಗಳ ಬಳಿಕ ದೊಡ್ಡ ನೆರೆ ಬಂದಿದೆ. 2005 ಮತ್ತು 2009ರಲ್ಲಿ ಸಂಭವಿಸಿದ ನೆರೆ ಹಾವಳಿ ನಮ್ಮ ಕಣ್ಣ ಮುಂದಿದೆ. ಇದನ್ನು ನೋಡಿಕೊಂಡು ಭವಿಷ್ಯದ ಅನಾಹುತಗಳನ್ನು ತಪ್ಪಿಸಲು ನದಿ ಪ್ರವಾಹ ಗಡಿ ಗುರುತಿಸುವಂತಹ ಕೆಲಸ ಶೀಘ್ರ ನಡೆಸಬೇಕು ಎಂದರು.

ಈ ಮೊದಲು ಗ್ರಾಮ ಕರಣಿಕರು ಚೆಕ್ ಜೇಬಲ್ಲಿ ಇಟ್ಟುಕೊಂಡು ಬೇಕಾದವರಿಗೆ ಬೇಕಾದಂತೆ ಪರಿಹಾರ ನೀಡುವ ವ್ಯವಸ್ಥೆ ಇದ್ದುದನ್ನು ಅವರು ತಿಳಿಸಿದರು. ಆಗ ಮಧ್ಯ ಪ್ರವೇಶಿಸಿದ ಕಂದಾಯ ಸಚಿವ ಆರ್. ಅಶೋಕ್, ಆರ್‌ಟಿಜಿಎಸ್‌ ಮೂಲಕ ನೆರೆ ಪರಿಹಾರ ನೀಡುತ್ತಿರುವುದನ್ನು ತಿಳಿಸಿದರು. ಇದಕ್ಕೆ ಎಲ್ಲ ಸದಸ್ಯರಿಂದ ಮೆಚ್ಚುಗೆ ವ್ಯಕ್ತವಾಯಿತು.

ಬೆಳಿಗ್ಗೆ 11.15ಕ್ಕೆ ಆರಂಭವಾದ ಕಲಾಪ ನೆರೆ ಹಾವಳಿ ಬಗ್ಗೆ ಗಂಭೀರ ಚರ್ಚೆಗೆ ವೇದಿಕೆ ಒದಗಿಸಿತು. ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಠೋಡ್ ಅವರು ಮೊದಲಿಗೆ ಚರ್ಚೆ ಆರಂಭಿಸಿ ನೆರೆಯಿಂದ ₹ 1 ಲಕ್ಷ ಕೋಟಿಯಷ್ಟು ಹಾನಿಯಾಗಿದೆ ಎಂದರು. ಇಷ್ಟು ಹಾನಿಯಾಗಿದ್ದರೆ ಅದರ ವಿವರ ಕೊಡಿ ಎಂದು ಸಚಿವ ಸಿ.ಟಿ.ರವಿ ಹೇಳಿದ್ದು ಕೆಲ ಹೊತ್ತು ಬಿಸಿ ಬಿಸಿ ಮಾತಿನ ವರಸೆಗೆ ಕಾರಣವಾಯಿತು.

ಬಳಿಕ ಎನ್ ಎಸ್ ಬೋಸರಾಜು, ಕೆ.ಟಿ.ಶ್ರೀಕಂಠೇಗೌಡ, ಸುನಿಲ್ ಸುಬ್ರಹ್ಮಣ್ಯ, ಬಸವರಾಜ ಇಟಗಿ ಅವರು ನೆರೆ ಬಗ್ಗೆ ಮಾತನಾಡಿದರು. ಭೋಜನ ವಿರಾಮದ ಬಳಿಕ ಮಹಾಂತೇಶ ಕವಟಗಿಮಠ, ಆರ್‌. ಬಿ. ತಿಮ್ಮಾಪುರ, ಎನ್‌. ರವಿಕುಮಾರ್‌, ಜಯಮಾಲಾ, ಕೆ.ತಿಪ್ಪೇಸ್ವಾಮಿ, ತಿಪ್ಪಣ್ಣ, ಮರಿತಿಬ್ಬೇಗೌಡ, ಎಸ್‌.ಎಲ್‌. ಘೋಟ್ನೇಕರ್‌, ವೀಣಾ ಅಚ್ಚಯ್ಯ, ಅಪ್ಪಾಜಿ ಗೌಡ, ಜಯಮ್ಮ, ಅಲ್ಲಂ ವೀರಭದ್ರಪ್ಪ ಮೊದಲಾದವರು ಮಾತನಾಡಿದರು.

ಬೋಗಸ್‌ ವರದಿ: ಪ್ರಕಾಶ್‌ ರಾಠೋಡ್‌ ಅವರು ಸದನಕ್ಕೆ ಸಲ್ಲಿಸಿದ ಕೆಪಿಸಿಸಿ ಸಿದ್ಧಪಡಿಸಿದ ನೆರೆ ಹಾವಳಿ ಕುರಿತ ವರದಿ ‘ಬೋಗಸ್‌’ ಎಂದು ಬಿಜೆಪಿಯ ಎನ್‌.ರವಿಕುಮಾರ್‌ ಹೇಳಿದ ಮಾತು ಸದನದಲ್ಲಿ ಕಾವೇರಿದ ಚರ್ಚೆಗೆ ಕಾರಣವಾಯಿತು.

‘ಸರ್ಕಾರವೇ ಸಿದ್ಧಪಡಿಸಿದ ವರದಿಯಲ್ಲಿ 22 ಲಕ್ಷ ಎಕರೆ ಕೃಷಿ ಭೂಮಿಗೆ ಹಾನಿ ಎಂದು ತಿಳಿಸಲಾಗಿದೆ. ಕೆಪಿಸಿಸಿ ಸಿದ್ಧಪಡಿಸಿದ ವರದಿಯಲ್ಲೂ ಬಹುತೇಕ ಇಷ್ಟೇ ಮೊತ್ತದ ನಷ್ಟದ ಬಗ್ಗೆ ಉಲ್ಲೇಖಿಸಲಾಗಿದೆ’ ಎಂದು ಹೇಳಿದ ವಿರೋಧ ಪಕ್ಷದ ನಾಯಕ ಎಸ್‌. ಆರ್‌. ಪಾಟೀಲ ಅವರು, ರವಿಕುಮಾರ್ ಅವರ ಮಾತಿಗೆ ತಿರುಗೇಟು ನೀಡಿದರು. ಐವನ್‌ ಡಿಸೋಜ, ಎಚ್‌. ಎಂ. ರೇವಣ್ಣ, ಪ್ರಕಾಶ್ ರಾಠೋಡ್‌ ಸಹಿತ ಹಲವು ಸದಸ್ಯರು ಮುಗಿಬಿದ್ದರು. ಸದನದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ರವಿಕುಮಾರ್‌ ಅವರನ್ನು ಸಮರ್ಥಿಸಲು ಯತ್ನಿಸಿದರೂ ಅದಕ್ಕೆ ಬಲ ಸಿಗಲಿಲ್ಲ. ಆಗ ಸಭಾಪತಿ ಪೀಠದಲ್ಲಿ ತೇಜಸ್ವಿನಿ ಗೌಡ ಇದ್ದರು.

ಪ್ರತಿಧ್ವನಿಸಿದ ಕೀ ಉತ್ತರ ದೋಷ

ಶ್ರೀಕಂಠೇಗೌಡ ಅವರು ಪಿಯು ಉಪನ್ಯಾಸಕರ ನೇಮಕಾತಿಗಾಗಿ ನಡೆದ ಪರೀಕ್ಷೆಯ ಕೀ ಉತ್ತರದಲ್ಲೇ ದೋಷ ಇರುವ ವಿಚಾರ ಪ್ರಸ್ತಾಪಿಸಿ, ಯಾರಿಗೂ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು.

ಎಸ್‌. ವಿ. ಸಂಕನೂರ ಅವರು ಕಾರವಾರದಲ್ಲಿ ಅನುದಾನಿತ ಶಾಲಾ– ಕಾಲೇಜುಗಳ ಶಿಕ್ಷಕರ ಸಂಘದವರು ನಡೆಸುತ್ತಿರುವ ಧರಣಿ ಕುರಿತು ಪ್ರಸ್ತಾಪಿಸಿದರು.ಅಪ್ಪಾಜಿ ಗೌಡ ಅವರು ಸೈಬರ್ ಅಪರಾಧ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಉತ್ತರ ಬಯಸಿದರು. ಸಚಿವ
ರಿಂದ ಉತ್ತರ ಕೊಡಿಸುವುದಾಗಿ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸದನದಲ್ಲಿ ಕೇಳಿಬಂದ ಸಲಹೆಗಳು

*ಪ್ರವಾಹ ತಡೆಗಟ್ಟಲು ನೀರು ನಿರ್ವಹಣಾ ಸಮಿತಿ ರಚಿಸಿ, ತೆಲಂಗಾಣವನ್ನೂ ಅದರಲ್ಲಿ ಸೇರಿಸಿ

*ಆಲಮಟ್ಟಿ ಆಣೆಕಟ್ಟೆಯ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಲು ಕ್ರಮ ಕೈಗೊಳ್ಳಿ

*ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿ 25 ಟಿಎಂಸಿ ಅಡಿ ನೀರು ವ್ಯರ್ಥವಾಗುತ್ತಿದ್ದು, ಅದಕ್ಕೆ ಕ್ರಮ ಅಗತ್ಯ

*ದೇವದುರ್ಗದಲ್ಲಿ ನೆರೆ ಹಾವಳಿಯಿಂದ ಬಸ್ ಸೌಕರ್ಯ ಇಲ್ಲದೆ ಮಕ್ಕಳ ಶಿಕ್ಷಣಕ್ಕೆ ಧಕ್ಕೆಯಾಗಿದೆ, ಸರಿಪಡಿಸಿ

*ಕೊಡಗಿನಲ್ಲಿಮನೆ ನಿರ್ಮಾಣಕ್ಕೆ ನೀಡುವ ಪರಿಹಾರವನ್ನು ಇತರ ಜಿಲ್ಲೆಗಳಿಗೂ ವಿಸ್ತರಿಸಿ

*ರೈತರ ಸಾಲಮನ್ನಾ ಹಣ ಬಾಕಿಯನ್ನು ಶೀಘ್ರ ಸಹಕಾರ ಬ್ಯಾಂಕ್‌ಗಳಿಗೆ ಸಂದಾಯ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT