ಬೆಂಗಳೂರು: ನದಿ ನೀರನ್ನು ಕೃಷಿಗೆ ಬಳಸುವುದು ಎರಡನೇ ಆದ್ಯತೆಯಾಗಬೇಕು. ಕುಡಿಯಲು ಬಳಸುವುದೇ ಮೊದಲ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ನಿಯಮ ರೂಪಿಸಬೇಕು ಎಂದು ಅಸ್ಸಾಂ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ. ಶ್ರೀಧರ್ ರಾವ್ ಸಲಹೆ ನೀಡಿದರು.
ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾದ ಬೆಂಗಳೂರು ಚಾಪ್ಟರ್ ಗುರುವಾರ ಹಮ್ಮಿಕೊಂಡಿದ್ದ ‘ಜಲ ನಿರ್ವಹಣೆ: ಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳು’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
18ನೇ ಶತಮಾನದಲ್ಲಿ ಬೆಂಗಳೂರು ಸುತ್ತಮುತ್ತ ಸಾವಿರ ಕೆರೆಗಳು ಇದ್ದವು. ಅಭಿವೃದ್ಧಿಯ ಹೆಸರಲ್ಲಿ ಹಲವು ಕೆರೆಗಳು ಮುಚ್ಚಿಹೋಗಿವೆ. ಉಳಿದಿರುವ ಕೆರೆಗಳನ್ನೂ ಒತ್ತುವರಿ ಮಾಡಲಾಗಿದೆ. ಬೆಳ್ಳಂದೂರು ಸಹಿತ ಹಲವು ಕೆರೆಗಳಿಗೆ ರಾಸಾಯನಿಕ ಸೇರಿ, ಆ ಕೆರೆಗಳ ನೀರನ್ನು ಬಳಕೆ ಮಾಡುವುದು ಕಷ್ಟವಾಗಿದೆ. ಕೆರೆ ಸಂರಕ್ಷಿಸುವುದರ ಜೊತೆಗೆ ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ನೀರಿನ ಸಮಸ್ಯೆ ನೀಗಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸತತ ಮೂರು ವರ್ಷ ಬರಗಾಲ ಇತ್ತು. ಆದರೂ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿರಲಿಲ್ಲ. ಆಗ ನಗರದ ಜನಸಂಖ್ಯೆ 40 ಲಕ್ಷದ ಒಳಗೆ ಇದ್ದುದು ಅದಕ್ಕೆ ಕಾರಣ. ಈಗ ಜನಸಂಖ್ಯೆ 1.5 ಕೋಟಿ ದಾಟಿದೆ. ಆದರೆ, ಜಲಮೂಲಗಳು ಹೆಚ್ಚಾಗಿಲ್ಲ ಎಂದು ವಿವರಿಸಿದರು.
ದೇಶದ ವಿವಿಧ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ವಾತಾವರಣ ಬದುಕಲು ಯೋಗ್ಯವಾಗಿದೆ. ಜೊತೆಗೆ ಇಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಐಟಿ ಕ್ಷೇತ್ರ ಮಾತ್ರವಲ್ಲ, ಹೋಟೆಲ್‌ನಿಂದ ಹಿಡಿದು ಸಲೂನ್‌ವರೆಗೆ ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಉದ್ಯೋಗಾವಕಾಶವಿದೆ. ಈ ಕಾರಣದಿಂದಾಗಿ ದೇಶದ ಎಲ್ಲ ಕಡೆಯಿಂದ ಜನರು ಇಲ್ಲಿಗೆ ಬರುತ್ತಿದ್ದಾರೆ. ಪಶ್ಚಿಮ ಬಂಗಾಳವೊಂದರಿಂದಲೇ ಇಲ್ಲಿಗೆ ಬಂದವರ ಸಂಖ್ಯೆ 15 ಲಕ್ಷ ಇದೆ. ಈ ಪ್ರಮಾಣದಲ್ಲಿ ವಲಸೆ ಬಂದಾಗ ಮೂಲಸೌಕರ್ಯಗಳ ಕೊರತೆಯಾಗುತ್ತದೆ. ನೀರಿನ ಕೊರತೆಯೂ ಉಂಟಾಗುತ್ತದೆ ಎಂದು ವಿಶ್ಲೇಷಿಸಿದರು.
ಬೆಂಗಳೂರಿನಂತೆ ರಾಜ್ಯದ ಎರಡನೇ ಸ್ತರದ ನಗರಗಳನ್ನು ಬೆಳೆಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಉಳಿದ ನಗರಗಳು ಬೆಳೆದಿದ್ದರೆ ವಲಸಿಗರು ಒಂದೇ ಕಡೆ ಕೇಂದ್ರೀಕೃತವಾಗುವುದು ತಪ್ಪುತ್ತಿತ್ತು. ಈಗಿನ ಅಧ್ಯಯನದ ಪ್ರಕಾರ ಮುಂದಿನ ವರ್ಷವೂ ಬರ ಮುಂದುವರಿಯಲಿದೆ. ಹಾಗಾಗಿ ಐಟಿ ಎಂಜಿನಿಯರ್‌ಗಳ ಸಹಿತ ವಿವಿಧ ಕ್ಷೇತ್ರಗಳ ಉದ್ಯೋಗಿಗಳಿಗೆ ‘ವರ್ಕ್ ಫ್ರಂ ಹೋಂ’ ಅವಕಾಶ ನೀಡಬೇಕು. ಉದ್ಯೋಗಿಗಳು ತಮ್ಮ ಊರಿನಿಂದಲೇ ಕೆಲಸ ಮಾಡುವಂತೆ ವ್ಯವಸ್ಥೆ ರೂಪಿಸಬೇಕು‘ ಎಂದು ಅಭಿಪ್ರಾಯಪಟ್ಟರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ. ಕೃಷ್ಣಭಟ್ ಮಾತನಾಡಿ, ‘ಇಸ್ರೇಲ್‌ನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ತ್ಯಾಜ್ಯ ನೀರನ್ನು ಪರಿಣಾಮಕಾರಿಯಾಗಿ ಸಂಸ್ಕರಿಸಿ ಮರುಬಳಕೆ ಮಾಡಲಾಗುತ್ತಿದೆ. ಇಂಥ ಕ್ರಮಗಳು ನಮ್ಮಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಬದಲಾಗಿ ಟ್ಯಾಂಕ್‌ಗಳಲ್ಲಿರುವ ನೀರು ಗ್ರಾಹಕನಿಗೆ ತಲುಪುವ ಮೊದಲು ಸೋರಿಕೆಯಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾದ ಬೆಂಗಳೂರು ಚಾಪ್ಟರ್ ಅಧ್ಯಕ್ಷ ರಾಮಕೃಷ್ಣ ಎಚ್.ಎಲ್., ಗೌರವಾಧ್ಯಕ್ಷ ಎಂ.ಬಿ. ಜಯರಾಮ್, ರಾಷ್ಟ್ರೀಯ ಅಧ್ಯಕ್ಷೆ ಗೀತಾ ಶಂಕರ್, ನಿರ್ದೇಶಕ ಎಸ್.ಟಿ. ರಾಮಚಂದ್ರ, ವೈಸಿಸಿ ಅಧ್ಯಕ್ಷ ಚಿನ್ಮಯ ಪ್ರವೀಣ್, ಕಾರ್ಯದರ್ಶಿ ಆನಂದ ಗೋಪಾಲ್, ನಿವೃತ್ತ ಐಎಎಸ್ ಅಧಿಕಾರಿ ಜೈರಾಜ್ ಕೆ., ಪರಿಸರವಾದಿ ಸುರೇಶ್ ಹೆಬ್ಳೀಕರ್, ನಿವೃತ್ತ ಡಿಜಿ ಎಚ್.ಎಸ್.ಎಂ. ಪ್ರಕಾಶ್, ನಿವೃತ್ತ ಎಡಿಜಿಗಳಾದ ಎಂ.ಎಂ. ಸ್ವಾಮಿ, ಎನ್.ಆರ್. ರಮೇಶ್, ಭೂವಿಜ್ಞಾನ ಪ್ರಾಧ್ಯಾಪಕ ಬಿ.ಸಿ ಪ್ರಭಾಕರ್, ನಿವೃತ್ತ ಕುಲಪತಿ ಕೆ.ಆರ್. ವೇಣುಗೋಪಾಲ್, ಭೂವಿಜ್ಞಾನಿ ಕೆ.ಎನ್. ರಾಧಿಕಾ, ಬಿಎಂಆರ್‌ಸಿಎಲ್ ಮಾಹಿ ಭೂ ವಿಜ್ಞಾನಿ ಫರೀದುದ್ದೀನ್, ಎಚ್‌ಜಿಎಂಎಲ್ ನಿರ್ದೇಶಕ ಪ್ರಭಾಕರ್ ಸಂಗೂರ್‌ಮಠ್, ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜು ಉಪಪ್ರಾಂಶುಪಾಲ ಎಚ್.ಕೆ. ರಾಮರಾಜು ಸಂವಾದ ನಡೆಸಿದರು.
* ಜನಸಂಖ್ಯೆ ಹೆಚ್ಚಿದೆ, ಜಲಮೂಲಗಳು ಹೆಚ್ಚಾಗಿಲ್ಲ
* ಎರಡನೇ ಸ್ತರದ ನಗರಗಳು ಅಭಿವೃದ್ಧಿಯಾಗಲಿ
* ನೀರು ಸಂಸ್ಕರಣೆಗೆ ಪರಿಣಾಮ ತಂತ್ರಜ್ಞಾನ ಅಗತ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.