ಭಾನುವಾರ, ಆಗಸ್ಟ್ 1, 2021
27 °C
ಕೊರೊನಾ ವೈರಾಣು ಹರಡುವಿಕೆ ತಡೆಗೆ ಲಾಕ್‌ಡೌನ್‌ l ಹೆಚ್ಚಾದ ವಾಹನಗಳ ಓಡಾಟ

ಸ್ವಂತ ಊರಿನತ್ತ ಜನ; ಖರೀದಿಯಲ್ಲಿ ಸ್ಥಳೀಯರು ಮಗ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ವೈರಾಣು ಹರಡುವಿಕೆ ತಡೆಗಾಗಿ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಲಾಕ್‌ಡೌನ್ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಇದರ ಬೆನ್ನಲ್ಲೇ ನಗರದಲ್ಲಿ ನೆಲೆಸಿರುವ ಸಾವಿರಾರು ಮಂದಿ ಸೋಮವಾರ ಬೆಳಿಗ್ಗೆಯಿಂದಲೇ ತಮ್ಮೂರಿನತ್ತ ಪ್ರಯಾಣ ಬೆಳೆಸಿದರು.

ರಾಜ್ಯದ ಹಲವು ಜಿಲ್ಲೆಗಳ ಲಕ್ಷಾಂತರ ಮಂದಿ, ಅನ್ನ ಅರಸಿ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಈಗ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕ ಹೆಚ್ಚಾಗುತ್ತಿದೆ. ಕೆಲಸವಿಲ್ಲದೇ ಬಹುತೇಕರು ಕಂಗೆಟ್ಟಿದ್ದಾರೆ. ಇದೀಗ ಲಾಕ್‌ಡೌನ್ ಸಹ ಜಾರಿ ಮಾಡುತ್ತಿರುವುದರಿಂದ ಅನಿವಾರ್ಯವಾಗಿ ಜನರು ಮನೆ ಖಾಲಿ ಮಾಡಿಕೊಂಡು ತಮ್ಮೂರಿನತ್ತ ಹೊರಟಿದ್ದಾರೆ.

ಕಾರ್ಮಿಕರು ಹಾಗೂ ಉದ್ಯೋಗಸ್ಥರು ಕುಟುಂಬ ಸಮೇತರಾಗಿ ಬಸ್ ಹಾಗೂ ಖಾಸಗಿ ವಾಹನಗಳಲ್ಲಿ ಪ್ರಯಾಣಿಸಿದರು. ಮೆಜೆಸ್ಟಿಕ್ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ, ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಗಂಟುಮೂಟೆ ಸಮೇತರಾಗಿ ಬಂದು ತಮ್ಮೂರಿನ ಬಸ್ ಏರಿ ಹೊರಟಿದ್ದು ಕಂಡುಬಂತು.

ರಾಯಚೂರು, ಬೆಳಗಾವಿ, ಬೀದರ್, ಬಳ್ಳಾರಿ, ಕಲಬುರ್ಗಿ, ಕೊಪ್ಪಳ, ಹುಬ್ಬಳ್ಳಿ–ಧಾರವಾಡ, ಹೊಸಪೇಟೆ ಹಾಗೂ ಇತರೆ ಊರಿನ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು‌. ಪ್ರತಿಯೊಬ್ಬ ಪ್ರಯಾಣಿಕರ ಹೆಸರು ಹಾಗೂ ವಿಳಾಸದ ಮಾಹಿತಿ ಪಡೆದುಕೊಂಡ ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಬಸ್ಸಿಗೆ ಹತ್ತಲು ಅವಕಾಶ ನೀಡಿದರು. ಬಹುತೇಕರು ಅಂತರವನ್ನೂ ಪಾಲಿಸದೇ ಬಸ್ ಏರಿದರು.

ಪ್ರತಿಯೊಬ್ಬರ ಕೈಗೆ ಹೋಂ ಕ್ವಾರಂಟೈನ್ ಸೀಲ್‌ ಹಾಕಲಾಯಿತು. ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವುದರಿಂದ ಇಲ್ಲಿಂದ ಹೋದ ಪ್ರಯಾಣಿಕರಿಂದ ಬೇರೆ ಊರಿನವರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಸೀಲ್‌ ಹಾಕುತ್ತಿರುವುದಾಗಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹೇಳಿದರು.  

ಸೋಮವಾರ ನಸುಕಿನಿಂದಲೇ ವಾಹನಗಳ ಓಡಾಟ ಹೆಚ್ಚಿದ್ದರಿಂದ ತುಮಕೂರು ರಸ್ತೆಯ ನವಯುಗ ಟೋಲ್‌ಗೇಟ್‌ನಲ್ಲಿ ದಟ್ಟಣೆ ಕಂಡುಬಂತು.

ತುಮಕೂರು ರಸ್ತೆ ಹಾಗೂ ಮೈಸೂರು ರಸ್ತೆಯಲ್ಲಿ ವಿಪರೀತ ದಟ್ಟಣೆ ಕಂಡುಬಂತು. ಯಶವಂತಪುರ, ಪೀಣ್ಯ, ಜಾಲಹಳ್ಳಿ ಹಾಗೂ ನೆಲಮಂಗಲ ಟೋಲ್ ಗೇಟ್‌ನಲ್ಲೂ ದಟ್ಟಣೆ ಇತ್ತು.

ಖರೀದಿಯಲ್ಲಿ ಸ್ಥಳೀಯರು ಮಗ್ನ: ನಗರದ ಪ್ರಮುಖ ಜನವಸತಿ ಪ್ರದೇಶಗಳಲ್ಲಿ ಬಹುತೇಕ ಅಂಗಡಿಗಳು ಹಾಗೂ ಔಷಧಿ ಮಳಿಗೆಗಳು ಗ್ರಾಹಕರಿಂದ ತುಂಬಿದ್ದು ಸೋಮವಾರ ಕಂಡುಬಂತು. ಕಿರಾಣಿ ಅಂಗಡಿ, ಔಷಧಿ ಮಳಿಗೆ, ತರಕಾರಿ, ದಿನಸಿ ಅಂಗಡಿಗಳ ಎದುರು ಜನಸಂದಣಿ ಹೆಚ್ಚಾಗಿತ್ತು.

ಲಾಕ್‌ಡೌನ್‌ ತೀರ್ಮಾನ ಘೋಷಣೆಯಾಗಿದ್ದರಿಂದ ತರಾತುರಿಯಲ್ಲೇ ಸ್ಥಳೀಯರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಅಂತರ ಕಾಯ್ದುಕೊಂಡು ಸರದಿಯಲ್ಲಿ ನಿಂತು ವಾರಕ್ಕೆ ಸಾಕಾಗುವಷ್ಟು ವಸ್ತುಗಳನ್ನು ಖರೀದಿಸಿದರು.

ಮಲ್ಲೇಶ್ವರ, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ, ಮಹಾಲಕ್ಷ್ಮಿ ಲೇಔಟ್ ಪ್ರದೇಶಗಳಲ್ಲಿ ವ್ಯಾಪಾರ ಜೋರಾಗಿತ್ತು.

ಟೋಲ್‌ನಲ್ಲಿ ಪರದಾಟ
ಮೆಜೆಸ್ಟಿಕ್‌ಗೆ ಬಂದಿದ್ದ ಪ್ರಯಾಣಿಕರನ್ನು ಮಾತ್ರ ಬಸ್ಸಿನಲ್ಲಿ ಹತ್ತಿಸಿಕೊಳ್ಳಲಾಯಿತು. ನಗರದ ಬೇರೆ ಯಾವುದೇ ಭಾಗದಲ್ಲೂ ಬಸ್ ನಿಲುಗಡೆ ಇರಲಿಲ್ಲ. ನವಯುಗ ಟೋಲ್‌ ಗೇಟ್‌ನಲ್ಲಿ ನೂರಾರು ಪ್ರಯಾಣಿಕರು, ಬಸ್ ಹತ್ತಲಾಗದೇ ಪರದಾಡಿದರು. ಈ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ, ಕೆಎಸ್‌ಆರ್‌ಟಿಸಿಯಿಂದ ಪ್ರತ್ಯೇಕ ಬಸ್‌ಗಳ ವ್ಯವಸ್ಥೆ ಮಾಡಲಾಯಿತು.

‘ಲಾಕ್‌ಡೌನ್ ಬಳಿಕ ವಾಪಸು’
‘ಊರಿನಲ್ಲಿ ಕೆಲಸವಿಲ್ಲವೆಂದು ಬೆಂಗಳೂರಿಗೆ ಬಂದಿದ್ದೆ. ಈಗ ಇಲ್ಲಿಯೂ ಕೆಲಸವಿಲ್ಲ. ಹೀಗಾಗಿ, ಮನೆಗೆ ಹೋಗುತ್ತಿರುವೆ. ಲಾಕ್‌ಡೌನ್‌ ಮುಗಿದ ಮೇಲೆ ಬೆಂಗಳೂರಿಗೆ ವಾಪಸು ಬರುತ್ತೇನೆ’ ಎಂದು ಕಾರ್ಮಿಕ ಲಿಂಗೇಗೌಡ ಹೇಳಿದರು.

ನವಯುಗ ಟೋಲ್‌ಗೇಟ್‌ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಹಲವರು, ತಮ್ಮ ಅಭಿಪ್ರಾಯ ಹಂಚಿಕೊಂಡರು.

ದಾವಣಗೆರೆಯ ಮಂಜುಳಾ, ‘ಕೊರೊನಾ ಭಯಕ್ಕಿಂತಲೂ ಕೆಲಸದ್ದೇ ದೊಡ್ಡ ಚಿಂತೆ. ವಾರಗಟ್ಟಲೇ ಕೆಲಸವಿಲ್ಲದಿದ್ದರಿಂದ ಬಾಡಿಗೆ ಕಟ್ಟಲೂ ಹಣ ಇರುವುದಿಲ್ಲ. ಅನಿವಾರ್ಯವಾಗಿ ಬೆಂಗಳೂರು ಬಿಡುತ್ತಿದ್ದೇವೆ’ ಎಂದರು.

ಕೊಪ್ಪಳದ ನಾಗರಾಜ್, ‘ದುಡಿಮೆ ಕಡಿಮೆ ಆಗಿದೆ. ಪತ್ನಿ ಹಾಗೂ ಮಕ್ಕಳನ್ನು ಊರಿನಲ್ಲಿ ಬಿಟ್ಟು, ನಾನಷ್ಟೇ ಬೆಂಗಳೂರಿಗೆ ವಾಪಸು ಬರುತ್ತೇನೆ. ಸಿಕ್ಕ ಕೆಲಸ ಮಾಡಿ ಜೀವನ ಸಾಗಿಸುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು