ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಡೆಮಿಗಳು ಸ್ವಾಯತ್ತೆ ಉಳಿಸಿಕೊಳ್ಳಲಿ: ಪ್ರಜಾವಾಣಿ ಕ್ಲಬ್‌ಹೌಸ್‌ನಲ್ಲಿ ವಿಮರ್ಶೆ

Last Updated 1 ಆಗಸ್ಟ್ 2021, 13:35 IST
ಅಕ್ಷರ ಗಾತ್ರ

ಆಲದಮರ (ಪ್ರಜಾವಾಣಿ ಕ್ಲಬ್‌ ಹೌಸ್‌): ‘ಅಕಾಡೆಮಿಗಳಿಗೆ ಸ್ವಾಯತ್ತತೆ ಇದೆ. ಈ ಹಿನ್ನೆಲೆಯಲ್ಲಿ ಅದರ ಸ್ವರೂಪ ಮತ್ತು ಕಾರ್ಯಶೈಲಿಯಲ್ಲಿ ಬದಲಾವಣೆಯಾಗಬೇಕಿದೆ. ಅಧ್ಯಕ್ಷರು, ಸದಸ್ಯರು ಈ ನಿಟ್ಟಿನಲ್ಲಿ ಗಟ್ಟಿಯಾಗಿ ನಿಂತರೆ ಯಾವ ಸರ್ಕಾರವೂ ಮೂಗು ತೂರಿಸುವುದಿಲ್ಲ’

ಇಂತಹ ಒಕ್ಕೊರಲಿನ ಅಭಿಪ್ರಾಯ ಮಾರ್ದನಿಸಿದ್ದು, ‘ಪ್ರಜಾವಾಣಿ’ ಕ್ಲಬ್‌ ಹೌಸ್‌ನ ‘ಆಲದಮರ’ದ ಕಟ್ಟೆಯ ಕೆಳಗೆ. ನೂರಾರು ಕೇಳುಗರು ಇದಕ್ಕೆ ಕಿವಿಯಾದರು. ಅಕಾಡೆಮಿಗಳಿಗೆ ನೇಮಕದ ವಿಚಾರದಲ್ಲಿ ಲಿಂಗ ಅಸಮಾನತೆ ಉಂಟಾಗಿರುವುದೂ ಚರ್ಚೆಯ ಕಾವೇರಿಸಿತು.

‘ಇತ್ತೀಚೆಗೆ ಅಕಾಡೆಮಿಗಳ ಮೌಲ್ಯ ಕುಸಿದಿದೆ. ಅಲ್ಲಿ ಅಧಿಕಾರದ ‘ಮೊಳಕೆ’ ಇರುತ್ತದೆ. ಮತ್ತೊಂದೆಡೆ ಅಕಾಡೆಮಿಗಳು ಸರ್ಕಾರಿ ಇಲಾಖೆಗಳ ಅಂಗಸಂಸ್ಥೆಗಳಾಗಿವೆ. ಸರ್ಕಾರದ ಲೋಗೊ ಬಳಸಿ ಕೆಲಸ ಮಾಡುವುದನ್ನು ಬಿಡಬೇಕು. ಅಧಿಕಾರಶಾಹಿ ಕೂಡ ಅವುಗಳ ಮೇಲೆ ಸವಾರಿ ಮಾಡಬಾರದು. ಸ್ವಾಯತ್ತವಾಗಿ ಕೆಲಸ ಮಾಡಲು ಬಿಡಬೇಕು’ ಎಂದು ಚರ್ಚೆಗೆ ಪೀಠಿಕೆ ಹಾಕಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ವಿಶುಕುಮಾರ್‌.

ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ. ವಸಂತಕುಮಾರ್‌, ‘ಅಕಾಡೆಮಿಗಳಿಗೆ ನೇಮಕವಾಗುವವರು ಪಕ್ಷದ ಕಾರ್ಯಕರ್ತರಲ್ಲ. ಅವು ರಾಜಕೀಯ ಪುನರ್ವಸತಿ ಕೇಂದ್ರಗಳೂ ಅಲ್ಲ. ಅಧ್ಯಕ್ಷ, ಸದಸ್ಯರ ಕಾರ್ಯಶಕ್ತಿಯನ್ನು ದುರ್ಬಲಗೊಳಿಸುವುದು ಕಾರ್ಯಸಾಧುವಲ್ಲ. ಅವರು ಹಾದಿ ತಪ್ಪಿದಾಗ ಸರಿದಾರಿ ತೋರಿಸುವ ಕೆಲಸ ಮಾಡಬಹುದು. ಸಂಸ್ಕೃತಿ ಕಟ್ಟುವುದು ಎಂದರೆ ಕಟ್ಟಡ ಕಟ್ಟುವುದಲ್ಲ. ಜನರ ಹೃದಯ ಸಂಸ್ಕೃತಿ ಕಟ್ಟುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಶಾಹಿಯ ಮನೋಭಾವವೂ ಬದಲಾಗಬೇಕಿದೆ’ ಎಂದು ಪ್ರತಿಪಾದಿಸಿದರು.

‘ಪ್ರಸ್ತುತ ಎಡ–ಬಲ ಎಂಬುದು ರಹಸ್ಯವಾಗಿ ಉಳಿದಿಲ್ಲ. ಜನರಿಂದಲೇ ಸರ್ಕಾರ ರಚನೆಯಾಗುತ್ತದೆ. ಹಾಗಾಗಿ, ಅದು ಜನರ ಶತ್ರುವಲ್ಲ. ಅಧ್ಯಕ್ಷರು, ಸದಸ್ಯರು ಅಧಿಕಾರದಿಂದ ಕೆಳಗಿಳಿದ ಬಳಿಕ ಅವರ ಕಾರ್ಯವೈಖರಿಯ ಮೌಲ್ಯಮಾಪನವಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಸರ್ಕಾರ ಬದಲಾದ ತಕ್ಷಣ ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರನ್ನು ಬದಲಾಯಿಸುವ ಪ್ರವೃತ್ತಿಗೆ ಕೊನೆಯಾಗಬೇಕಿದೆ ಎಂಬ ಅಭಿಪ್ರಾಯವ್ಯಕ್ತವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಅಜಕ್ಕಳ ಗಿರೀಶ್‌ ಭಟ್‌, ‘ಸರ್ಕಾರದ ಇಂತಹ ನಡೆಯಿಂದ ಅಕಾಡೆಮಿಗಳ ಯೋಜನೆಗಳು ಅಪೂರ್ಣವಾಗುತ್ತವೆ. ಅದರ ಮೂಲ ಆಶಯವೇ ಮೂಲೆಗೆ ಸರಿಯುತ್ತದೆ’ ಎಂದು ಎಚ್ಚರಿಸಿದರು.

ಸರ್ಕಾರ, ಅಧಿಕಾರಶಾಹಿಯ ಹಸ್ತಕ್ಷೇಪದ ಬಗ್ಗೆ ಸಾಹಿತಿ ಎಲ್‌.ಎನ್‌. ಮುಕುಂದರಾಜ್‌ ಆಕ್ಷೇಪ ವ್ಯಕ್ತಪಡಿಸಿದರು. ‘ಪರಂಪರೆಯ ಜೊತೆಗೆ ಅನುಸಂಧಾನ ನಡೆಸುವುದು ಅಕಾಡೆಮಿಗಳ ಕೆಲಸವಾಗಬೇಕು. ಇದರಲ್ಲಿ ಅಧಿಕಾರಸ್ಥರು ಮೂಗು ತೂರಿಸಬಾರದು. ಸರ್ಕಾರದ ಸೈದ್ಧಾಂತಿಕ ನಿಲುವು ಯಾವುದೇ ಇದ್ದರೂ ಅಕಾಡೆಮಿಗಳ ಕಾರ್ಯ ವ್ಯಾಪ್ತಿಗೆ ಕೈಹಾಕಬಾರದು’ ಎಂದು ಆಶಿಸಿದರು.

ಅಕಾಡೆಮಿಗಳಿಗೆ ಸದಸ್ಯರ ಆಯ್ಕೆಯಲ್ಲೂ ಲಿಂಗತ್ವ ಅಸಮಾನತೆ ಇರುವುದರ ಬಗ್ಗೆ ಪತ್ರಕರ್ತೆ ಪ್ರೀತಿ ನಾಗರಾಜ್‌ ಚಾಟಿ ಬೀಸಿದರು. ಇದಕ್ಕೆ ಅವರು ಇತ್ತೀಚೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನಡೆದ ನೇಮಕವನ್ನು ಉದಾಹರಿಸಿದರು. ‘ಅಕಾಡೆಮಿಗಳು ಸಾಮಾನ್ಯರ ಧ್ವನಿಯಾಗಬೇಕಿದೆ. ಆದರೆ, ಮಹಿಳಾ ಪ್ರಾತಿನಿಧ್ಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಅಕ್ಷಮ್ಯ. ಇದಕ್ಕೆ ಕೊನೆ ಇಲ್ಲವೇ’ ಎಂದು ಪ್ರಶ್ನಿಸಿದರು.

ಸಾಹಿತಿಗಳಾದ ಕೃಷ್ಣೇಗೌಡ ಟಿ.ಎಲ್‌., ಆಕೃತಿ ಗುರುಪ್ರಸಾದ್‌, ಡಿ.ಎಸ್. ಚೌಗಲೆ, ರೇಣುಕಾರಾಧ್ಯ, ಪಿಚ್ಚಳ್ಳಿ ಶ್ರೀನಿವಾಸ್‌, ಆರ್‌.ಜಿ. ಹಳ್ಳಿ ನಾಗರಾಜ್‌ ಸೇರಿದಂತೆ ಹಲವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರು ಸಾಂಸ್ಕೃತಿಕ ಕೇಂದ್ರಗಳು ರಾಜಕೀಯ ಪುನರ್ವಸತಿ ಕೇಂದ್ರಗಳಾಗುತ್ತಿರುವ ಬಗ್ಗೆ ಗಮನ ಸೆಳೆದರು. ‘ಅಕಾಡೆಮಿಗಳ ಸ್ವಾಯತ್ತತೆ ಕಾಪಾಡುವಲ್ಲಿ ಜಿ.ಎಸ್‌. ಶಿವರುದ್ರ‍ಪ್ಪ ಅಗ್ರಪಂಕ್ತಿ ಹಾಕಿಕೊಟ್ಟಿದ್ದಾರೆ. ರಾಜಕಾರಣಿಗಳು ತಮಗೆ ಸಂಸ್ಕೃತಿ, ಭಾಷೆ ಬಗ್ಗೆ ಅಪಾರ ಜ್ಞಾನವಿದೆ ಎಂದುಕೊಂಡಿರುತ್ತಾರೆ. ಕಲ್ಚರಲ್‌ ಸೆಂಟರ್‌ಗಳಲ್ಲಿಅವರು ಸಾಂಸ್ಕೃತಿಕ ಪುನರ್ವಸತಿ ಪಡೆಯುತ್ತಾರೆ.ಇಂತಹ ಸೆಂಟರ್‌ಗಳಿಗೆ ಸಾವಿರಾರು ಕೋಟಿ ಹಣವೂ ಸಿಗುತ್ತದೆ. ಆದರೆ, ಅಕಾಡೆಮಿಗಳು ಅತ್ಯಂತ ಕಡಿಮೆ ಹಣ ಪಡೆಯುತ್ತಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT