ಶುಕ್ರವಾರ, ಜನವರಿ 17, 2020
20 °C

‘ಲೋಕಾಯುಕ್ತ ಸ್ವಾಯತ್ತೆ ಕುಂಠಿತಗೊಂಡಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆಯಾಗಿರುವುದರಿಂದ ಲೋಕಾಯುಕ್ತ ಸಂಸ್ಥೆಯ ಸ್ವಾಯತ್ತೆ ಇನಿತೂ ಕುಂಠಿತಗೊಂಡಿಲ್ಲ. ರಾಜ್ಯ ಸರ್ಕಾರ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಕಟಿಬದ್ಧವಾಗಿದೆ’ ಎಂದು ಅಡ್ವೊಕೇಟ್‌ ಜನರಲ್‌ ಹೈಕೋರ್ಟ್‌ಗೆ ತಿಳಿಸಿದರು.

ಎಸಿಬಿ ರಚನೆ ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಅರ್ಜಿಯೂ ಸೇರಿದಂತೆ 20ಕ್ಕೂ ಹೆಚ್ಚು ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಹಾಗೂ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ, ‘ಎಸಿಬಿ, ಲೋಕಾಯುಕ್ತಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆಯೇ ಹೊರತು, ಲೋಕಾಯುಕ್ತವನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿಲ್ಲ. ಆದಾಗ್ಯೂ ಇಂತಹ ಸಂಸ್ಥೆಗಳನ್ನು ಎಂತಹ ಪ್ರಾಮಾಣಿಕ ಅಧಿಕಾರಿಗಳು ನಡೆಸಿಕೊಂಡು ಹೋಗುತ್ತಾರೆ ಎಂಬುದರ ಮೇಲೆ ಅವುಗಳ ಯಶಸ್ಸು ಅಡಗಿದೆ’ ಎಂದು ತಿಳಿಸಿದರು.

ಆದರೆ ಇದನ್ನು ಅಲ್ಲಗಳೆದ ಲೋಕಾಯುಕ್ತ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ‘ಎಸಿಬಿ ರಚನೆ ಮಾಡುವ ಮೂಲಕ ಸರ್ಕಾರ ಲೋಕಾಯುಕ್ತಕ್ಕೆ ನೀಡಿದ್ದ ಪೊಲೀಸ್‌ ತನಿಖಾಧಿಕಾರವನ್ನು ಕಿತ್ತುಕೊಂಡಿದೆ. ಲೋಕಾಯುಕ್ತದ ಅಧಿಕಾರಗಳನ್ನು ದುರ್ಬಲಗೊಳಿಸಲಾಗಿದೆ. ಇದರಿಂದಾಗಿ ‌ಲೋಕಾಯುಕ್ತ ಹಲ್ಲಿಲ್ಲದ ಹಾವಿನಂತಾಗಿದೆ’ ಎಂದು ತಿಳಿಸಿದರು.

‘ಈಗಿನ ಪರಿಸ್ಥಿತಿಯಲ್ಲಿ ಎಡಿಜಿಪಿ ಅವರಿಗೆ ಈ ಮೊದಲು ಇದ್ದ ಪೊಲೀಸ್ ತನಿಖಾಧಿಕಾರ ಕಿತ್ತುಕೊಳ್ಳಲಾಗಿದೆ. ಇದರಿಂದಾಗಿ ಅವರೀಗ ಕೇವಲ ವಿಚಾರಣಾ ಅಧಿಕಾರಿಗಳಾಗಿದ್ದಾರೆ. ಲೋಕಾಯುಕ್ತ ಎಂಬುದು ಒಂದು ವಿಚಾರಣಾ ಆಯೋಗದಂತಾಗಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಲೋಕಾಯುಕ್ತಕ್ಕೆ ಶೋಧನೆ ಮತ್ತು ತನಿಖಾಧಿಕಾರ ಇದೆಯಲ್ಲಾ, ಮೇಲ್ನೋಟಕ್ಕೆ ಲೋಕಾಯುಕ್ತಕ್ಕೂ ಸರ್ಕಾರಕ್ಕೂ ಏನೋ ಸಂಘರ್ಷ ಇದ್ದಂತಿದೆಯಲ್ಲಾ’ ಎಂದು ಪ್ರಶ್ನಿಸಿತು.

ಈ ಮಾತಿಗೆ ಹಾರನಹಳ್ಳಿ ಅವರು, ‘ಸರ್ಕಾರದ ಆದೇಶದ ಪ್ರಕಾರ ಲೋಕಾಯುಕ್ತ ಸ್ವತಂತ್ರ ತನಿಖೆ ನಡೆಸ
ಬೇಕು. ಆದರೆ ಈಗ, ತನಿಖಾಧಿಕಾರಿ ವಿಚಾರಣೆ ಮಾಡಿ ಸರ್ಕಾರಕ್ಕೆ ವರದಿ ಕಳಿಸಬೇಕಿದೆ. ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆ ಮಾಡುವಂತಿಲ್ಲ. ಇದರಿಂದಾಗಿ ಭ್ರಷ್ಟಾಚಾರ ತಡೆ ಅಸಾಧ್ಯವಾಗಿದೆ. ಲೋಕಾಯುಕ್ತದ ಮೂಲ ಉದ್ದೇಶವೇ ಸೋತು ಹೋಗಿದೆ’ ಎಂದು ವಿವರಿಸಿದರು.

ವಿಚಾರಣೆಯನ್ನು ಫೆಬ್ರುವರಿ 7ಕ್ಕೆ ಮುಂದೂಡಲಾಗಿದೆ.

ಆಕ್ಷೇಪಣೆ ಏನು?: ‘ಎಸಿಬಿ, ಕರ್ನಾಟಕ ಪೊಲೀಸ್‌ ಕಾಯ್ದೆ–1963ಕ್ಕೆ ಅನುಗುಣವಾಗಿ ರಚನೆಯಾಗಿಲ್ಲ. ಪೊಲೀಸ್ ಠಾಣೆ ಸ್ಥಾನಮಾನ ನೀಡಲು ಈ ಕಾಯ್ದೆಯಡಿಯಲ್ಲೇ ಅಧಿಸೂಚನೆ ಹೊರಡಿಸಬೇಕು. ಆದರೆ ರಾಜಕೀಯ ಉದ್ದೇಶಗಳಿಂದ ಇದನ್ನು ರಚನೆ ಮಾಡಲಾಗಿದೆ. ಹಾಗೂ ಎಸಿಬಿಗೆ ಪೊಲೀಸ್‌ ಠಾಣೆಯ ಅಧಿಕಾರ ವ್ಯಾಪ್ತಿ ಇಲ್ಲ’ ಎಂಬುದು ಅರ್ಜಿದಾರರ ಆಕ್ಷೇಪ. 2016ರ ಮಾರ್ಚ್‌ 14ರಿಂದ ಜಾರಿಗೆ ಬರುವಂತೆ ಎಸಿಬಿ ರಚನೆ ಮಾಡಲಾಗಿದೆ.

ಸಿದ್ದರಾಮಯ್ಯ ಟ್ವೀಟ್‌

‘ಸರ್ಕಾರ ನ್ಯಾಯಾಲಯದ ಮುಂದೆ ಎಸಿಬಿಯನ್ನು ಸಮರ್ಥಿಸಿಕೊಂಡಿರುವುದು, ಮಾಡಿದ ವಾಂತಿಯನ್ನೇ ಮತ್ತೆ ತಿಂದಷ್ಟು ಅಸಹ್ಯ ಅಲ್ಲವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದ್ದಾರೆ.

‘ಎಸಿಬಿ ಸ್ಥಾಪಿಸಿದಾಗ ಬಿಜೆಪಿಯವರು ನಮ್ಮ ಮೇಲೆ ಮುಗಿಬಿದ್ದು ಆರೋಪಗಳ ಸುರಿಮಳೆಗೈದಿದ್ದರು. ಆದರೆ, ಈಗ ಅದೇ ಬಿಜೆಪಿಯವರು ಯಾವ ಮುಖ ಹೊತ್ತು ಸಮರ್ಥಿಸಿಕೊಂಡಿದ್ದಾರೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

***

* 2019ರ ಮಾರ್ಚ್‌ 14ರಿಂದ ಎಸಿಬಿ ಸ್ವೀಕರಿಸಿರುವ ದೂರುಗಳ ಸಂಖ್ಯೆ–19,109

* ಅನಾಮಧೇಯ ಹಾಗೂ ಸಾಕ್ಷ್ಯವಿಲ್ಲದೆ ಮುಕ್ತಾಯಗೊಳಿಸಿದ ಪ್ರಕರಣಗಳು–11,996

* ಎಫ್‌ಐಆರ್ ದಾಖಲು ಮಾಡಿದ ಪ್ರಕರಣಗಳು–1,027

* ತನಿಖೆಗೆ ಬಾಕಿ ಇರುವ ಪ್ರಕರಣಗಳು–2,604

* ಇತರೆ ಇಲಾಖೆಗೆ ವರ್ಗಾಯಿಸಿರುವ ದೂರುಗಳು–3,417

* ಇಲಾಖಾ ತನಿಖೆಗೆ ಶಿಫಾರಸು ಮಾಡಿರುವ ಪ್ರಕರಣಗಳು–65

ಪ್ರತಿಕ್ರಿಯಿಸಿ (+)