ಗುರುವಾರ , ಜೂಲೈ 9, 2020
23 °C

ಪ್ರೇಯಸಿಗೆ ಮಚ್ಚಿನಿಂದ ಹಲ್ಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರೇಯಸಿಯನ್ನು ಮಚ್ಚಿನಿಂದ ಕೊಚ್ಚಿ ಪರಾರಿಯಾದ ಪ್ರಿಯಕರ, ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಾನು ಪ್ರೀತಿಸುತ್ತಿದ್ದ ಮದ್ದೂರಿನ ಯುವತಿಯ ತಲೆ, ಕಾಲು, ಹೊಟ್ಟೆ ಭಾಗಕ್ಕೆ ಬುಧವಾರ ಬೆಳಿಗ್ಗೆ 11.30ರ ಸುಮಾರಿಗೆ ನಾಗರಬಾವಿ ಬಳಿ ಅನ್ನಪೂರ್ಣೇಶ್ವರಿ ನಗರದ ವಿಶಾಲ್‌ ಮಾರ್ಟ್‌ ಸಮೀಪ ಮಚ್ಚಿನಿಂದ ಹಲ್ಲೆ ನಡೆಸಿದ್ದ ಗಿರೀಶ್‌ ಎಂಬಾತ ಬಳಿಕ ತಲೆಮರೆಸಿಕೊಂಡಿದ್ದ. ಗಾಯಗೊಂಡಿರುವ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ, ಸ್ಥಳದಿಂದ ಪರಾರಿಯಾಗಿದ್ದ ಗಿರೀಶ್‌, ಮಾಗಡಿ ರಸ್ತೆಯ ತಾವರೆಕೆರೆ ಠಾಣಾ ವ್ಯಾಪ್ತಿಯ ಗಾಣಕಲ್‌ ಪೆದ್ದಪ್ಪನಪಾಳ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನನ್ನು ವಿವಾಹವಾಗಲು ಪ್ರೇಯಸಿ ನಿರಾಕರಿಸಿದ್ದೇ ಆತ ಈ ಕೃತ್ಯ ಎಸಗಲು ಕಾರಣ ಎನ್ನಲಾಗಿದೆ. ಬಳಿಕ ಸಿಕ್ಕಿಹಾಕಿಕೊಳ್ಳುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.

ಕಾಲೇಜು ದಿನಗಳಿಂದಲೇ ಗಿರೀಶ್‌ ಮತ್ತು ಯುವತಿ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಓದು ಮುಗಿದ ಬಳಿಕ ಬೆಂಗಳೂರಿಗೆ ಬಂದಿದ್ದ ಯುವತಿ ಪಾಪರೆಡ್ಡಿಪಾಳ್ಯದಲ್ಲಿ ವಾಸವಿದ್ದಳು. ಅಲ್ಲದೆ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಖಾಸಗಿ ಆಸ್ಪತ್ರೆಯೊಂದರಲ್ಲಿ ಗಿರೀಶ್, ಸೆಕ್ಯೂರಿಟಿ ಸೂಪರ್ ವೈಸರ್ ಆಗಿದ್ದ. ಕೆಲವು ತಿಂಗಳುಗಳಿಂದ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು.

ಇಬ್ಬರ ನಡುವಿನ ಗಲಾಟೆ ಹಿಂದೊಮ್ಮೆ ಪೊಲೀಸ್ ಠಾಣೆಯವರೆಗೂ ಹೋಗಿತ್ತು. ಬಳಿಕ ರಾಜಿ ಮಾಡಿಕೊಂಡಿದ್ದ ಇಬ್ಬರೂ, ಸುಮ್ಮನಾಗಿದ್ದರು. ಆದರೆ, ಗಿರೀಶ್‌ ಮತ್ತೆ ಆ ಯುವತಿಯ ಬೆನ್ನುಬಿದ್ದಿದ್ದ. ಈ ವಿಷಯ ಗೊತ್ತಾಗಿ ಆಕೆಯ ಮನೆಯವರು ಜೂನ್ ತಿಂಗಳಲ್ಲಿ ಆಕೆಗೆ ಮದುವೆ ಮಾಡಲು ತಯಾರಿ ನಡೆಸಿದ್ದರು ಎನ್ನಲಾಗಿದೆ. ಈ ವಿಷಯ ತಿಳಿದ ಬಳಿಕ ಗಿರೀಶ್ ಕೋಪಗೊಂಡಿದ್ದ. ಬಟ್ಟೆ ಖರೀದಿಗೆ ನಗರಕ್ಕೆ ಬಂದಿದ್ದ ವೇಳೆ ಗಿರೀಶ್ ಆಕೆಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು