ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟುಗಳ ಚಲಾವಣೆ ದುಪ್ಪಟ್ಟು

Last Updated 10 ಜೂನ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಜನರ ಬಳಿ ಇರುವ ನೋಟುಗಳ ಪ್ರಮಾಣವು ದಾಖಲೆ ಮಟ್ಟವಾಗಿರುವ ₹ 18.5 ಲಕ್ಷ ಕೋಟಿಗೆ ತಲುಪಿದೆ.

ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಸಂದರ್ಭದಲ್ಲಿ ಅತ್ಯಂತ ಕನಿಷ್ಠ ಮಟ್ಟಕ್ಕೆ (₹ 7.8 ಲಕ್ಷ ಕೋಟಿ) ಕುಸಿದಿದ್ದ ನೋಟುಗಳ ಪ್ರಮಾಣ ಈಗ ದುಪ್ಟಟ್ಟಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತಿಳಿಸಿದೆ.

ಆರ್‌ಬಿಐ, ದೇಶದಲ್ಲಿ ಚಲಾವಣೆಗೆ ತಂದಿರುವ ಒಟ್ಟಾರೆ ನೋಟುಗಳ ಸಂಖ್ಯೆ ಈಗ ₹ 19.3 ಲಕ್ಷ ಕೋಟಿಗೆ ತಲುಪಿದೆ. 2016ರಲ್ಲಿ ಇದು ₹ 8.9 ಲಕ್ಷ ಕೋಟಿಗಳಷ್ಟಿತ್ತು.

ಚಲಾವಣೆಯಲ್ಲಿ ಇರುವ ಒಟ್ಟಾರೆ ನೋಟುಗಳಲ್ಲಿ ಬ್ಯಾಂಕ್‌ಗಳಲ್ಲಿ ಇರುವ ನೋಟುಗಳನ್ನು ಹೊರಡುಪಡಿಸಿ ಉಳಿದ ಮೊತ್ತವು ಜನರ ಬಳಿ ಇರುವ ನೋಟುಗಳ ಪ್ರಮಾಣವಾಗಿರುತ್ತದೆ.

ಕೆಲ ದಿನಗಳ ಹಿಂದೆ ದೇಶದ ಅನೇಕ ಭಾಗಗಳಲ್ಲಿ ನೋಟುಗಳ ತೀವ್ರ ಅಭಾವ ಎದುರಾಗಿದ್ದಕ್ಕೆ, ಆರ್‌ಬಿಐನ ಈ ವರದಿಯಲ್ಲಿನ ವಿವರಗಳು ಸಂಪೂರ್ಣ ವ್ಯತಿರಿಕ್ತವಾಗಿವೆ. ಚುನಾವಣೆಯೂ ಸೇರಿದಂತೆ ವಿವಿಧ ಕಾರಣಗಳಿಗೆ ಜನರು ನೋಟುಗಳನ್ನು ಸಂಗ್ರಹಿಸಿ ಇಟ್ಟುಕೊಂಡ ಕಾರಣಕ್ಕೆ ಕೃತಕ ಅಭಾವ ಸೃಷ್ಟಿಸಲಾಗಿತ್ತು ಎಂದು ಭಾವಿಸಿದ್ದಕ್ಕೆ ಈ ವಿವರಗಳು ಪುಷ್ಟಿ ನೀಡುತ್ತವೆ.

ಜನರ ಬಳಿ ಇರುವ ನೋಟುಗಳು ಮತ್ತು ಒಟ್ಟಾರೆ ಚಲಾವಣೆಯಲ್ಲಿ ಇರುವ ನೋಟುಗಳ ಪ್ರಮಾಣವು 2016ರ ನವೆಂಬರ್‌ 8ರ ಮುಂಚಿನ ಕರೆನ್ಸಿಗಳ ಪ್ರಮಾಣವನ್ನು ಮೀರಿಸಿದೆ. ₹ 1,000 ಮತ್ತು ₹ 500 ಮುಖಬೆಲೆಯ ನೋಟುಗಳನ್ನು ರಾತ್ರಿ ಬೆಳಗಾಗುವುದರೊಳಗೆ ಹಠಾತ್ತಾಗಿ ರದ್ದು ಮಾಡಿದ್ದರಿಂದ ಚಲಾವಣೆಯಲ್ಲಿದ್ದ ಒಟ್ಟು ನೋಟುಗಳ ಶೇ 86ರಷ್ಟು ನಿರುಪಯುಕ್ತವಾಗಿದ್ದವು. ರದ್ದಾದ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಲು ಜನರಿಗೆ ಸಮಯಾವಕಾಶ ನೀಡಲಾಗಿತ್ತು.

ಆರ್‌ಬಿಐ ನೀಡಿರುವ ಇತ್ತೀಚಿನ ಮಾಹಿತಿ ಪ್ರಕಾರ, ರದ್ದಾದ ₹ 15.44 ಲಕ್ಷ  ಕೋಟಿ ನೋಟುಗಳ ಪೈಕಿ ಬ್ಯಾಂಕ್‌ಗಳಿಗೆ ₹ 15.28 ಲಕ್ಷ ಕೋಟಿ ನೋಟುಗಳು (ಶೇ 98.96) ಮರಳಿ ಬಂದಿವೆ.

ಆನಂತರ ಆರ್‌ಬಿಐ, ₹ 2,000, ₹ 500 ಮತ್ತು ₹ 200 ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತಂದಿತ್ತು. ಇತ್ತೀಚೆಗೆ ನೋಟುಗಳ ತೀವ್ರ ಅಭಾವ ಕಂಡುಬಂದಾಗ, ₹ 500 ಮುಖ ಬೆಲೆಯ ನೋಟುಗಳ ಮುದ್ರಣ ಹೆಚ್ಚಿಸಲಾಗಿದೆ ಎಂದೂ ಸರ್ಕಾರ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT