ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಾರ್ಟಿಯ (ಎಎಪಿ) ‘ಗ್ಯಾರಂಟಿ’ಗಳ ಪಟ್ಟಿಯನ್ನು ಬುಧವಾರ ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಬಿಡುಗಡೆ ಮಾಡಿದರು.
‘ಆಮ್ ಆದ್ಮಿ ಪಾರ್ಟಿ ಆಶ್ವಾಸನೆಗಳ ಬದಲು ಗ್ಯಾರಂಟಿ ಕಾರ್ಡ್ ನೀಡುತ್ತೇವೆ. ಇದೊಂದು ಕರಾರುಪತ್ರವಾಗಿದ್ದು, ಇವೆಲ್ಲವನ್ನೂ ಶೇಕಡ 100ರಷ್ಟು ಈಡೇರಿಸುತ್ತೇವೆ. ಪ್ರಣಾಳಿಕೆಯಲ್ಲಿದ್ದ ಎಲ್ಲ ಗ್ಯಾರಂಟಿಗಳನ್ನು ದೆಹಲಿಯಲ್ಲಿ ಈಡೇರಿಸಿದ್ದೇವೆ. ಪಂಜಾಬ್‌ನಲ್ಲಿ ಕೂಡ ಒಂದೊಂದಾಗಿ ಜಾರಿಯಾಗುತ್ತಿವೆ’ ಎಂದು ಸಂಜಯ್ ಸಿಂಗ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ರಾಜ್ಯದಲ್ಲಿ ಪ್ರತಿ ಮನೆಗೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್, ನಿರುದ್ಯೋಗಿಗಳಿಗೆ ತಿಂಗಳಿಗೆ ₹3000 ಭತ್ಯೆ, ಗುಣಮಟ್ಟದ ಆರೋಗ್ಯ ಸೇವೆಗಾಗಿ ಕ್ಲಿನಿಕ್‌ಗಳು, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಹಳೆ ಪಿಂಚಣಿ ಯೋಜನೆ ಜಾರಿ ಮುಂತಾದ ಒಟ್ಟು ಹತ್ತು ವಲಯಗಳಿಗೆ ಸಂಬಂಧಿಸಿದ ಪ್ರಮುಖ ಗ್ಯಾರಂಟಿಗಳನ್ನು ಘೋಷಿಸಲಾಗಿದೆ’ ಎಂದು ತಿಳಿಸಿದರು.
‘ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆ ಕಾನೂನಿನ ಪ್ರಕಾರ ಅರ್ಹವಾಗಿದ್ದರೂ ಚುನಾವಣಾ ಆಯೋಗವು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಸ್ಥಾನಮಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಲವು ತಿಂಗಳುಗಳಿಂದ ಬಾಕಿ ಉಳಿಸಿಕೊಂಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, ‘ಕಳೆದ ಒಂದು ತಿಂಗಳಿಂದ ಪ್ರಣಾಳಿಕೆ ರಚಿಸುವ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ. ಜನರಿಂದ ಜನರಿಗಾಗಿ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದೆ. ರಾಜ್ಯದ ಪ್ರತಿಯೊಂದು ವರ್ಗದ ಜನರ ಸಮಸ್ಯೆಗಳಿಗೆ ಪ್ರಣಾಳಿಕೆಯಲ್ಲಿ ಪರಿಹಾರ ಇರಲಿದೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.