ಬೆಂಗಳೂರು: ಯುವಕನನ್ನು ಅಕ್ರಮವಾಗಿ ಕೂಡಿಹಾಕಿ ಲಾಂಗ್‌ನಿಂದ ಹಲ್ಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಅಂದ್ರಹಳ್ಳಿಯ ಅರಳಿಮರ ವೃತ್ತದ ನಿವಾಸಿ ಅಭಿಷೇಕ್ (19) ಹಾಗೂ ದರ್ಶನ್ (18) ಬಂಧಿತರು. ಇಬ್ಬರಿಬ್ಬರೂ ತಮ್ಮದೇ ಪ್ರದೇಶದ ಬಾಲಕರ ಜೊತೆ ಸೇರಿಕೊಂಡು ಕೃತ್ಯ ಎಸಗಿದ್ದರು. ಬಂಧಿತ ಇಬ್ಬರು ಬಾಲಕರ ಹೆಸರು ಬಹಿರಂಗಪಡಿಸಲಾಗದು’ ಎಂದು ಪೊಲೀಸರು ಹೇಳಿದರು.
‘ಯುವಕನ ಮೇಲೆ ನಡೆದಿದ್ದ ಹಲ್ಲೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಅದರನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘9ನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿದ್ದ ಆರೋಪಿ ಅಭಿಷೇಕ್, ಪೀಣ್ಯದ ಟಿವಿಎಸ್ ಕಂಪನಿಯ ಪ್ಯಾಕಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಪಿಯುಸಿ ಮುಗಿಸಿದ್ದ ದರ್ಶನ್, ಉಬರ್ ಕ್ಯಾಬ್ ಕಂಪನಿಯಲ್ಲಿ ಟೆಲಿ ಕಾಲಿಂಗ್ ಕೆಲಸ ಮಾಡುತ್ತಿದ್ದ. ಇವರಿಬ್ಬರು, ಕೆಲ ಹುಡುಗರ ತಂಡ ಕಟ್ಟಿಕೊಂಡು ಅಂದ್ರಹಳ್ಳಿಯಲ್ಲಿ ಸುತ್ತಾಡುತ್ತಿದ್ದರು. ಎಲ್ಲರೂ ತಮಗೆ ಬಾಸ್ ಎನ್ನಬೇಕೆಂದು ಹೇಳುತ್ತಿದ್ದರು. ಅಭಿಷೇಕ್ ಹಾಗೂ ಇತರರು, ರೌಡಿ ರೀತಿಯಲ್ಲಿ ವರ್ತಿಸುತ್ತಿದ್ದರು. ತಮ್ಮನ್ನು ನೋಡಿ ಎಲ್ಲರೂ ಹೆದರಬೇಕೆಂದು ಬಯಸುತ್ತಿದ್ದರು’ ಎಂದು ಹೇಳಿದರು.
ಹಲ್ಲೆ ಮಾಡಿ ವಿಡಿಯೊ ಚಿತ್ರೀಕರಣ: ‘ಅಂದ್ರಹಳ್ಳಿಯ ಯುವಕನೊಬ್ಬರು, ಬಾಸ್ ಎನ್ನುವುದಿಲ್ಲವೆಂದು ವಾದಿಸಿದ್ದರು. ಕೋಪಗೊಂಡಿದ್ದ ಆರೋಪಿಗಳು, ಯುವಕನನ್ನು ಅಪಹರಿಸಿ ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಬಾಸ್ ಎಂದು ಏಕೆ ಕರೆಯಬೇಕು’ ಎಂದು ಯುವಕ ಪುನಃ ಪ್ರಶ್ನಿಸಿದ್ದ. ಕೋಪಗೊಂಡಿದ್ದ ಆರೋಪಿಗಳು, ಯುವಕನಿಗೆ ಲಾಂಗ್‌ನಿಂದ ಹೊಡೆದಿದ್ದರು. ‘ಬಾಸ್ ಎನ್ನುವವರೆಗೂ ಬಿಡುವುದಿಲ್ಲ’ ಎಂದು ಚಿತ್ರಹಿಂಸೆ ನೀಡಿದ್ದರು. ಇದರ ವಿಡಿಯೊವನ್ನು ಚಿತ್ರೀಕರಿಸಿದ್ದ ಆರೋಪಿಯೊಬ್ಬ, ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದ. ‘ಬಾಸ್ ಎನ್ನದಿದ್ದರೆ, ಇದೇ ಶಿಕ್ಷೆ’ ಎಂದು ಬರೆದುಕೊಂಡಿದ್ದ.’
‘ವಿಡಿಯೊ ಬಗ್ಗೆ ಮಾಹಿತಿ ಬರುತ್ತಿದ್ದಂತೆ, ಘಟನೆ ನಡೆದ ಸ್ಥಳವನ್ನು ಪತ್ತೆ ಮಾಡಲಾಯಿತು. ನಂತರ, ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.