ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ನಲ್ಲಿ ಮನೆ ಬೀಗ ಮುರಿದು ಕಳವು

ಆರ್‌.ಟಿ.ನಗರ ಪೊಲೀಸರಿಂದ ಆರೋಪಿ ಬಂಧನ: ₹14.10 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
Last Updated 10 ನವೆಂಬರ್ 2020, 23:12 IST
ಅಕ್ಷರ ಗಾತ್ರ

ಬೆಂಗಳೂರು: ಅಪರಾಧ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದು ಪುನಃ ಕಳ್ಳತನ ಎಸಗುತ್ತಿದ್ದ ಆರೋಪಿ ಸಂತೋಷ್ ಅಲಿಯಾಸ್ ಸಂತು (36) ಎಂಬಾತನನ್ನು ಆರ್‌.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.

‘ಕೋಲಾರದ ವೇಮಗಲ್‌ ನಿವಾಸಿಯಾದ ಸಂತೋಷ್, 2009ರಿಂದಲೇ ಅಪರಾಧ ಕೃತ್ಯ ಎಸಗುತ್ತಿದ್ದಾನೆ. ಆತನಿಂದ ₹ 14.10 ಲಕ್ಷ ಮೌಲ್ಯದ ಚಿನ್ನಾಭರಣ, ಟಿ.ವಿ ಜಪ್ತಿ ಮಾಡಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದರು.

‘ಮಠದಹಳ್ಳಿ ಮುನೇಶ್ವರ್ ಬ್ಲಾಕ್ ನಿವಾಸಿ ಮುರಳೀಧರ್ ಎಂಬುವರು ಲಾಕ್‌ಡೌನ್‌ ಜಾರಿಯಲ್ಲಿದ್ದಾಗ ಮನೆಗೆ ಬೀಗ ಹಾಕಿಕೊಂಡು ಏಪ್ರಿಲ್ 3ರಂದು ಕುಟುಂಬ ಸಮೇತ ಸ್ವಂತ ಊರಿಗೆ ಹೋಗಿದ್ದರು. ಮೇ 13ರಂದು ವಾಪಸು ಮನೆಗೆ ಬಂದು ನೋಡಿದಾಗ, ಕಳ್ಳತನ ಆಗಿದ್ದು ಗಮನಕ್ಕೆ ಬಂದಿತ್ತು. ಈ ಬಗ್ಗೆ ದೂರು ನೀಡಿದ್ದರು.’

‘ಕಳ್ಳತನ ನಡೆದಿದ್ದ ಮನೆ ಸುತ್ತಮುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಹಲವು ಪುರಾವೆಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡಿದ್ದ ಆರೋಪಿ, ಬೀಗ ಒಡೆದು ಚಿನ್ನಾಭರಣ ಕದ್ದುಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಆತ ತಪ್ಪೊಪ್ಪಿಕೊಂಡಿದ್ದಾನೆ’ ಎಂದೂ ಹೇಳಿದರು.

‘ಪ್ರಕರಣವೊಂದರ ಸಂಬಂಧ 2019ರಲ್ಲಿ ಆರೋಪಿಯನ್ನು ಬಂಧಿಸಿದ್ದ ವಿದ್ಯಾರಣ್ಯಪುರ ಪೊಲೀಸರು, ಜೈಲಿಗೆ ಕಳುಹಿಸಿದ್ದರು. ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದಿದ್ದ ಆತ, ಪುನಃ ಕೃತ್ಯ ಎಸಗಲಾರಂಭಿಸಿದ್ದ. ನಗರದ ಹಲವು ಪ್ರದೇಶಗಳಲ್ಲಿ ಹಗಲಿನಲ್ಲಿ ಸುತ್ತಾಡುತ್ತಿದ್ದ ಆರೋಪಿ, ಮನೆಗಳನ್ನು ಗುರುತು ಮಾಡುತ್ತಿದ್ದ. ರಾತ್ರಿ ವೇಳೆ ಮನೆಗೆ ಹೋಗಿ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದ.’

‘ಆರೋಪಿ ಬಂಧನದಿಂದ, ಆರ್‌.ಟಿ.ನಗರ ಹಾಗೂ ಕೆ.ಆರ್‌.ಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಜಾಲಹಳ್ಳಿ, ಸುಬ್ರಹ್ಮಣ್ಯನಗರ ಹಾಗೂ ಬೈಯಪ್ಪನಹಳ್ಳಿ ಠಾಣೆಯಲ್ಲೂ ಆರೋಪಿ ವಿರುದ್ಧ ಪ್ರಕರಣಗಳಿವೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT