ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 50 ಲಕ್ಷ ಬೇಕೆಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ!

ಬ್ಯಾಂಕ್‌ ಖಾತೆಗೆ ₹ 50 ಲಕ್ಷ ವರ್ಗಾವಣೆ ಮಾಡಲು ಬೇಡಿಕೆ: ವಾಟ್ಸ್‌ಆ್ಯಪ್‌ ಸಂದೇಶದ ಮೂಲಕ ಬೆದರಿಕೆ
Published 25 ಜುಲೈ 2023, 1:30 IST
Last Updated 25 ಜುಲೈ 2023, 1:30 IST
ಅಕ್ಷರ ಗಾತ್ರ

ಬೆಂಗಳೂರು: ಕೇಳಿದಷ್ಟು ಹಣವನ್ನು ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡದಿದ್ದರೆ ಹೈಕೋರ್ಟ್‌ ನ್ಯಾಯಮೂರ್ತಿಗಳನ್ನು ಕೊಲೆ ಮಾಡುವುದಾಗಿ ವಾಟ್ಸ್‌ಆ್ಯಪ್‌ ಸಂದೇಶದ ಮೂಲಕ ಬೆದರಿಕೆ ಹಾಕಲಾಗಿದೆ.

ಈ ಬಗ್ಗೆ ಕೇಂದ್ರ ವಿಭಾಗದ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ತಾವು ಸೂಚಿಸಿದ ಬ್ಯಾಂಕ್‌ ಖಾತೆಗೆ ₹ 50 ಲಕ್ಷ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಆರು ನ್ಯಾಯಮೂರ್ತಿಗಳನ್ನು ಕೊಲೆ ಮಾಡಲಾಗುವುದೆಂದು ಬೆದರಿಕೆ ಬಂದಿದೆ’ ಎಂದು ನ್ಯಾಯಾಲಯದ ಅಧಿಕಾರಿ ಕೆ.ಮುರಳೀಧರ್ ದೂರು ನೀಡಿದ್ದಾರೆ.

ಜುಲೈ 14 ರಂದೇ ಪ್ರಕರಣ ದಾಖಲಿಸಿಕೊಂಡಿರುವ ಕೇಂದ್ರ ವಿಭಾಗದ ಸೈಬರ್‌ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

‘ಜುಲೈ 12 ರಂದು ರಾತ್ರಿ 7ರ ಸುಮಾರಿಗೆ ವ್ಯಕ್ತಿಯೊಬ್ಬ, ಮುರಳೀಧರ್ ಅವರ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿದ್ದಾನೆ. ಪಾಕಿಸ್ತಾನ ಮೂಲದ ಎಬಿಎಲ್‌ ಅಲೈಡ್‌ ಬ್ಯಾಂಕ್‌ ಖಾತೆ ಸಂಖ್ಯೆಯನ್ನು ಉಲ್ಲೇಖಿಸಿ ಸಂದೇಶ ಕಳುಹಿಸಲಾಗಿದೆ. ಆ ಖಾತೆಗೆ ಹಣ ವರ್ಗಾವಣೆ ಮಾಡದಿದ್ದರೆ ನಿನ್ನನ್ನು (ಮುರಳೀಧರ್‌) ಹಾಗೂ ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್, ಎಚ್.ಟಿ. ನರೇಂದ್ರ ಪ್ರಸಾದ್, ಅಶೋಕ್ ಜಿ. ನಿಜಗಣ್ಣನವರ್, ಎಚ್.ಪಿ.ಸಂದೇಶ, ಕೆ.ನಟರಾಜನ್ ಹಾಗೂ ವೀರಪ್ಪ ಅವರನ್ನು ದುಬೈ ಗ್ಯಾಂಗ್‌ನಿಂದ ಕೊಲೆ ಮಾಡಿಸಲಾಗುವುದೆಂದು ಬೆದರಿಕೆ ಹಾಕಲಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಹಿಂದಿ, ಉರ್ದು, ಇಂಗ್ಲಿಷ್‌ ಭಾಷೆಯಲ್ಲಿ ಬೆದರಿಕೆ ಸಂದೇಶಗಳು ಬಂದಿವೆ. ಐದು ಬೇರೆ ಬೇರೆ ಸಂಖ್ಯೆಗಳಿಂದ ಮುರಳೀಧರ್ ಅವರ ಮೊಬೈಲ್‌ಗೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಜತೆಗೆ, ಭಾರತದಲ್ಲಿ ನಮ್ಮ ಶೂಟರ್ ಇದ್ದಾನೆಂದು ಹೆದರಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT