ಬೆಂಗಳೂರು: ‘ದೇವಸ್ಥಾನಗಳಲ್ಲಿ ನಮ್ಮ ದೇವರನ್ನು ನಮ್ಮ ಭಾಷೆಯಲ್ಲಿ ಪೂಜೆ ಮಾಡುವ ಅವಕಾಶಕ್ಕಾಗಿ ಅಭಿಯಾನ, ಚಳವಳಿ ನಡೆಯಬೇಕು’ ಎಂದು ಜಾನಪದ ವಿದ್ವಾಂಸ ಹಿ.ಚಿ. ಬೋರಲಿಂಗಯ್ಯ ಹೇಳಿದರು.
‘ಅಖಿಲ ಕರ್ನಾಟಕ ಥೋಲಿಕ್ ಕ್ರೈಸ್ತರ ಕನ್ನಡ ಸಂಘ‘ವು ಭಾನುವಾರ ಸಂತ ತೆರೆಸಮ್ಮ ಚರ್ಚ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎಂ.ಚಿದಾನಂದ ಮೂರ್ತಿ, ಫಾದರ್ ಸ್ಟ್ಯಾನಿ ಬ್ಯಾಪ್ಟಿಸ್ಟ್ ಸ್ಮರಣಾರ್ಥ ‘ಕರ್ನಾಟಕ ಭೂಷಣ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಲೂ ಕರ್ನಾಟಕದಲ್ಲಿ ಅನೇಕ ಬುಡಕಟ್ಟು ಸಮುದಾಯಗಳು ತಮ್ಮ ತಾಯಿನುಡಿಯಲ್ಲೇ ಪೂಜೆ ಮಾಡುತ್ತಾರೆ. ಪುರೋಹಿತವರ್ಗವನ್ನು ಒಳಗೆ ಬಿಟ್ಟುಕೊಂಡಲ್ಲೆಲ್ಲ ಸಂಸ್ಕೃತ ಬಳಕೆಯಾಗುತ್ತಿದೆ. ಯಾವ ಭಾಷೆಯಾದರೇನು ನಮಗೆ ಒಳ್ಳೆಯದಾದರೆ ಸಾಕು ಎಂಬ ಸ್ವಾರ್ಥದಿಂದಾಗಿ ನಮಗೆ ಅರ್ಥವಾಗದ ಭಾಷೆಯಲ್ಲಿ ಪೂಜೆಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕ್ರೈಸ್ತ ಪ್ರಾರ್ಥನಾ ಮಂದಿರಗಳಲ್ಲಿ ಕನ್ನಡದಲ್ಲಿಯೇ ಪ್ರಾರ್ಥನೆ ನಡೆಯುತ್ತಿರುವುದು ಶ್ಲಾಘನೀಯ. ಆಧುನಿಕ ಕನ್ನಡದ ಆರಂಭದಲ್ಲಿ ಕೆಲಸ ಮಾಡಿದವರೇ ವಿದೇಶದಿಂದ ಬಂದ ಕ್ರೈಸ್ತರು. ಕನ್ನಡದ ನಿಘಂಟು ರಚಿಸಿದ ಕಿಟೆಲ್, ಎಲ್ಲೆಲ್ಲೂ ಇದ್ದ ಶಾಸನಗಳನ್ನು ಕಟ್ಟಿಕೊಟ್ಟ ರೈಸ್, ಲಾವಣಿಗಳನ್ನು ಸಂಗ್ರಹಿಸಿ ನೀಡಿದ ಫ್ಲೀಟ್, ಕಾಸ್ಟ್ ಆ್ಯಂಡ್ ಟ್ರೈಬ್ ಆಫ್ ಕರ್ನಾಟಕ ಕೃತಿಯ ಮೂಲಕ ಇಲ್ಲಿನ ಜನಾಂಗೀಯ ಚರಿತ್ರೆಯನ್ನು ನೀಡಿದ ಲೂಯಿಸ್ ಕೊಡುಗೆ ಮಹತ್ವವಾದುದು. ಕರಾವಳಿಯಲ್ಲಿ ಕೆಲಸ ಮಾಡಿದ್ದಲ್ಲದೇ ಕನ್ನಡದ ಮೊದಲ ಪತ್ರಿಕೆ ಆರಂಭಿಸಿದ ಬಾಷೆಲ್ ಮಿಷನ್ ಸಂಸ್ಥೆಯ ಕೊಡುಗೆಯೂ ಮರೆಯಲಾರದ್ದು ಎಂದು ನೆನಪಿಸಿಕೊಂಡರು.
ಕನ್ನಡ ಹೋರಾಟಗಾರರಾದ ನಾ. ಶ್ರೀಧರ್, ಎಲ್. ಶಿವಶಂಕರ್, ಅಂತೋನಿ ಪ್ರಸಾದ್, ಸಮಾಜ ಸೇವಕಿ ಸಿಸ್ಟರ್ ಜೆಸಿಂತ ಪ್ರಕಾಶಪ್ಪ ಅವರಿಗೆ ‘ಕರ್ನಾಟಕ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡ ಪರ ಚಿಂತಕ ರಾ.ನಂ. ಚಂದ್ರಶೇಖರ, ಕರ್ನಾಟಕ ವಿಕಾಸ ರಂಗ ಅಧ್ಯಕ್ಷ ವ.ಚ. ಚನ್ನೇಗೌಡ, ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಗದ ಅಧ್ಯಕ್ಷ ರಫಾಯಲ್ ರಾಜ್ ಮಾತನಾಡಿದರು.
ಯಾಕೆ ಮಾತನಾಡುತ್ತಿಲ್ಲ?
‘ಹಿಂದೆ ಬಸ್ ದರ 20 ಪೈಸೆ ಜಾಸ್ತಿಯಾದರೆ ಹೋರಾಟಗಳು ನಡೆಯುತ್ತಿದ್ದವು. ಬಸ್‌ಗೆ ಕಲ್ಲು ಬೀಳುತ್ತಿದ್ದವು. ಈಗ ಒಂದೇ ಸಮನೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾದರೂ ಯಾಕೆ ಯಾರೂ ಮಾತನಾಡುತ್ತಿಲ್ಲ. ಮಣಿಪುರದಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಕೊಲೆಯಾದರೂ ಬಾಯಿ ಬಿಡುತ್ತಿಲ್ಲ. ಧರ್ಮಸ್ಥಳದಲ್ಲಿ ಸೌಜನ್ಯಾ ಎಂಬ ಹುಡುಗಿಯನ್ನು ಕ್ರೂರವಾಗಿ ಸಾಯಿಸಿದರೂ ಎಚ್ಚೆತ್ತುಕೊಳ್ಳುವುದಿಲ್ಲ’ ಎಂದು ಕನ್ನಡ ಪರ ಹೋರಾಟಗಾರ ಎಲ್. ಶ್ರೀಧರ್ ಬೇಸರ ವ್ಯಕ್ತಪಡಿಸಿದರು. ‘ಧ್ವನಿ ಎತ್ತಿದವರನ್ನು ದೇಶದ್ರೋಹಿಗಳನ್ನಾಗಿ ಮಾಡಲಾಗುತ್ತಿದೆ. ಇದು ಬದಲಾಗಬೇಕಿದ್ದರೆ ಕ್ರಾಂತಿಯಾಗಬೇಕು. ನಮ್ಮ ತಲೆ ಹೋದರೂ ಪರವಾಗಿಲ್ಲ ಎಂದು ಬದ್ಧತೆಯ ಹೋರಾಟ ಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.