ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ಪುಷ್ಪೋದ್ಯಮಕ್ಕೆ ಪೆಟ್ಟು

Last Updated 25 ಏಪ್ರಿಲ್ 2020, 21:43 IST
ಅಕ್ಷರ ಗಾತ್ರ

ಯಲಹಂಕ: ಲಾಕ್‌ಡೌನ್‌ನಿಂದ ಸಾರಿಗೆ ಸಮಸ್ಯೆ ಎದುರಾಗಿ, ಬೆಳೆದ ಹೂವಿನ ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗದೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ಮತ್ತು ಆನೇಕಲ್ ಭಾಗಗಳಲ್ಲಿ ಇಡೀ ಭಾರತ ದೇಶದಲ್ಲೇ ಹೂವಿನ ಬೆಳೆಗಳನ್ನು ಬೆಳೆಯಲು ಪೂರಕವಾದ ಉಷ್ಣಾಂಶ ಮತ್ತು ಗುಣಮಟ್ಟದ ವಾತಾವರಣವಿದೆ. ಈ ಪ್ರದೇಶಗಳಲ್ಲಿ ರೈತರು ಪಾಲಿಹೌಸ್ ಪದ್ಧತಿಯಲ್ಲಿ ಹಾಲೆಂಡ್‌ನಿಂದ ಆಮದು ಮಾಡಿಕೊಂಡಿರುವ ಡಚ್ ತಳಿಯ ಗುಲಾಬಿ ಸೇರಿದಂತೆ ಜರ್ಬರಾ, ಜಿಸೋಫಿಲ, ಆಂತೋರಿಯಂ ತಳಿಯ ಹೂವುಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ.

ಮದುವೆ ಮತ್ತಿತರ ಶುಭಸಮಾರಂಭಗಳಲ್ಲಿ ಅಲಂಕಾರಕ್ಕಾಗಿ ಈ ಹೂವುಗಳನ್ನು ಹೆಚ್ಚಾಗಿ ಬಳಸಲಾಗುತ್ತಿದ್ದು, ಇಲ್ಲಿಯವರೆಗೆ ರಾಜ್ಯ, ರಾಷ್ಟ್ರ ಮತ್ತು ವಿದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಆದರೆ, ಈಗ ಸಾವಿರಾರು ಟನ್ ಹೂವಿನಬೆಳೆ ಮಾರಾಟವಾಗದೆ ಬಾಡಿ ನೆಲಕ್ಕುದುರಿದ್ದು, ಇನ್ನೂ ಕೆಲವು ರೈತರು ಹೂವುಗಳನ್ನು ಕಿತ್ತು ಬೀದಿಗೆ ಸುರಿದಿದ್ದಾರೆ ಎಂದು ಹೂ ಬೆಳೆಗಾರರರ ಸಂಘದ ನಿರ್ದೇಶಕ ಅರವಿಂದ್ ಟಿ.ಎಂ ತಿಳಿಸಿದರು.

ಒಂದು ಎಕರೆಯಲ್ಲಿ ಪಾಲಿಹೌಸ್ (ಹಸಿರುಮನೆ) ನಿರ್ಮಾಣಮಾಡಿ ಗುಲಾಬಿ ಅಥವಾ ಜರ್ಬರಾ ಹೂವನ್ನು ಬೆಳೆಯಲು ₹45 ಲಕ್ಷದಿಂದ ₹ 50 ಲಕ್ಷ ಖರ್ಚು ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರೈತರು, ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಸಾಲವನ್ನು ತೀರಿಸಲಾಗದೆ ದಿಕ್ಕು ತೋಚದಂತಾಗಿ ಕಂಗಾಲಾಗಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‌ಬೆಳೆ ನಾಶವಾಗಿರುವುದರಿಂದ ಮೂರು ತಿಂಗಳಿಂದ ರೈತರು ನಷ್ಟ ಅನುಭವಿಸುತ್ತಿದ್ದು, ಇನ್ನೂ 3 ತಿಂಗಳು ಯಾವುದೇ ಮದುವೆ, ಸಾರ್ವಜನಿಕ ಕಾರ್ಯಕ್ರಮ ಹಾಗೂ ಶುಭ ಸಮಾರಂಭಗಳು ನಡೆಯದ ಕಾರಣ, ತೀವ್ರಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ, ರೈತರಿಗೆ ಪ್ರತಿತಿಂಗಳು ರಸಗೊಬ್ಬರ, ಔಷಧ, ಸಾರಿಗೆ, ವಿದ್ಯುತ್‌ ಬಿಲ್‌, ಕೂಲಿಗಾರರ ವೇತನಕ್ಕಾಗಿ ತಗಲುವ ₹1.25 ಲಕ್ಷ ನಿರ್ವಹಣಾ ವೆಚ್ಚವನ್ನಾದರೂ ಭರಿಸಬೇಕು ಎಂದು ಸಂಘದ ಮತ್ತೊಬ್ಬ ನಿರ್ದೇಶಕ ಬಿ.ಶ್ರೀಕಾಂತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT