ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್‌ಗಳು ದುರ್ಬಳಕೆ: ಅನಗತ್ಯ ಸಂಚಾರ, ಬೆಂಗಳೂರಿನಲ್ಲಿ 6,852 ವಾಹನ ಜಪ್ತಿ

Last Updated 1 ಏಪ್ರಿಲ್ 2020, 20:57 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ಘೋಷಿಸಿದ್ದರೂ ಅನಗತ್ಯವಾಗಿ ಓಡಾಡುತ್ತಿದ್ದ ಒಟ್ಟು 6,852 ವಾಹನಗಳನ್ನು ಬುಧವಾರ ಸಂಜೆ 7 ಗಂಟೆವರೆಗೆ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್‌ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.

ಜಪ್ತಿ ಮಾಡಿದವುಗಳಲ್ಲಿ ದ್ವಿಚಕ್ರ ವಾಹನಗಳು 6,321, ತ್ರಿಚಕ್ರ ವಾಹನಗಳು 227 ಹಾಗೂ ನಾಲ್ಕು ಚಕ್ರದ ವಾಹನಗಳು 304 ಇವೆ. ವೈದ್ಯಕೀಯ ಅಗತ್ಯಕ್ಕೆ ಬಳಸಲು ದಿನದ ಅಗತ್ಯಕ್ಕೆ 200 ವಾಹನ ಪಾಸ್‌ಗಳನ್ನು ನೀಡಲು ಚಿಂತನೆ ಇದೆ ಎಂದೂ ಅವರು ತಿಳಿಸಿದ್ದಾರೆ.

‘ಲಾಕ್‌ಡೌನ್ ವೇಳೆ ಅಗತ್ಯ ಸೇವೆ ಪೂರೈಸುವವರ ವಾಹನಗಳಿಗೆ ಡಿಸಿಪಿ ಕಚೇರಿಗಳಲ್ಲಿ ನೀಡಲಾಗುತ್ತಿದ್ದ ಪಾಸ್‌ಗಳು ದುರ್ಬಳಕೆ ಆಗುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ‘ನಾವು ಲಾಠಿ ಉಪಯೋಗಿಸುತ್ತಿಲ್ಲ. ತಾಳ್ಮೆಯಿಂದ ಕೆಲಸ ಮಾಡುತ್ತಿದ್ದೇವೆ. ಅಗತ್ಯ ಇಲ್ಲದೆ ತೆರಳುತ್ತಿರುವವರ ವಾಹನಗಳನ್ನು ವಶಕ್ಕೆ ಪಡೆಯಲು ನಿರ್ಧರಿಸಿದ್ದೇವೆ. ಸಣ್ಣ-ಪುಟ್ಟ ಕಾರಣಗಳಿಗೆ ವಿನಾಯಿತಿ ನೀಡಲು ಸಾಧ್ಯವಿಲ್ಲ. ದಯವಿಟ್ಟು ನಿಮ್ಮ ಕಾರು ಚಾಲಕರು, ಮನೆಯ ವಾಚ್‌ಮೆನ್, ಮನೆಗೆಲಸ ಮಾಡುವವರು ತೀರಾ ಅಗತ್ಯ ಹೊರತುಪಡಿಸಿ ನಿತ್ಯ ಮನೆಯಿಂದ ಹೊರಗೆ ಕಳಿಸಬೇಡಿ. ನಿಮ್ಮ ಮನೆಯಲ್ಲೇ ಇರಲು ಅವರಿಗೆ ವ್ಯವಸ್ಥೆ ಕಲ್ಪಿಸಿ. ಅಂಥವರಿಗೆ ಓಡಾಡಲು ಪ್ರತ್ಯೇಕ ಪಾಸ್ ಕೇಳಬೇಡಿ‘ ಎಂದಿದ್ದಾರೆ.

ಬುಧವಾರ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳುವ ಧಿರಿಸಿನಲ್ಲಿ ರಸ್ತೆಗಿಳಿದ ಭಾಸ್ಕರ್ ರಾವ್, ವಾಹನ ತಪಾಸಣೆ ನಡೆಸಿ ಕೆಲವನ್ನು ಜಪ್ತಿ ಮಾಡಿದ್ದಾರೆ. ಟೌನ್‌ಹಾಲ್ ಬಳಿ ವಾಹನ ತಪಾಸಣೆ ನಡೆಸಿದ ಅವರು, ’ಎಲ್ಲಿಂದ ಬರುತ್ತಿದ್ದೀರಿ, ಗಾಡಿ ಸೈಡ್‌ಗೆ ಹಾಕಿ, ಪಾಸ್ ಇದೆಯೆ? ಎಂದು ಹೇಳುತ್ತಲೇ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಮಾಲೀಕರನ್ನು ತಡೆದು ವಿಚಾರಿಸಿದರು. ಬೈಕ್‌ನಲ್ಲಿ ದೇವಸ್ಥಾನಕ್ಕೆ ಹೊರಟವರು, ಅಂತ್ಯಕ್ರಿಯೆಗೆ ಹೊರಟವರು, ತರಕಾರಿ ತರಲು ಹೊರಟವರು, ನೆಂಟರ ಮನೆಗೆ ಹೊರಟವರು ಈ ವೇಳೆ ಕೈಗೆ ಸಿಕ್ಕಿ ಬಿದ್ದಿದ್ದಾರೆ.

‘ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ಧಾರ್ಮಿಕ ಸಭೆಗೆ ಹೋಗಿ ಬಂದವರ ಪಟ್ಟಿ ತಯಾರಿಸಲಾಗುತ್ತಿದೆ. ಬೆಂಗಳೂರಿನಿಂದ ಹೋದವರನ್ನು ನಾವೇ ಹೋಗಿ ಕೇಳುತ್ತೇವೆ. ವೈದ್ಯರ ಜತೆ ಚರ್ಚಿಸಿ ಅವರನ್ನ ಮನೆಯಲ್ಲೇ ಕ್ವಾರೆಂಟೈನ್‌ಗೆ ಒಳಪಡಿಸಬೇಕೊ ಅಥವಾ ಸರ್ಕಾರಿ ಕ್ವಾರಂಟೈನ್‌ಗೆ ಒಳಪಡಿಸಬೇಕೊ ಎಂಬ ಬಗ್ಗೆ ತೀರ್ಮಾನಿಸಲಾಗುವುದು. ನಾವು ಅವರನ್ನು ಹೆದರಿಸಲು ಹೋಗುತ್ತಿಲ್ಲ. ಪ್ರಕರಣವೂ ದಾಖಲಿಸುವುದಿಲ್ಲ. ಅವರ ಬಳಿ ಈ ಬಗ್ಗೆ ಮನವಿ ಮಾಡುತ್ತೇವೆ’ ಎಂದೂ ಭಾಸ್ಕರ್ ರಾವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT