ಗುರುವಾರ , ಜೂನ್ 4, 2020
27 °C
ದಿನಗೂಲಿ ನೌಕರರು, ದುಡಿಯುವ ವರ್ಗದ ಸಮೀಕ್ಷೆ ನಡೆಸಿದ ಎಸಿಸಿಟಿಯು

ಶೇ 56ರಷ್ಟು ಕಾರ್ಮಿಕರ ಆದಾಯ ಖೋತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್‌ ಘೋಷಣೆಯಿಂದ ದಿನಗೂಲಿ ನೌಕರರು ಹಾಗೂ ದುಡಿಯುವ ವರ್ಗದ ಮೇಲೆ ಆಗಿರುವ ಪರಿಣಾಮಗಳ ಕುರಿತು ಸಮೀಕ್ಷೆ ನಡೆಸಿರುವ ಅಖಿಲ ಭಾರತೀಯ ಕೇಂದ್ರ ವ್ಯಾಪಾರ ಒಕ್ಕೂಟಗಳ ಮಂಡಳಿಯು (ಎಸಿಸಿಟಿಯು), ಶೇ 56ರಷ್ಟು ಕಾರ್ಮಿಕರು ಸಂಪೂರ್ಣ ಆದಾಯವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದೆ. 

ದಿನ, ವಾರ ಹಾಗೂ ತಿಂಗಳ ಸಂಬಳದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಗಾರ್ಮೆಂಟ್‌ ನೌಕರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಎಸಿಸಿಟಿಯು ಹೇಳಿದೆ. ಗಾರ್ಮೆಂಟ್‌ ನೌಕರರ ಒಕ್ಕೂಟಗಳ ಜೊತೆ ಸೇರಿ ಮಂಡಳಿಯು ಈ ಸಮೀಕ್ಷೆ ನಡೆಸಿದೆ.  

ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ 93ರಷ್ಟು ಜನ, ಸಾರಿಗೆ ವ್ಯವಸ್ಥೆ ಇರದ ಕಾರಣ ಮತ್ತು ಸೋಂಕು ಹರಡುವ ಭಯದಿಂದ ತವರಿಗೆ ತೆರಳದೇ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದಾಗಿ ಹೇಳಿದ್ದಾರೆ. 

ಪಡಿತರ ಚೀಟಿ ಹೊಂದಿದವರಿಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಸಮರ್ಪಕವಾಗಿ ಪಡಿತರ ಸಿಗುತ್ತಿಲ್ಲ. ಇನ್ನು, ಪಡಿತರ ಚೀಟಿ ಹೊಂದಿರದ ಕಾರ್ಮಿಕರ ಸ್ಥಿತಿ ಇವರಿಗಿಂತಲೂ ಕಷ್ಟಕರವಾಗಿದೆ. ಸರ್ಕಾರದ ವಿವಿಧ ಯೋಜನೆಯಡಿ ಪೌಷ್ಟಿಕ ಆಹಾರ ಪಡೆಯುತ್ತಿದ್ದ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳು ಈ ಸೌಲಭ್ಯವನ್ನು ಪಡೆಯುವುದಕ್ಕೂ ಸಾಧ್ಯವಾಗಿಲ್ಲ.  

ಮಾರ್ಚ್‌ ಮುಗಿದು, ಏಪ್ರಿಲ್‌ ಬರುತ್ತಿದ್ದಂತೆ ಮುಂದಿನ ತಿಂಗಳು ಜೀವನ ನಿರ್ವಹಣೆಗೆ ಏನು ಮಾಡುವುದು ಎಂಬ ಯೋಚನೆಯಲ್ಲಿ ಕಾರ್ಮಿಕ ಸಮುದಾಯವಿದೆ. 

‘ನಗರದಲ್ಲಿರುವ ಕಡು ಬಡವರು ಮತ್ತು ದುಡಿಯುವ ವರ್ಗದ ಪೈಕಿ ಶೇ 83 ಜನರಿಗೆ ಬೇರೆ ಆದಾಯದ ಮೂಲವಿಲ್ಲ. ಪ್ರಸ್ತುತ ದುಡಿಮೆಯಿಂದ ಬರುತ್ತಿದ್ದ ಆದಾಯವೇ ಆಧಾರವಾಗಿದೆ. ರಾಜ್ಯ ಸರ್ಕಾರದ ಯಾವುದೇ ಯೋಜನೆ ಅಥವಾ ಕಾರ್ಯಕ್ರಮದ ಫಲಾನುಭವಿಗಳೂ ಇವರಲ್ಲ’ ಎಂದೂ ವರದಿ ಹೇಳಿದೆ.

ವರದಿಯ ಅಶಿಫಾರಸುಗಳು
* ವಾಹನಗಳ ಮೂಲಕ ಕಾರ್ಮಿಕ ಕುಟುಂಬಗಳಿಗೆ ಆಹಾರ ಪೂರೈಸಬೇಕು 

* ಮನೆ ಬಾಗಿಲಿಗೆ ಆಹಾರ ಮತ್ತು ದಿನಸಿ ಪದಾರ್ಥಗಳನ್ನು ತಲುಪಿಸಬೇಕು 

* ಕುಟುಂಬದಲ್ಲಿ ಪ್ರತಿಯೊಬ್ಬರಿಗೆ ₹1,000 ಆರ್ಥಿಕ ನೆರವು ನೀಡಬೇಕು 

* ಮಾಲೀಕರು ಒಂದು ತಿಂಗಳ ಮನೆ ಬಾಡಿಗೆ ತೆಗೆದುಕೊಳ್ಳಬಾರದು ಎಂದು ಸರ್ಕಾರ ಆದೇಶಿಸಬೇಕು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು