ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಟರಿ ಹೆಸರಿನಲ್ಲಿ ವಂಚಿಸಿದ್ದವರ ಬಂಧನ

Last Updated 18 ಮಾರ್ಚ್ 2021, 17:01 IST
ಅಕ್ಷರ ಗಾತ್ರ

ಬೆಂಗಳೂರು: ಲಾಟರಿ ಹಾಗೂ ಲಕ್ಕಿ ಡ್ರಾ ಹೆಸರಿನಲ್ಲಿ ಸಾರ್ವಜನಿಕರನ್ನು ನಂಬಿಸಿ ಶುಲ್ಕದ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಮೂವರನ್ನು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಅಪ್ಪಾಜಿ ಗಂಗಾರಾಂ ಹಲ್ಕೇಕರ್ (30), ಸುರೇಶ್ ಮಲ್ಲಪ್ಪ ಅಗಸರ (35) ಹಾಗೂ ಗದಗದ ಲಕ್ಷ್ಮೇಶ್ವರ ತಾಲೂಕಿನ ಮಹಾಂತೇಶ್ (30) ಬಂಧಿತರು. ಪ್ರಕರಣ ಪ್ರಮುಖ ಆರೋಪಿ ಎನ್ನಲಾದ ಮುಂಬೈನ ಹರ್ಷಿದ್ ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಆರೋಪಿಗಳಿಂದ ವಂಚನೆಗೀಡಾಗಿದ್ದ ಹನುಮಂತರಾಯಪ್ಪ ಎಂಬುವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಇನ್‌ಸ್ಪೆಕ್ಟರ್ ಎಲ್‌.ವೈ ರಾಜೇಶ್ ಹಾಗೂ ಪಿಎಸ್‌ಐ ಲಕ್ಷ್ಮಿ ಮೆಂಡಿಗೇರಿ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ’ ಎಂದೂ ತಿಳಿಸಿದರು.

‘ಆನ್‌ಲೈನ್‌ ಮೂಲಕ ವಂಚನೆ ಮಾಡುವುದರಲ್ಲಿ ಪರಿಣಿತಿ ಹೊಂದಿದ್ದ ಹರ್ಷಿದ್, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೋಟೆಲೊಂದರಲ್ಲಿ ಬಾಣಸಿಗನಾಗಿದ್ದ ಅಪ್ಪಾಜಿಯನ್ನು ಪರಿಚಯ ಮಾಡಿಕೊಂಡಿದ್ದ. ನಂತರ ಇಬ್ಬರೂ ಸೇರಿ ಇತರ ಸಹಚರರ ಜೊತೆ ಕೃತ್ಯ ಎಸಗಲಾರಂಭಿಸಿದ್ದರು. ಪರಿಚಯಸ್ಥರ ಬ್ಯಾಂಕ್ ಖಾತೆ ವಿವರ ಪಡೆದು ಕೃತ್ಯಕ್ಕೆ ಬಳಸುತ್ತಿದ್ದರು. ಖಾತೆಯೊಂದರ ಮಾಹಿತಿಯಿಂದಲೇ ಆರೋಪಿಗಳು ಸಿಕ್ಕಿಬಿದ್ದರು.’

‘ಪ್ರತಿಷ್ಠಿತ ಕಂಪನಿ ಹೆಸರಿನಲ್ಲಿ ಸಾರ್ವಜನಿಕರಿಗೆ ಸಂದೇಶ ಕಳುಹಿಸುತ್ತಿದ್ದ ಆರೋಪಿಗಳು, ‘ಲಕ್ಷಾಂತರ ರೂಪಾಯಿ ಮೌಲ್ಯದ ಲಾಟರಿ ಬಂದಿದೆ. ತೆರಿಗೆ ಹಾಗೂ ಇತರೆ ಶುಲ್ಕ ಪಾವತಿ ಮಾಡಿದರೆ ಹಣ ಬಿಡುಗಡೆ ಮಾಡುತ್ತೇವೆ’ ಎನ್ನುತ್ತಿದ್ದರು. ಸಂದೇಶ ನಂಬಿದ್ದ ಸಾರ್ವಜನಿಕರು ಹಣ ಪಾವತಿ ಮಾಡುತ್ತಿದ್ದರು. ಆ ನಂತರ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗುತ್ತಿದ್ದರು’ ಎಂದೂ ಅಧಿಕಾರಿ ವಿವರಿಸಿದರು.

‘ದೂರುದಾರ ಹನುಮಂತರಾಯಪ್ಪ ಅವರನ್ನು ಆನ್‌ಲೈನ್ ಮೂಲಕ ಸಂಪರ್ಕಿಸಿದ್ದ ಆರೋಪಿಗಳು, ₹ 35 ಲಕ್ಷ ಲಾಟರಿ ಆಮಿಷವೊಡ್ಡಿ ₹ 25 ಸಾವಿರ ಪಡೆದು ವಂಚಿಸಿದ್ದರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT