ಮಂಗಳವಾರ, ಜೂನ್ 2, 2020
27 °C
ಹೂವು ಮಾರಾಟಕ್ಕೂ ಅವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ಬೆಳೆಗಾರರ ಮನವಿ

ವ್ಯಾಪಾರಕ್ಕೆ ನಿರ್ಬಂಧ: ಬಾಡುತಿದೆ ಗುಲಾಬಿ

ಮನೋಹರ್‌ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‍ಡೌನ್‌ನಿಂದ ಹೂವು ಮಾರುಕಟ್ಟೆಗಳಲ್ಲಿ ವ್ಯಾಪಾರ ನಿರ್ಬಂಧಿಸಿರುವ ಕಾರಣ, ಗ್ರಾಹಕರ ಕೈಸೇರಬೇಕಿದ್ದ ಗುಲಾಬಿ, ತೋಟಗಳಲ್ಲೇ ಬಾಡುವ ಸ್ಥಿತಿ ತಲುಪಿದೆ.

ಬೆಂಗಳೂರು ಗ್ರಾಮಾಂತರ ರಾಜ್ಯದಲ್ಲೇ ಅತಿ ಹೆಚ್ಚು ಗುಲಾಬಿ ಬೆಳೆಯುವ ಜಿಲ್ಲೆ. ದೇವನಹಳ್ಳಿ, ಹೊಸಕೋಟೆ ತಾಲ್ಲೂಕುಗಳಲ್ಲಿ ಗುಲಾಬಿ ಪ್ರಧಾನ ಕೃಷಿ. ನಗರದ ಕೆ.ಆರ್.ಮಾರುಕಟ್ಟೆಗೆ ನಿತ್ಯ ಇಲ್ಲಿಂದ ಸಾವಿರಾರು ಕೆ.ಜಿಗಳಷ್ಟು ಹೂವು ಆವಕವಾಗುತ್ತದೆ. ಇಲ್ಲಿ ಬೆಳೆಯುವ ಗುಲಾಬಿಗೆ ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಿಂದ ಬೇಡಿಕೆ ಹೆಚ್ಚು.

ಈ ಬಾರಿಯ ಯುಗಾದಿಗೆಂದು ಬೆಳೆಯಲಾಗಿದ್ದ ಗುಲಾಬಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಸಿಗಲಿಲ್ಲ. ಕೊರೊನಾ ಲಾಕ್‍ಡೌನ್‍ನಿಂದ ನಿರ್ಬಂಧ ಹೇರಿದ ಕಾರಣ ಬೆಳೆದ ಹೂವನ್ನು ಮಾರುಕಟ್ಟೆಗಳಿಗೆ ಸಾಗಿಸಲು ಬೆಳೆಗಾರರು ಪರದಾಡಿದರು. ಹಬ್ಬಗಳಿಗೆ ಪ್ರತಿ ಕೆ.ಜಿ.ಗೆ ₹200ರಿಂದ ₹300ರಂತೆ ಮಾರಾಟವಾಗುತ್ತಿದ್ದ ಗುಲಾಬಿ, ಯುಗಾದಿ ವೇಳೆಯೂ ₹200ಕ್ಕೇರಿತ್ತು. ಆದರೆ, ಮಾರುಕಟ್ಟೆಗೆ ಅಗತ್ಯ ಪ್ರಮಾಣದಲ್ಲಿ ಹೂವು ಆವಕವಾಗಲಿಲ್ಲ. ಆದರೆ, ಒಂದು ವಾರದಿಂದ ಹೂ ಬಿಡಿಸುವ ವೆಚ್ಚ ಭರಿಸಲು ಸಾಧ್ಯವಾಗದೆ ತೋಟಗಳಲ್ಲೇ ಹೂವುಗಳು ಒಣಗುತ್ತಿವೆ.

‘ಎರಡು ದಿನಗಳಿಗೊಮ್ಮೆ ಗುಲಾಬಿ ಬಿಡಿಸುತ್ತೇವೆ. ಪ್ರತಿ ಬಾರಿ 100ರಿಂದ 200 ಕೆ.ಜಿ.ಗಳಷ್ಟು ಹೂವು ಮಾರುಕಟ್ಟೆಗೆ ಹಾಕುತ್ತೇವೆ. ಕಟಾವು ಮಾಡದೆ ನಾಲ್ಕು ದಿನಗಳವರೆಗೆ ಗಿಡದಲ್ಲೇ ಬಿಟ್ಟರೆ ಕ್ರಮೇಣ ಬಿಳಿಯ ಬಣ್ಣಕ್ಕೆ ತಿರುಗಿ ಉದುರುತ್ತವೆ. 20 ದಿನಗಳಿಂದ ಗುಲಾಬಿ ಬಿಡಿಸದ ಕಾರಣ ತೋಟದಲ್ಲೇ ಒಣಗುತ್ತಿದೆ’ ಎಂದು ಹೊಸಕೋಟೆ ಸಮೀಪದ ಕುಂಬಳಹಳ್ಳಿ ಗ್ರಾಮದ ಗುಲಾಬಿ ಬೆಳೆಗಾರ ವೆಂಕಟೇಶ್ ಕಣ್ಣೀರು ಹಾಕಿದರು.

‘ಬರುವ ಆದಾಯದಲ್ಲಿ ಹೂವು ಬಿಡಿಸುವ ಕೆಲಸಗಾರರಿಗೆ ಕೂಲಿ, ವಾರಕ್ಕೊಮ್ಮೆ ಔಷಧ ಸಿಂಪಡಣೆ, ಮಾರುಕಟ್ಟೆಗೆ ಸಾಗಿಸಲು ಸಾರಿಗೆ ವೆಚ್ಚ ಎಂತಲೇ ಹಣ ಖರ್ಚಾಗುತ್ತದೆ. ಬೆಲೆ ಏರಿದಾಗ ಮಾತ್ರ ಕೊಂಚ ಲಾಭ ಕೈಸೇರುತ್ತದೆ. ಹೂ ಬಿಡಿಸಲು ಕೆಲಸಗಾರರು ಬರುತ್ತಿಲ್ಲ. ನಮಗೆ ತಿಂಗಳ ಸಂಬಳ ಬರುವುದಿಲ್ಲ. ದಿನದ ವ್ಯಾಪಾರ ನಂಬಿ ಜೀವನ ನಡೆಸುತ್ತೇವೆ. ಹಣ್ಣು-ತರಕಾರಿಯಾದರೆ ಒಂದು ವಾರದವರೆಗೆ ಕೆಡುವುದಿಲ್ಲ. ಆದರೆ, ಗುಲಾಬಿ ಬಾಳಿಕೆ ಅವಧಿ ಕಡಿಮೆ. ಹೂವು ವ್ಯಾಪಾರಕ್ಕೆ ಸರ್ಕಾರ ಅನುಮತಿ ನೀಡಿದರೆ ತೋಟದಲ್ಲೇ ಒಣಗುವುದು ತಪ್ಪಲಿದೆ’ ಎಂದು ಮನವಿ ಮಾಡಿದರು.

‘ಸುರಕ್ಷಿತ ವ್ಯಾಪಾರಕ್ಕೆ ಅನುಮತಿ ನೀಡಿ’
‘ಹೆಚ್ಚು ಜನ ಸೇರುವೆಡೆ ಕೊರೊನಾ ಸೋಂಕು ಹರಡುತ್ತದೆ ಎಂಬ ಕಾರಣದಿಂದ ಹೂ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ, ಸಾಮಾಜಿಕ ಅಂತರ ಪಾಲಿಸುವಂತೆ ಸೂಚಿಸಿ ಹಣ್ಣು-ತರಕಾರಿ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ. ಇದರಂತೆ ಹೂವು ವ್ಯಾಪಾರಕ್ಕೂ ಸರ್ಕಾರ ಅನುಮತಿ ನೀಡಬೇಕು’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮನವಿ ಮಾಡಿದರು.

2.5 ಲಕ್ಷ ಹೂಗಳು: ಒಂದು ಹೆಕ್ಟೇರ್‌ನಲ್ಲಿ ಸಿಗುವ ಗುಲಾಬಿ ಇಳುವರಿ

500 ಕೆ.ಜಿ.: ಒಂದು ಎಕರೆ ಗಿಡದಲ್ಲಿ ಬಿಡುವ ಗುಲಾಬಿ

₹50-₹100: ಪ್ರತಿ ಕೆ.ಜಿ. ಗುಲಾಬಿಗೆ ಸಿಗುವ ಕನಿಷ್ಠ ಬೆಲೆ

**
ಲಾಕ್‍ಡೌನ್‍ನಿಂದ ಮನೆಗಳಲ್ಲಿ ಪೂಜೆ ಮಾಡುವ ಪದ್ಧತಿಯನ್ನು ಯಾರೂ ಮರೆತಿಲ್ಲ. ಹೂವು ವ್ಯಾಪಾರಕ್ಕೆ ಅನುಮತಿ ನೀಡಿದರೆ ಗ್ರಾಹಕರು ಹಾಗೂ ಬೆಳೆಗಾರರಿಗೆ ಅನುಕೂಲ.
-ಪಿ.ಜಿ.ಗೋಪಿ, ಗುಲಾಬಿ ಬೆಳೆಗಾರ

**
ಗಿಡದಲ್ಲಿರುವ ಹೂವು ಬಿಡಿಸಿದರೆ ಪುನಃ ಬರುತ್ತದೆ. ಲಾಕ್‍ಡೌನ್ ಮುಗಿಯುವವರೆಗೂ ಹೂ ಮಾರುಕಟ್ಟೆ ತೆರೆಯುವುದು ಅನುಮಾನ. ಹೀಗಾಗಿ ತೋಟದಲ್ಲೇ ಬಿಟ್ಟಿದ್ದೇವೆ.
-ಶ್ರೀನಿವಾಸ್, ರೈತ, ದೇವನಹಳ್ಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು