ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಠಡಿ ನೀಡದಿದ್ದಕ್ಕೆ ಬೆದರಿಕೆ: ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ ಗೌಡ ಅಮಾನತು

Last Updated 29 ಆಗಸ್ಟ್ 2022, 20:02 IST
ಅಕ್ಷರ ಗಾತ್ರ

ಬೆಂಗಳೂರು: ಹೋಟೆಲ್‌ನಲ್ಲಿ ಕೊಠಡಿ ನೀಡಲಿಲ್ಲವೆಂಬ ಕಾರಣಕ್ಕೆ ಮಹಿಳಾ ಸಿಬ್ಬಂದಿ ಮೇಲೆ ಹರಿಹಾಯ್ದು ಬೆದರಿಕೆ ಹಾಕಿದ್ದ ಆರೋಪದಡಿ ಕೆ.ಪಿ.ಅಗ್ರಹಾರ ಠಾಣೆ ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ ಗೌಡ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಜೀವನ್‌ಭಿಮಾನಗರ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಘಟನೆ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ್ದ ಹೆಚ್ಚುವರಿ ಪೊಲೀಸ್ ಕಮಿಷನರ್ ಸುಬ್ರಹ್ಮಣ್ಯೇಶ್ವರ್‌ ರಾವ್ ಅವರು ಇನ್‌ಸ್ಪೆಕ್ಟರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಘಟನೆ ವಿವರ: ‘ಪಾನಮತ್ತರಾಗಿದ್ದ ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ, ತಡರಾತ್ರಿ 2.30ರ ಸುಮಾರಿಗೆ ಜೀವನಭಿಮಾನಗರ ಠಾಣೆ ವ್ಯಾಪ್ತಿಯ ಹೋಟೆಲೊಂದಕ್ಕೆ ಹೋಗಿದ್ದರು. ಕೊಠಡಿ ನೀಡುವಂತೆ ಕೌಂಟರ್‌ನಲ್ಲಿದ್ದ ಸಿಬ್ಬಂದಿಯನ್ನು ಒತ್ತಾಯಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹೋಟೆಲ್‌ನ ಎಲ್ಲ ಕೊಠಡಿಗಳು ಭರ್ತಿ ಆಗಿದ್ದವು. ಕೊಠಡಿ ಇಲ್ಲವೆಂದು ಸಿಬ್ಬಂದಿ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಇನ್‌ಸ್ಪೆಕ್ಟರ್, ಗಲಾಟೆ ಮಾಡಿದ್ದರು. ಕರ್ತವ್ಯದಲ್ಲಿದ್ದ ಹೋಟೆಲ್‌ನ ಮಹಿಳಾ ವ್ಯವಸ್ಥಾಪಕಿ, ಸ್ಥಳಕ್ಕೆ ಬಂದು ಇನ್‌ಸ್ಪೆಕ್ಟರ್ ಅವರನ್ನು ಸಮಾಧಾನಪಡಿಸಲು ಮುಂದಾಗಿದ್ದರು.’

‘ವ್ಯವಸ್ಥಾಪಕಿ ಜೊತೆಗೆ ಅನುಚಿತವಾಗಿ ವರ್ತಿಸಿದ್ದ ಗೋಪಾಲಕೃಷ್ಣ, ‘ನಾನು ಇನ್‌ಸ್ಪೆಕ್ಟರ್. ನನಗೆ ಕೊಠಡಿ ಕೊಡುವುದಿಲ್ಲವೇ ? ನಿನ್ನ ಹೆಸರು ಏನು? ಯಾವ ಪ್ರದೇಶದಲ್ಲಿ ವಾಸವಿದಿಯಾ? ನಿನ್ನನ್ನು ಸುಮ್ಮನೇ ಬಿಡುವುದಿಲ್ಲ. ಹೋಟೆಲ್‌ ಸಹ ಬಂದ್ ಮಾಡಿಸುತ್ತೇನೆ’ ಎಂದು ಬೆದರಿಸಿದ್ದ. ಗಾಬರಿಗೊಂಡ ಸಿಬ್ಬಂದಿ, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಗಸ್ತಿನಲ್ಲಿದ್ದ ಹೊಯ್ಸಳ ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಸ್ಥಿತಿ ತಿಳಿಗೊಳಿಸಿದ್ದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಎನ್‌ಸಿಆರ್‌ ದಾಖಲು: ಘಟನೆಗೆ ಸಂಬಂಧಪಟ್ಟಂತೆ ಹೋಟೆಲ್ ಸಿಬ್ಬಂದಿ ಠಾಣೆಗೆ ದೂರು ನೀಡಿದ್ದು, ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

‘ಪ್ರತ್ಯೇಕ ವಾಸ: ನಿತ್ಯವೂ ಮದ್ಯ ಸೇವನೆ’
‘ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ, ಹಲವು ದಿನಗಳಿಂದ ಕುಟುಂಬದಿಂದ ದೂರವಾಗಿ ಪ್ರತ್ಯೇಕವಾಗಿ ವಾಸವಿದ್ದಾರೆ. ನಿತ್ಯವೂ ಮದ್ಯ ಸೇವನೆ ಮಾಡುತ್ತಿದ್ದು, ಹೋಟೆಲ್‌ ಕೊಠಡಿಗಳಲ್ಲೇ ಉಳಿದುಕೊಳ್ಳುತ್ತಿದ್ದರು’ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕರ್ತವ್ಯ ವೇಳೆಯಲ್ಲೂ ಮದ್ಯ ಕುಡಿಯುತ್ತಿದ್ದ ಹಾಗೂ ಕರ್ತವ್ಯ ಲೋಪ ಎಸಗುತ್ತಿದ್ದ ಇನ್‌ಸ್ಪೆಕ್ಟರ್ ವಿರುದ್ದ ಕ್ರಮ ಕೈಗೊಳ್ಳಲು ವರದಿ ಸಿದ್ಧಪಡಿಸಲಾಗುತ್ತಿತ್ತು. ಅಷ್ಟರಲ್ಲೇ ಹೋಟೆಲ್‌ನಲ್ಲಿ ಗಲಾಟೆ ಮಾಡಿಕೊಂಡು ಅಮಾನತಾಗಿದ್ದಾರೆ‘ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT