ಬೆಂಗಳೂರು: ‘ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಅವಘಡದಿಂದ ಕಣ್ಣಿಗೆ ಹಾನಿಯಾಗಿ, ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಹಬ್ಬ ಆಚರಿಸಿ’ ಎಂದು ಲಯನ್ಸ್ ಇಂಟರ್‌ನ್ಯಾಷನಲ್ ಐ ಬ್ಯಾಂಕ್ ಮನವಿ ಮಾಡಿಕೊಂಡಿದೆ.
‘ಪಟಾಕಿ ಸಿಡಿತದಿಂದ ಪ್ರತಿವರ್ಷ ಸಾವಿರಾರು ಮಂದಿ ಕಣ್ಣಿಗೆ ಗಾಯ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಹೆಚ್ಚಿನ ಗಾಯದಿಂದ ಶಾಶ್ವತವಾಗಿ ದೃಷ್ಟಿ ನಷ್ಟವಾಗಲಿದೆ. ಮುನ್ನೆಚ್ಚರಿಕಾ ಕ್ರಮಗಳಿಂದ ಕಣ್ಣಿಗೆ ಹಾನಿಯಾಗುವುದನ್ನು ತಡೆಯಲು ಸಾಧ್ಯ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ಟ್ರಸ್ಟಿ ಲಯನ್ ಪಿ.ಎಸ್. ಪ್ರೇಮನಾಥ್ ತಿಳಿಸಿದ್ದಾರೆ.
‘ಪಟಾಕಿ ಹೊಡೆಯಲೇ ಬೇಕು ಎಂದಾದಲ್ಲಿ ದೂರದಲ್ಲಿ ನಿಂತು ಪಟಾಕಿ ಹಚ್ಚಬೇಕು. ರಾಕೆಟ್‌ಗಳು ಹೆಚ್ಚು ಅಪಾಯಕಾರಿಯಾಗಿವೆ. ಪಟಾಕಿಗಳನ್ನು ಕೈಯಲ್ಲಿ ಹಿಡಿದು ಹಚ್ಚಲು ಮಕ್ಕಳಿಗೆ ಅವಕಾಶ ನೀಡಬಾರದು. ಕನ್ನಡಕ ಧರಿಸುವಿಕೆ ಸೇರಿ ವಿವಿಧ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು’ ಎಂದು ಹೇಳಿದ್ದಾರೆ.
‘ಪಟಾಕಿಯಿಂದ ಕಣ್ಣಿಗೆ ಹಾನಿಯಾದಲ್ಲಿ ಕಣ್ಣನ್ನು ಉಜ್ಜಬಾರದು. ಸ್ವಯಂ ಚಿಕಿತ್ಸೆಗೂ ಒಳಗಾಗಬಾರದು. ಕಣ್ಣಿನ ತುರ್ತು ಚಿಕಿತ್ಸೆಗೆ ಸಹಾಯವಾಣಿ 8618292449ಕ್ಕೆ ಸಂರ್ಕಿಸಿ’ ಎಂದು ಮನವಿ ಮಾಡಿಕೊಂಡಿದ್ದಾರೆ.