ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್ಲ ರಾಜ್ಯಗಳಿಗೂ ‘ಶಕ್ತಿ’ ಬರಲಿ: ಅನಂತ ಸುಬ್ಬರಾವ್‌

ಎನ್‌ಎಫ್‌ಐಆರ್‌ಟಿಡಬ್ಲ್ಯು 18ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಅನಂತ ಸುಬ್ಬರಾವ್‌
Published : 23 ಸೆಪ್ಟೆಂಬರ್ 2024, 22:31 IST
Last Updated : 23 ಸೆಪ್ಟೆಂಬರ್ 2024, 22:31 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯದಲ್ಲಿ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿರುವ ‘ಶಕ್ತಿ’ ಯೋಜನೆ ದೇಶದ ಎಲ್ಲ ರಾಜ್ಯಗಳಲ್ಲಿಯೂ ಜಾರಿಗೆ ಬರಬೇಕು. ಅದಕ್ಕಾಗಿ ಸಾರಿಗೆ ನೌಕರರ ರಾಷ್ಟ್ರೀಯ ಸಂಘಟನೆ  ಆಯಾ ರಾಜ್ಯಗಳಲ್ಲಿ ಹೋರಾಟ ನಡೆಸಲಿದೆ ಎಂದು ಎನ್‌ಎಫ್‌ಐಆರ್‌ಟಿಡಬ್ಲ್ಯು ಅಧ್ಯಕ್ಷ ಎಚ್‌.ವಿ. ಅನಂತ ಸುಬ್ಬರಾವ್‌ ತಿಳಿಸಿದರು.

ನ್ಯಾಷನಲ್‌ ಫೆಡರೇಷನ್‌ ಆಫ್‌ ಇಂಡಿಯನ್‌ ರೋಡ್‌ ಟ್ರಾನ್ಸ್‌ಪೋರ್ಟ್‌ ವರ್ಕರ್ಸ್‌ (ಎನ್‌ಎಫ್‌ಐಆರ್‌ಟಿಡಬ್ಲ್ಯು) 18ನೇ ರಾಷ್ಟ್ರೀಯ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ನಾಲ್ಕು ನಿಗಮಗಳ ಬಸ್‌ಗಳಲ್ಲಿ ನಿತ್ಯ ಸರಾಸರಿ 62.5 ಲಕ್ಷ ಮಹಿಳೆಯರು ಸಂಚರಿಸುತ್ತಿದ್ದಾರೆ. ಕರ್ನಾಟಕದಲ್ಲಿ ಯಶಸ್ವಿಯಾದ ಯೋಜನೆಯನ್ನು ಬೇರೆ ರಾಜ್ಯಗಳಲ್ಲಿ ಏಕೆ ಅನುಷ್ಠಾನಗೊಳಿಸಬಾರದು ಎಂದು ಪ್ರಶ್ನಿಸಿದರು.

ಸಮ್ಮೇಳನವನ್ನು ಉದ್ಘಾಟಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ‘ಸೈನಿಕರು ಮೃತಪಟ್ಟರೂ ₹60 ಲಕ್ಷ ಮಾತ್ರ ಸಿಗುತ್ತದೆ. ನಮ್ಮ ಸಾರಿಗೆ ನಿಗಮಗಳ ನೌಕರರು ಅಪಘಾತದಲ್ಲಿ ಮೃತಪಟ್ಟರೆ ₹1 ಕೋಟಿ ವಿಮೆ ಸಿಗುವಂತೆ ಮಾಡಿದ್ದೇವೆ. ಅಪಘಾತವಲ್ಲದ ಕಾರಣಕ್ಕೆ ಮೃತಪಟ್ಟರೆ ₹10 ಲಕ್ಷ, ಅಪಘಾತದಲ್ಲಿ ಪ್ರಯಾಣಿಕರು ಮೃತಪಟ್ಟರೆ ₹10 ಲಕ್ಷ ಪರಿಹಾರ ನೀಡಲಾಗುತ್ತಿದೆ. ನೌಕರರ ಹೃದಯ ತಪಾಸಣೆ, ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಸಾರಿಗೆ ನಿಗಮಗಳ ಬಸ್‌ಗಳು ದಿನಕ್ಕೆ 1.65 ಲಕ್ಷ ಟ್ರಿಪ್‌ ಮಾಡುತ್ತವೆ. ವಿರೋಧ ಪಕ್ಷದವರು ಅಧಿಕಾರದಲ್ಲಿ ಇರುವಾಗ ಹೊಸ ಬಸ್‌ ಖರೀದಿ ಮಾಡಲಿಲ್ಲ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಿಲ್ಲ ಎಂದು ಟೀಕಿಸಿದರು.

ನಿಗಮದ ನೌಕರರ ಬೇಡಿಕೆಗಳನ್ನು ಈಡೇರಿಸಲಾಗುವುದು. ಅಲ್ಲದೇ ವಾಣಿಜ್ಯ ಸಾರಿಗೆ ನಡೆಸುವ ಟ್ಯಾಕ್ಸಿ, ಆಟೊ ಸಹಿತ ಖಾಸಗಿ ವಾಹನಗಳ ನೌಕರರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.

‘ನಿಗಮಗಳ ಖಾಸಗೀಕರಣಕ್ಕೆ ಕೇಂದ್ರ ಯತ್ನ’

‘ಎಲೆಕ್ಟ್ರಿಕ್‌ ಬಸ್‌ಗೆ ₹2 ಕೋಟಿ ಇದೆ. ಫೇಮ್‌ ಯೋಜನೆ ರೂಪಿಸಿರುವ ಕೇಂದ್ರ ಸರ್ಕಾರವು ಈ ಬಸ್‌ಗಳ ಖರೀದಿಗೆ ₹ 45 ಲಕ್ಷ ಸಹಾಯಧನ ನೀಡುತ್ತಿದೆ. ಆದರೆ ಈ ಸಹಾಯಧನವನ್ನು ನಿಗಮಗಳಿಗೆ ನೀಡದೇ ಖಾಸಗಿಯವರಿಗೆ ಮಾತ್ರ ನೀಡುವ ಮೂಲಕ ಖಾಸಗೀಕರಣಕ್ಕೆ ಮುಂದಾಗಿದೆ’ ಎಂದು ಎಚ್‌.ವಿ. ಅನಂತ ಸುಬ್ಬರಾವ್‌ ಆರೋಪಿಸಿದರು. ‘ಲಕ್ಷಾಂತರ ಜನರಿಗೆ ಸಾರಿಗೆ ನಿಗಮಗಳು ಉದ್ಯೋಗ ನೀಡಿವೆ. ಕಾರ್ಮಿಕರ ಹಿತವನ್ನು ಕಾಪಾಡಿಕೊಂಡು ಬಂದಿವೆ. ಅವುಗಳನ್ನು ಖಾಸಗೀಕರಣಗೊಳಿಸಲು ರಸ್ತೆ ಸಾರಿಗೆ ಸುರಕ್ಷತಾ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿಯೇ ರೂಪಿಸಿತ್ತು. ಹೋರಾಟದ ಮೂಲಕ ಆಗ ಹಿಮ್ಮೆಟ್ಟಿಸಿದ್ದೆವು. ಈಗ ಫೇಮ್‌ ಯೋಜನೆಯ ಮೂಲಕ ಬೇರೆ ದಾರಿಯಲ್ಲಿ ಖಾಸಗೀಕರಣಕ್ಕೆ ಮುಂದಾಗಿದೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT