ಶುಕ್ರವಾರ, ಆಗಸ್ಟ್ 23, 2019
25 °C

‘ಸೀಳುತುಟಿ– ಮೂಢನಂಬಿಕೆ ಬೇಡ’

Published:
Updated:

ಬೆಂಗಳೂರು: ಸೀಳು ತುಟಿ ಹಾಗೂ ಅಂಗುಳಿನ ಮುಂಭಾಗದ ಸಮಸ್ಯೆಗೆ ಪರಿಹಾರ ನೀಡುವ ಉದ್ದೇಶದಿಂದ ಸ್ಮೈಲ್‌ ಟ್ರೈನ್ ಇಂಡಿಯಾ ಹಾಗೂ ಇನ್ಫೊಸಿಸ್‌ನ ಸಹ ಸಂಸ್ಥಾಪಕ ಕೆ.ದಿನೇಶ್‌ ಅವರ ‘ಆಶ್ರಯ ಹಸ್ತ ಟ್ರಸ್ಟ್‌’ ವತಿಯಿಂದ ಆರ್ಥಿಕವಾಗಿ ಹಿಂದುಳಿದ 850 ಮಂದಿಗೆ ಉಚಿತ ಸೀಳುತುಟಿ ಚಿಕಿತ್ಸೆ ನೀಡಲಾಗುತ್ತದೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ದಿನೇಶ್‌, ‘ದೇಶದಲ್ಲಿ ಸೀಳು ತುಟಿ ಸಮಸ್ಯೆ ಹೊಂದಿರುವ 35 ಸಾವಿರಕ್ಕೂ ಅಧಿಕ ಮಕ್ಕಳು ಪ್ರತಿವರ್ಷ ಜನಿಸುತ್ತಾರೆ. ಸೀಳುತುಟಿಯ ಬಗ್ಗೆ ಜನ ರಲ್ಲಿ ಮೂಢನಂಬಿಕೆಗಳು ಬೇರೂರಿವೆ. ಇದು ಒಂದು ಸಣ್ಣ ಸಮಸ್ಯೆ ಅಷ್ಟೇ’ ಎಂದರು.

‘ನನಗೆ ಹುಟ್ಟಿದಾಗಲೇ ಸೀಳು ತುಟಿ ಸಮಸ್ಯೆ ಇತ್ತು. ನನ್ನನ್ನು ಯಾರೂ ಹೀಯಾಳಿಸದೇ ಇದ್ದರೂ, ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಈಗ ಸೀಳು ತುಟಿ ಸಮಸ್ಯೆ ನಿವಾರಣೆ ಯಾಯಿತು’ ಎಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ದಿವ್ಯಾ ದಿನೇಶ್‌ ಅನುಭವ ಹಂಚಿಕೊಂಡರು.

ಭಗವಾನ್‌ ಮಹಾವೀರ್‌ ಜೈನ್‌ ಆಸ್ಪತ್ರೆಯ ವೈದ್ಯ ಡಾ.ಕೃಷ್ಣಮೂರ್ತಿ, ‘ಮಗುವಿಗೆ 3ರಿಂದ 6 ತಿಂಗಳ ಅವಧಿಯಲ್ಲಿ ಶಸ್ತ್ರಚಿಕಿತ್ಸೆ ಮಾಡುವುದು ಸೂಕ್ತ. ಇಲ್ಲದಿದ್ದರೆ ಮಗುವಿಗೆ ಹಾಲು ಕುಡಿಯುವ ಸಮಸ್ಯೆ, ದವಡೆ ಸಮಸ್ಯೆಗಳು ಎದುರಾಗುತ್ತವೆ’ ಎಂದರು.

ಸಮಸ್ಯೆ ಇರುವ ವರಿಗೆ  ವಸಂತ ನಗರದ ಭಗವಾನ್‌ ಮಹಾವೀರ್‌ ಜೈನ್‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 18001038301 ಅಥವಾ smiletrainindia.org‌

Post Comments (+)