ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ನೇ ಸಾಲಿನ ಪುಸ್ತಕ ಪಟ್ಟಿ ಬಿಡುಗಡೆ ಮಾಡಿದ ಸಾರ್ವಜನಿಕ ಗ್ರಂಥಾಲಯ ಇಲಾಖೆ

Published 15 ನವೆಂಬರ್ 2023, 15:16 IST
Last Updated 15 ನವೆಂಬರ್ 2023, 15:16 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆಯು 2020ನೇ ಸಾಲಿನ ಪುಸ್ತಕಗಳ ಪಟ್ಟಿಯನ್ನು ಕಡೆಗೂ ಬಿಡುಗಡೆ ಮಾಡಿದೆ. 

ಇಲಾಖೆಯ ಏಕಗವಾಕ್ಷಿ ಯೋಜನೆಯಡಿ ಸಾಹಿತಿ ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯ ಈ ಹಿಂದಿನ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯು ಎರಡು ವರ್ಷಗಳ ಹಿಂದೆಯೇ 2020ನೇ ಸಾಲಿನ ಪುಸ್ತಕಗಳ ಪಟ್ಟಿಯನ್ನು ಸಿದ್ಧಪಡಿಸಿತ್ತು. ಆದರೆ, ಸರ್ಕಾರದ ಅನುಮೋದನೆ ದೊರೆತಿರಲಿಲ್ಲ. ಕಳೆದ ಬಜೆಟ್‌ನಲ್ಲಿ ₹ 10 ಕೋಟಿ ಅನುದಾನ ಘೋಷಿಸಿದ್ದ ಕಾಂಗ್ರೆಸ್ ಸರ್ಕಾರ, ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯನ್ನು ಪುನರ್‌ ರಚಿಸಿತ್ತು. ಸಾಹಿತಿ ಕರೀಗೌಡ ಬೀಚನಹಳ್ಳಿ ಅವರ ಅಧ್ಯಕ್ಷತೆಯ ನೂತನ ಸಮಿತಿಯು ಇಲಾಖೆಯ ಸೂಚನೆ ಮೇರೆಗೆ ಅಂತಿಮಗೊಂಡಿದ್ದ ಪುಸ್ತಕಗಳ ಪಟ್ಟಿಯನ್ನು ಮರುಪರಿಶೀಲನೆ ನಡೆಸಿತ್ತು.

ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಅ.3ರಂದು ‘ಖರೀದಿಯಾಗದ ಮೂರು ವರ್ಷಗಳ ಪುಸ್ತಕ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ಅಂತಿಮಗೊಂಡ 2020ನೇ ಸಾಲಿನ ಪುಸ್ತಕ ಪಟ್ಟಿಗೆ ಅನುಮೋದನೆ ನೀಡಿ, ಖರೀದಿ ಪ್ರಕ್ರಿಯೆ ನಡೆಸುವಂತೆ ಸರ್ಕಾರಕ್ಕೆ ಪ್ರಕಾಶಕರು ಮತ್ತು ಸಾಹಿತಿಗಳೂ ಮನವಿ ಮಾಡಿಕೊಂಡಿದ್ದರು. ಆ ಪಟ್ಟಿಗೆ ಈಗ ಸರ್ಕಾರದ ಅನುಮೋದನೆ ದೊರೆತಿದೆ.

ಅನುಮೋದನೆಗೊಂಡ 2020ನೇ ಸಾಲಿನ ಪುಸ್ತಕ ಪಟ್ಟಿಯು 436 ಪುಟಗಳನ್ನು ಒಳಗೊಂಡಿದೆ. ಈ ಪಟ್ಟಿಯಲ್ಲಿ 4,791 ಪುಸ್ತಕಗಳು ಸ್ಥಾನ ಪಡೆದಿದ್ದು, ದೊಡ್ಡರಂಗೇಗೌಡ ಹಾಗೂ ಕರೀಗೌಡ ಬೀಚನಹಳ್ಳಿ ಅವರ ಸಹಿ ಇದೆ. ಆದರೆ, ಇಷ್ಟು ಪುಸ್ತಕಗಳ ಖರೀದಿಗೆ ಅಗತ್ಯವಿರುವ ಅನುದಾನಕ್ಕೆ ಅನುಮೋದನೆ ದೊರೆತಿಲ್ಲ. ಇದು ಪ್ರಕಾಶಕರು ಹಾಗೂ ಸಾಹಿತಿಗಳ ಅಸಮಾಧಾನಕ್ಕೆ ಕಾರಣವಾಗಿದೆ. 

ಆಯ್ಕೆಯಾದ ಪುಸ್ತಕಗಳ ಪಟ್ಟಿಯ ಪಿಡಿಎಫ್‌ನಲ್ಲಿ ಎಎಸ್‌ಸಿಐಐ ತಂತ್ರಾಂಶ ಬಳಸಿಕೊಳ್ಳಲಾಗಿದೆ. ಇದರಿಂದ ಸಾಹಿತಿಗಳು ಹಾಗೂ ಪ್ರಕಾಶಕರಿಗೆ ತಮ್ಮ ಪುಸ್ತಕಗಳು ಆಯ್ಕೆಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳುವುದು ಕಷ್ಟವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಅಸಮಾಧಾನ ವ್ಯಕ್ತವಾಗಿದ್ದು, ಯೂನಿಕೋಡ್ ತಂತ್ರಾಂಶ ಅಳವಡಿಸಿಕೊಳ್ಳುವ ಬಗ್ಗೆ ಸಲಹೆಗಳು ವ್ಯಕ್ತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT