ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸೀರ್‌ ಹುಸೇನ್‌, ಹನುಮಂತಯ್ಯ ಚಂದ್ರಶೇಖರ್‌ ‘ಕೈ’ ಅಭ್ಯರ್ಥಿಗಳು ಕಮಲ ಹಿಡಿದ ರಾಜೀವ್‌ ಚಂದ್ರಶೇಖರ್‌

Last Updated 11 ಮಾರ್ಚ್ 2018, 20:25 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಈ ತಿಂಗಳ 23ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, ಎಐಸಿಸಿ ವಕ್ತಾರ ನಾಸೀರ್‌ ಹುಸೇನ್‌, ಕೆಪಿಸಿಸಿ ಉಪಾಧ್ಯಕ್ಷ ಎಲ್‌. ಹನುಮಂತಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಸಿ. ಚಂದ್ರಶೇಖರ್‌ ಅವರನ್ನು ಕಣಕ್ಕಿಳಿಸಿದೆ.

ಬಿಜೆಪಿಯೊಳಗೆ ಇಡೀ ದಿನ ನಾಟಕೀಯ ಬೆಳವಣಿಗೆಗಳು ನಡೆದು ರಾತ್ರಿ ವರಿಷ್ಠರು, ರಾಜ್ಯಸಭೆಯಿಂದ ನಿವೃತ್ತಿಯಾಗುತ್ತಿರುವ ಹಾಲಿ ಸದಸ್ಯ ರಾಜೀವ್‌ ಚಂದ್ರಶೇಖರ್‌ ಹೆಸರನ್ನು ಪ್ರಕಟಿಸಿದರು. ರಾಯಚೂರು ವಕೀಲ, ವಿಧಾನ ‍ಪರಿಷತ್‌ ಮಾಜಿ ಸದಸ್ಯ ಎನ್‌. ಶಂಕರಪ್ಪ ಅವರಿಗೆ ನಾಮಪತ್ರ ಸಿದ್ಧಪಡಿಸಿಕೊಳ್ಳುವಂತೆ ಬೆಳಿಗ್ಗೆ ಸೂಚಿಸಲಾಗಿತ್ತು. ದಿಢೀರನೆ ರಾಜೀವ್‌ ಚಂದ್ರಶೇಖರ್‌ ಹೆಸರಿಗೆ ಹಸಿರು ನಿಶಾನೆ ತೋರಲಾಯಿತು.

ಶಾಸಕರ ಸಂಖ್ಯಾ ಬಲದ ಆಧಾರದಲ್ಲಿ ಕಾಂಗ್ರೆಸ್‌ ಎರಡು ಸ್ಥಾನ ಮತ್ತು ಬಿಜೆಪಿ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದು. ನಾಲ್ಕನೇ ಸ್ಥಾನಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಸಹ ಸದಸ್ಯರು ಹಾಗೂ ಪಕ್ಷೇತರರ ಮತಗಳ ಮೇಲೆ ಕಣ್ಣಿಟ್ಟು ಕಾಂಗ್ರೆಸ್‌ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಜೆಡಿಎಸ್‌ ಅಭ್ಯರ್ಥಿಗೆ 30 ಸದಸ್ಯರ ಬಲವಿದ್ದು, ಗೆಲುವಿಗೆ ಇನ್ನೂ 14 ಮತಗಳು ಕೊರತೆಯಾಗಲಿವೆ. ಪ್ರತಿ ಅಭ್ಯರ್ಥಿ ಗೆಲ್ಲುವುದಕ್ಕೆ ತಲಾ 44 ಮತಗಳು ಬೇಕಾಗಲಿದೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿದೇಶ ಪ್ರವಾಸದಿಂದ ಮರಳಿದ ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಯಿತು. ಆದರೆ, ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಿನ್ನಡೆಯೆಂದೇ ಪಕ್ಷದ ವಲಯದೊಳಗೆ ವಿಶ್ಲೇಷಿಸಲಾಗುತ್ತಿದೆ. ಸಿದ್ದರಾಮಯ್ಯ, ಕೋಲಾರದ ನಜೀರ್ ಅಹಮದ್‌, ಉದ್ಯಮಿ ಚೆನ್ನಾರೆಡ್ಡಿ ಅವರಿಗೆ ಟಿಕೆಟ್‌ ಕೊಡಿಸಲು ಪ್ರಯತ್ನಿಸಿದ್ದರು. ಹಾಗೆ, ರೆಡ್ಡಿ ವೀರಣ್ಣ ಪರ ಹಿರಿಯ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಲಾಬಿ ಮಾಡಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆದರೆ, ಹೊರಗಿನ ಅಭ್ಯರ್ಥಿಗಳನ್ನು ರಾಜ್ಯಸಭೆಗೆ ಕಳುಹಿಸಬಾರದೆಂದು ಮುಖ್ಯಮಂತ್ರಿ ಪಟ್ಟು ಹಿಡಿದಿದ್ದರು. ರಾಜ್ಯದವರನ್ನೇ  ಕಣಕ್ಕಿಳಿಸುವ ಮೂಲಕ ಬೇಡಿಕೆಗೆ ಹೈಕಮಾಂಡ್‌ ಮನ್ನಣೆ ನೀಡಿದೆ. ಹುಸೇನ್‌ ಹೆಸರನ್ನು ರಾಹುಲ್‌ ಗಾಂಧಿಯವರೇ ಸೂಚಿಸಿದ್ದಾರೆ. ಒಕ್ಕಲಿಗ ಜಾತಿಯ ಚಂದ್ರಶೇಖರ್‌ ಪರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಜಿ. ಪರಮೇಶ್ವರ್‌ ಒತ್ತಡ ಹೇರಿದ್ದರು. ಒಳ ಮೀಸಲಾತಿ ವಿಷಯದಲ್ಲಿ ನಡೆಯುತ್ತಿರುವ ತಿಕ್ಕಾಟದ ಹಿನ್ನೆಲೆಯಲ್ಲಿ ಎಡಗೈ ಬಣದವರನ್ನು ಸಮಾಧಾನಪಡಿಸಲು ಎಲ್‌. ಹನುಮಂತಯ್ಯ ಅವರಿಗೆ ಟಿಕೆಟ್‌ ಕೊಡಲಾಗಿದೆ ಎಂದೂ ಮೂಲಗಳು ವಿವರಿಸಿವೆ.

ರಾಹುಲ್‌ ಇತ್ತೀಚೆಗೆ ಹೈದರಾಬಾದ್‌– ಕರ್ನಾಟಕದಲ್ಲಿ ಪ್ರವಾಸ ಮಾಡಿದ ಸಮಯದಲ್ಲೂ ಒಳ ಮೀಸಲಾತಿ ಬಗೆಗಿನ ಸಂಘರ್ಷ ಗಮನಕ್ಕೆ ಬಂದಿತ್ತು. ಅಲ್ಲದೆ, ಬಿಜೆಪಿ ಜತೆ ಗುರುತಿಸಿಕೊಂಡಿರುವ ಎಡಗೈ ಪಂಗಡವನ್ನು ತನ್ನೆಡೆಗೆ ಸೆಳೆಯಲು ಈ ಬಣಕ್ಕೆ ಅವಕಾಶ ನೀಡಲಾಗಿದೆ ಎನ್ನಲಾಗಿದೆ.

ಹನುಮಂತಯ್ಯ ಅವರಿಗೆ ಟಿಕೆಟ್‌ ನೀಡುವಂತೆ ಸಚಿವ ಎಚ್‌. ಆಂಜನೇಯ ಮತ್ತು ಸಂಸದ ವಿ. ಮುನಿಯಪ್ಪ ಒತ್ತಾಯಿಸಿದ್ದರು. ಜೆಡಿಎಸ್‌ ಅಭ್ಯರ್ಥಿಯಾಗಿ ಬಿ.ಎಂ. ಫಾರೂಕ್‌ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಸೋಮವಾರ ಅವರು ಮತ್ತೊಂದು ಸೆಟ್‌ ನಾಮಪ‍ತ್ರ ಹಾಕಲಿದ್ದಾರೆ ಎಂದು ಜೆಡಿಎಸ್‌ ಮೂಲಗಳು ಹೇಳಿವೆ.

ಶಂಕರಪ್ಪಗೆ ಕೈ ತಪ್ಪಿದ ಅದೃಷ್ಟ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ರಾಯಚೂರಿನ ಶಂಕರಪ್ಪ ಅವರಿಗೆ ರಾಜ್ಯಸಭೆ ಟಿಕೆಟ್‌ ಸ್ವಲ್ಪದರಲ್ಲೇ ಕೈತಪ್ಪಿದೆ.

ಶನಿವಾರ ರಾತ್ರಿವರೆಗೂ ರಾಜೀವ್‌ ಚಂದ್ರಶೇಖರ್‌ ಹಾಗೂ ವಿಜಯ ಸಂಕೇಶ್ವರ್‌ ಹೆಸರು ಚಲಾವಣೆಯಲ್ಲಿದ್ದವು. ವರಿಷ್ಠರು, ಇವರಿಬ್ಬರನ್ನೂ ಬಿಟ್ಟು ಪಕ್ಷಕ್ಕಾಗಿ ದುಡಿಯುತ್ತಿರುವ ರಾಜ್ಯದ ನಿಷ್ಠಾವಂತರೊಬ್ಬರಿಗೆ ಟಿಕೆಟ್‌ ಕೊಡಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿದ್ದವು.

ಭಾನುವಾರ ಬೆಳಿಗ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಶಂಕರಪ್ಪ ಅವರಿಗೆ ಕರೆ ಮಾಡಿ, ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಹೇಳಿದ್ದರು. ಅದರಂತೆ, ಸಿದ್ಧತೆ ಮಾಡಿಕೊಳ್ಳುವಾಗಲೇ ಸಂಜೆ ಮತ್ತೊಮ್ಮೆ ಕರೆ ಮಾಡಿದ ಯಡಿಯೂರಪ್ಪ ದಯವಿಟ್ಟು ಕ್ಷಮಿಸಿ, ರಾಜೀವ್‌ ಚಂದ್ರಶೇಖರ್‌ ಹೆಸರು ಅಂತಿಮಗೊಂಡಿದೆ ಎಂದು ತಿಳಿಸಿದ್ದಾಗಿ ಮೂಲಗಳು ಸ್ಪಷ್ಟಪಡಿಸಿವೆ.

2011ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿದ್ದ ಶಂಕರಪ್ಪ ಆಗ ಮುಖ್ಯಮಂತ್ರಿ ಹುದ್ದೆಗೆ ನೇಮಕಗೊಂಡಿದ್ದ ಡಿ.ವಿ. ಸದಾನಂದ ಗೌಡರಿಗೆ ಸ್ಥಾನ ಬಿಟ್ಟುಕೊಟ್ಟಿದ್ದರು. ಆನಂತರ ಅವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT