ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಬಂಧನ: ತೆರೆದಿದೆ ಮನದ ಬೀಗ

Last Updated 5 ಏಪ್ರಿಲ್ 2020, 20:51 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಅಂತರವಷ್ಟೇ ಇಲ್ಲಿ ಉಳಿದಿದೆ. ಮಾನವೀಯ ಮನಸ್ಸುಗಳು ಹತ್ತಿರವಾಗಿ ಒಂದೆಡೆ ಕಲೆತಿವೆ. ಬೀದಿಗಷ್ಟೇ ಲಾಕ್‌ಡೌನ್‌ ಮನಸ್ಸುಗಳಿಗಲ್ಲ...

ಹೀಗೆ ನಗರದ ಆಸ್ಟಿನ್‌ಟೌನ್‌ನ ಆಸುಪಾಸಿನಲ್ಲಿ ಕಾಣುವ ನೋಟಗಳು ನಿಧಾನವಾಗಿ ಬದಲಾಗಿವೆ.

ಹಾಗೆ ನೋಡಿದರೆ ಆಸ್ಟಿನ್‌ಟೌನ್‌ ಕೇಂದ್ರ ಸ್ಥಾನದ ಜೀವನ ಶೈಲಿಯೇ ಬೇರೆ. ಹೆಸರಿಗೆ ಇದು ಆಂಗ್ಲೊ ಇಂಡಿಯನ್‌ ಕಾಲೊನಿ. ಜನರ ಬಣ್ಣ,ಬದುಕಿನ ಶೈಲಿ,ಭಾಷೆ ಎಲ್ಲವೂ ಭಿನ್ನ. ಆಂಗ್ಲೊ ಇಂಡಿಯನ್‌ ಬೆರಳೆಣಿಕೆಯ ಕುಟುಂಬಗಳು ಇನ್ನೂ ಇಲ್ಲಿವೆ. ಮತ್ತೆ ಈಶಾನ್ಯ ರಾಜ್ಯದ ಮಂದಿ,ಒಂದಿಷ್ಟು ತಮಿಳರು,ಉರ್ದು ಭಾಷೆಯವರು,ಅಪರೂಪಕ್ಕೊಂದಿಷ್ಟು ನಡುನಡುವೆ ಕಾಣುವ ಕನ್ನಡಿಗರು ಇಲ್ಲಿದ್ದಾರೆ.

ಇವರೆಲ್ಲರನ್ನೂ ಈಗ ಆಸ್ಟಿನ್‌ಟೌನ್‌ ಸಂತೆ ಮೈದಾನ ಒಂದಾಗಿಸಿದೆ. ವಾಕಿಂಗ್‌ ಹೋಗುವುದಕ್ಕೂ ಕಡಿವಾಣ ಬಿದ್ದಿರುವ ಕಾರಣ ತರಕಾರಿ ಕೊಳ್ಳುವ ನೆಪದಲ್ಲಿ ಜನ ಈ ಮೈದಾನಕ್ಕೊಂದು ಸುತ್ತು ಹಾಕುತ್ತಾರೆ.

ಸುಮಾರು ಒಂದು ವಾರದ ಹಿಂದೆ ಇಲ್ಲಿ ತರಕಾರಿ ಬಂಡಿಗಳು ನೆಲೆಯೂರಿವೆ. ನೀಲಸಂದ್ರದಿಂದ ರೋಸ್‌ ಗಾರ್ಡನ್‌, ವಿವೇಕನಗರದವರೆಗೆ ಹಬ್ಬಿದ್ದ ಬೀದಿಬದಿ ವ್ಯಾಪಾರ ಸರಣಿ ಈಗ ಎಲ್ಲವೂ ಆಸ್ಟಿನ್‌ಟೌನ್‌ನ ಮೈದಾನಕ್ಕೆ ಬಂದು ಸೇರಿದೆ. ಏಪ್ರಿಲ್‌ 5ರ ಭಾನುವಾರವಂತೂ ಪೊಲೀಸರು ಅಲ್ಲಲ್ಲಿ ಉಳಿದ ಅಂಗಡಿಗಳನ್ನೂ ತೆರವು ಮಾಡಿಸಿ ಮೈದಾನಕ್ಕೆ ಸ್ಥಳಾಂತರಿಸಿದ್ದಾರೆ.

ಬದಲಾದ ಭಾನುವಾರ...: ಈ ಪ್ರದೇಶದಲ್ಲಿ ಫುಲ್‌ ಗಾಸ್ಪೆಲ್‌ ಚರ್ಚ್‌,ಎ.ಜಿ. ಈಡನ್‌ ಚರ್ಚ್‌,ಗೆತ್ಸೆಮನೆ ಪ್ರಾರ್ಥನೆ ಮನೆಗಳಲ್ಲಿ ಭಾನುವಾರ ಕಿಕ್ಕಿರಿದ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಆ ಜನರೆಲ್ಲ ಈಗ ಮನೆಗಳಲ್ಲೇ ಉಳಿದು ಧಾರ್ಮಿಕ ಪಠಣ ಮಾಡುತ್ತಿದ್ದಾರೆ. ಸಂಗೀತ ಹೊಮ್ಮಿಸು ತ್ತಿದ್ದ ವಾದ್ಯ ಪರಿಕರಗಳು,ಧ್ವನಿವರ್ಧಕ ಮೌನವಾಗಿವೆ. ಮಾರಿಯಮ್ಮ ದೇವಿ, ಆಂಜನೇಯ ಸ್ವಾಮಿ,ರಾಜರಾಜೇಶ್ವರಿ ದೇವರುಗಳು ಭಕ್ತರ ಮುಖ ನೋಡಿ ಹತ್ತು ದಿನಗಳ ಮೇಲಾಗಿದೆ. ಅಪರೂಪಕ್ಕೊಮ್ಮೆ ಆಜಾನ್‌ ಕೇಳುತ್ತದೆ.

ಅಪರಿಚಿತರಂತಿರುತ್ತಿದ್ದ ಅಕ್ಕಪಕ್ಕದ ಮನೆಗಳಲ್ಲಿ ಕೊಡುಕೊಳ್ಳುವಿಕೆ ಶುರುವಾಗಿದೆ. ಕೇವಲ ಉಪ್ಪು,ಸಕ್ಕರೆ ಅಷ್ಟೇ ಅಲ್ಲ. ಕುಡಿಯುವ ನೀರನ್ನೂ ಹಂಚಿಕೊಳ್ಳುತ್ತಿದ್ದಾರೆ. ಪುಟ್ಟ ಉದ್ಯಾನಗಳಲ್ಲಿ ಹಸಿರು ದಟ್ಟವಾಗಿ ಚಿಗುರಿದೆ.

ಮಾಲ್‌ಗಳಿಗೆ ಹೋಗುವ ಮಂದಿ ಈಗ ಮನೆ ಮುಂದೆ ಬರುವ ಸೊಪ್ಪು,ತರಕಾರಿ ಮಾರುವವಳ ದಾರಿ ಕಾಯುತ್ತಿರುತ್ತಾರೆ.ಗೊತ್ತಿಲ್ಲದ ಭಾಷೆಯಲ್ಲಿ ಅದ್ಹೇಗೋ ವ್ಯವಹಾರ ಮುಗಿಸುತ್ತಾರೆ. ಬರಬರುತ್ತಾ ಮುಖಗಳು ಪರಿಚಯವಾಗುತ್ತವೆ. ಲಾಕ್‌ಡೌನ್‌ ಬೀದಿ ತುಂಬಾ ಆಗಿದೆ. ಆದರೆ ಮನದ ಬೀಗ ತೆರೆದಿದೆ.

ಜನರು ಸಹಕರಿಸಲಿ: ಇಲ್ಲಿನ ಪಾಲಿಕೆ ಸದಸ್ಯೆ ಭಾರತಿಬಾಯಿ ಹೇಳುವಂತೆ, ‘ಸುಮಾರು 250 ತರಕಾರಿ ಬಂಡಿಗಳಿಗೆ ಮೈದಾನದಲ್ಲಿ ವ್ಯವಸ್ಥೆ ಮಾಡ ಲಾಗಿದೆ. ಆದರೆ, ಇದುವರೆಗೆ ಕೇವಲ 70 ಗಾಡಿಗಳು ಮಾತ್ರ ಬಂದಿವೆ. ವ್ಯಾಪಾರಿಗಳಿಗೆ ನೀರು,ಬೆಳಕು,ಸ್ವಚ್ಛತೆ ಸಂಬಂಧಿಸಿ ಎಲ್ಲ ಸೌಲಭ್ಯ ಕಲ್ಪಿಸಿದ್ದೇವೆ. ಜನರೂ ಸಹಕರಿಸಬೇಕು. ಪರಿಸ್ಥಿತಿ ಅರ್ಥ ಮಾಡಿ ಕೊಳ್ಳಬೇಕು‘ ಎಂದು ಕೋರಿದರು.

ವ್ಯಾಪಾರಿಗಳ ಮಾತು...
ವ್ಯಾಪಾರ ಅರ್ಧದಷ್ಟು ಕಡಿಮೆ ಆಗಿದೆ. ಮನೆಮನೆಗೂ ತರಕಾರಿ ತಲುಪಿಸುವವರ ಸ್ಪರ್ಧೆ ಎದುರಿಸಬೇಕಿದೆ. ಬೆಳಿಗ್ಗೆ ಮಾತ್ರ ವ್ಯವಹಾರ. ಕಲಾಸಿಪಾಳ್ಯದಿಂದ ಇಲ್ಲಿವರೆಗೆ ಮಾಲು ತರುವುದೇ ಸವಾಲು ಪೊಲೀಸರ ಕಾಟದ ನಡುವೆ ಬರಬೇಕು. ಕದ್ದು ತಂದಂತೆ ತರುವ ಪಾಡು ನಮ್ಮದು. ಮೈದಾನದಲ್ಲೂ ರಾತ್ರಿ ಕಳ್ಳರ ಕಾಟವಿದೆ. ಗಾಡಿ ಸಮೇತ ಒಯ್ಯುವ ಅಪಾಯವಿದೆ.

(ಸುಧಾಕರ,ಕಾಮಾಕ್ಷಿ,ಮಹದೇವ,ಶಕೀಬ್‌,ಸುಶೀಲಾ ವೆಂಕಟೇಶ್‌ವ್ಯಾಪಾರಿಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT