ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಫ್ ಒಂದು ಗಾಳಿಪಟ: ಪ್ರತಿಕ್ರಿಯೆಗಳು

Last Updated 23 ಏಪ್ರಿಲ್ 2020, 1:03 IST
ಅಕ್ಷರ ಗಾತ್ರ
ADVERTISEMENT
""
""
""
""

ಬೆಂಗಳೂರು: ಲೈಫ್ ಎಂಬ ಗಾಳಿಪಟದ ಹಾರಾಟಕ್ಕೆ ಅನಿರೀಕ್ಷಿತ ಲಾಕ್‍ಡೌನ್ ತಂದೊಡ್ಡಿರುವ ಏರುಪೇರಿನಿಂದ ಜೀವನದಲ್ಲಾಗಿರುವ ಬದಲಾವಣೆ ಅನುಭವಗಳನ್ನು ಓದುಗರಿಂದ 'ಪ್ರಜಾವಾಣಿ' ಆಹ್ವಾನಿಸಿತ್ತು. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

ಬಹುಮಾನಿತ ಬರಹ |ಪ್ರಪಂಚ ಕಿರಿದಾಯಿತು

ಪ್ರಪಂಚ ಕಿರಿದಾಗುತ್ತದೆ ಎಂಬ ಆಡುಮಾತನ್ನು ಲಾಕ್‍ಡೌನ್ ನಿಜ ಮಾಡಿತು. ಹೊರ ಜಗತ್ತು ನೋಡಲಾರದೆ ಒಳಗೆ ಸೇರಿಕೊಂಡಿರುವ ನನ್ನ ಫ್ಲ್ಯಾಟ್ ಒಂದು ಪ್ರಪಂಚವಾಗಿಬಿಟ್ಟಿದೆ. ನಿಷ್ಕಲ್ಮಶ ನೀಲಿ ಆಕಾಶ, ಹಾರಾಡುವ ಪಕ್ಷಿಗಳು ಹಾಗೂ ಚಿಗುರೊಡೆಯುತ್ತಿರುವ ಗಿಡ ಮರಗಳಿಗೆ ಇದು ಸ್ವಾತಂತ್ರ್ಯದ ಸುಸಂದರ್ಭ. ಮನೆಯಲ್ಲಿರುವ ಹಳೆಯ ಪುಸ್ತಕಗಳನ್ನು ಮತ್ತೆ ಮತ್ತೆ ತಿರುವಿ ಹಾಕಿದಾಗ ಹೊಸ ಹೊಳಹುಗಳು ಹೊರಬರುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುಳ್ಳು ಮಾಹಿತಿಗಳೇ ನಗು ಮೂಡಿಸುತ್ತಿವೆ.

ಎಚ್.ಎಸ್.ಸುರೇಶ್, ಅಕ್ಷಯ ನಗರ

ದೇಹಶೈಲಿ ಬದಲಾವಣೆ

ಲಾಕ್‍ಡೌನ್‍ನಿಂದ ಮನೆಯಲ್ಲಿ ದೇಹದ ತೂಕ ಇಳಿಸಿಕೊಳ್ಳಲು ಸಮಯ ಸಿಕ್ಕಿದೆ ಎಂದುಕೊಂಡೆ. ಆದರೆ, ನಿತ್ಯ ಬಗೆಬಗೆಯ ತಿಂಡಿ ಮತ್ತು ಆಹಾರ ಸೇವನೆ ಮಾಡಿದ ಪರಿಣಾಮ ತೂಕ ಇನ್ನಷ್ಟು ಹೆಚ್ಚಾಗಿದೆ. ಶಾಲಾ ದಿನಗಳ ಬಳಿಕ ದೀರ್ಘಾವಧಿ ರಜೆ ಸಿಕ್ಕ ಸಂತೋಷದಲ್ಲಿದ್ದೆ. ಈಗ ರಜೆ ಕಳೆಯುವುದು ಯಾವಾಗ ಎಂದು ಬಕಪಕ್ಷಿಯಂತೆ ಕಾಯುತ್ತಿರುವೆ. ಒಂದೆಡೆ ಸಂಬಳದ ನಿರೀಕ್ಷೆಯಲ್ಲಿರುವ ನನಗೆ ವಾರದ ದಿನಗಳ ಅರಿವಾಗುತ್ತಿಲ್ಲ.

ಕಿರಣ್ ಕುಮಾರ್, ಬೆಂಗಳೂರು

ನೆಚ್ಚಿನ ಜೀವನಶೈಲಿ ಸಿಕ್ಕಿತು

ಯಾಂತ್ರಿಕ ಬದುಕಿನಿಂದ ಬೇಸತ್ತಿದ್ದ ನನಗೆ ಹೊಸ ಬದಲಾವಣೆಯ ತುರ್ತು ಅಗತ್ಯ ಇತ್ತು. ಕಚೇರಿ ಹಾಗೂ ಮನೆ ಕೆಲಸಗಳ ನಡುವೆ ಸಿಗುತ್ತಿದ್ದ ಬಿಡುವನ್ನು ಮೊಬೈಲ್ ನುಂಗಿ ಹಾಕುತ್ತಿತ್ತು. ಎಷ್ಟೋ ಬಾರಿ ಇಂತಹ ಜೀವನ ಬೇಡ ಅನಿಸಿದ್ದುಂಟು. ಇಂತಹ ಸಮಯದಲ್ಲಿ ಲಾಕ್‍ಡೌನ್ ನನ್ನ ಪಾಲಿಗೆ ವರವಾಗಿ ಬಂದು, ಬದುಕಿನಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು. ಸಿಕ್ಕಿರುವ ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು, ವ್ಯಾಯಾಮ ಮಾಡುವುದೂ ಸೇರಿ ನನ್ನ ಅಭಿರುಚಿಗಳದ್ದೇ ಆದಿಪತ್ಯ.

ಸುನೀತಾ ಬಾನಿ, ಬೆಂಗಳೂರು


ಪರೀಕ್ಷೆ ತಯಾರಿಗೆ ಸದಾವಕಾಶ

ಮೊದಲಿನಿಂದಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಾ ಬಂದ ನನಗೆ ಲಾಕ್‍ಡೌನ್ ಹೆಚ್ಚು ಸಮಯ ಕಲ್ಪಿಸಿದೆ. ಸ್ನೇಹಿತರೊಂದಿಗೆ ಸೇರಿ ಹೊರಗೆ ಕಾಲ ಕಳೆಯಲು ಈಗ ಸಾಧ್ಯವಾಗುತ್ತಿಲ್ಲ. ಮನೆಯಲ್ಲೇ ಇರುವ ಕಾರಣ ಓದಲು ಹೆಚ್ಚು ಸಮಯ ನನ್ನದಾಗಿದೆ. ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳ್ಳಲು ವ್ಯಾಯಾಮ ಮಾಡುತ್ತೇನೆ. ಸಾಧಕರ ಜೀವನ ಚರಿತ್ರೆಗಳನ್ನು ಓದುವ ಮೂಲಕ ಅವರ ಅಂಶಗಳನ್ನು ರೂಢಿಸಿಕೊಳ್ಳುತ್ತಿದ್ದೇನೆ. ಈ ನಡುವಿನ ಅವಧಿಯನ್ನು ಪರಿವಾರಕ್ಕೆ ಮೀಸಲಿಡುತ್ತೇನೆ.

ಬಸವರಾಜ ನರಗಟ್ಟಿ, ವಿಜಯನಗರ

ಮನೆ ಮನಸ್ಸುಗಳ ಬದಲಾವಣೆ

ಜೀವನವೆಂಬ ಗಾಳಿಪಟದ ಹಾರಾಟದಲ್ಲಿ ಏರುಪೇರು ಸಾಮಾನ್ಯ. ಇದಕ್ಕೆ ಲಾಕ್‍ಡೌನ್ ಕೂಡಾ ಒಂದು ಉದಾಹರಣೆ. ಒತ್ತಡದ ಜೀವನ ಸರಿದು, ನಿರಾತಂಕವಾಗಿ ದಿನ ಕಳೆಯುತ್ತಿದೆ. ಈ ಹಿಂದೆ ಮನೆಯವರು ಮನಸ್ಸು ಬಿಚ್ಚಿ ಮಾತನಾಡುತ್ತಿರಲಿಲ್ಲ. ಮನೆಯ ಕೆಲಸಗಳನ್ನು ಮಾಡುತ್ತಲೇ ಮನೆಮಂದಿ ಚರ್ಚೆಗಿಳಿಯುತ್ತೇವೆ. ಇದರಿಂದ ಆತ್ಮೀಯತೆ ಹೆಚ್ಚಾಗಿರುವುದು ನಿಜಕ್ಕೂ ಆಶ್ಚರ್ಯಕರ. ಎಲ್ಲರೂ ಕೂತು ಹರಟೆ ಹೊಡೆಯುವುದು ಹಾಗೂ ಸಿನಿಮಾ ವೀಕ್ಷಿಸುವುದು ನನ್ನ ಪಾಲಿಗೆ ಅಪರೂಪದ ಸಂಗತಿಯಾಗಿದೆ.

ವಿಜಯಲಕ್ಷ್ಮಿ , ಗಂಗಾನಗರ ಬಡಾವಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT