ಬೆಂಗಳೂರು: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಕೊರತೆಯಿಂದಾಗಿ ನಗರದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಬಂದ್ ಆಗುತ್ತಿವೆ. ಅಲ್ಲದೆ ಪೇಯಿಂಗ್ ಗೆಸ್ಟ್ (ಪಿ.ಜಿ) ಮತ್ತು ಸಣ್ಣ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ.

ಗುರುವಾರ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಗಾಂಧಿಬಜಾರ್, ಮೆಜೆಸ್ಟಿಕ್, ಶ್ರೀರಾಮಪುರ, ವಿಜಯನಗರ, ಯಶವಂತಪುರ, ರಾಜಾಜಿನಗರ, ಮಾಗಡಿ ರಸ್ತೆ, ಮೈಸೂರು ರಸ್ತೆ ಮತ್ತು ಕನಕಪುರ ರಸ್ತೆಗಳಲ್ಲಿ ಸಣ್ಣ, ಮಧ್ಯಮ ಹೋಟೆಲ್ಗಳು ಬಂದ್ ಆಗಿವೆ. ಕೆಲವು ಹೋಟೆಲ್ಗಳು ವಿದ್ಯುತ್, ಕಲ್ಲಿದ್ದಲು, ಸೌದೆ ಬಳಸಿ ಅಡುಗೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿವೆ.

‘ಗ್ರಾಹಕರಿಗೆ ಆಗಿರುವ ಅನನುಕೂಲಕ್ಕೆ ವಿಷಾದಿಸುತ್ತೇವೆ’ ಎಂಬ ಫಲಕವನ್ನು ಹಲವೆಡೆ ಹಾಕಲಾಗಿತ್ತು.

ಸಂಕಷ್ಟದಿಂದ ಪಾರಾಗಲು ಕೆಲವು ಹೋಟೆಲ್ಗಳ ಮೆನುವಿನಲ್ಲಿ ತಿಂಡಿಗಳ ಸಂಖ್ಯೆ ಕಡಿಮೆಯಾಗಿದೆ. ಜತೆಗೆ ಊಟ, ತಿಂಡಿಗಳ ದರದಲ್ಲಿ ಏರಿಕೆಯಾಗಿದೆ. ಕೆಲವರು ಸೌದೆ ಒಲೆಯಲ್ಲಿ ಅನ್ನ–ಸಾಂಬರ್ ತಯಾರಿಸುತ್ತಿದ್ದರೆ, ಇನ್ನೂ ಕೆಲವರು ಇಂಡಕ್ಷನ್ ಸ್ಟೌಗಳ ಮೊರೆ ಹೋಗುತ್ತಿದ್ದಾರೆ.

‘ಶೇಕಡ 30ರಷ್ಟು ದರ್ಶಿನಿಗಳನ್ನು ಬಂದ್ ಮಾಡಲಾಗಿದೆ. ಸಣ್ಣ ಹೋಟೆಲ್ಗಳಿಗೆ ಸಿಲಿಂಡರ್ ದಾಸ್ತಾನು ಸಾಮರ್ಥ್ಯ ಇಲ್ಲ. ಇಂದು ಗಳಿಸುವ ಹಣವನ್ನು ನಾಳೆಯ ವ್ಯವಹಾರಕ್ಕೆ ಹೂಡಿಕೆ ಮಾಡುತ್ತಾರೆ. ಸಣ್ಣ ಹೋಟೆಲ್ಗೆ ₹10 ಸಾವಿರದಿಂದ ₹50 ಸಾವಿರವರೆಗೆ ನಷ್ಟವಾಗುತ್ತಿದೆ’ ಎಂದು ಹೋಟೆಲ್ ಮಾಲೀಕರೊಬ್ಬರು ತಿಳಿಸಿದ್ದಾರೆ.

ಹನುಮಾನ್ ನಗರದಲ್ಲಿ ಜೆಡಿಎಸ್ ಮುಖಂಡ ಟಿ.ಎ. ಶರವಣ ಆರಂಭಿಸಿದ್ದ ‘ನಮ್ಮ ದೇವೇಗೌಡ ಅಪ್ಪಾಜಿ ಕ್ಯಾಂಟೀನ್’ ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

‘ಕಡಿಮೆ ಬೆಲೆಯಲ್ಲಿ ಊಟ, ತಿಂಡಿ ಒದಗಿಸುವ ಸಲುವಾಗಿ 2017ರಿಂದ ಕ್ಯಾಂಟೀನ್ ನಡೆಸುತ್ತಿದ್ದೇನೆ. ಸಿಲಿಂಡರ್ ಪೂರೈಕೆ ಯಥಾ ಸ್ಥಿತಿಗೆ ಮರಳಿದ ನಂತರ ಕ್ಯಾಂಟೀನ್ ಮರು ಪ್ರಾರಂಭವಾಗಲಿದೆ’ ಎಂದು ಟಿ.ಎ.ಶರವಣ ಹೇಳಿದ್ದಾರೆ.

ಕೈಗಾರಿಕೆಗೂ ಬಿಸಿ: ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ವೆಲ್ಡಿಂಗ್, ಪೌಡರ್ ಕೋಟಿಂಗ್, ಆಹಾರ ಸಂಸ್ಕರಣೆ ಹಾಗೂ ಔಷಧೀಯ ಉತ್ಪಾದನೆಗಳು ಸಿಲಿಂಡರ್ ಮೇಲೆ ಹೆಚ್ಚು ಅವಲಂಬಿತವಾಗಿವೆ. ಈಗನ ಸಮಸ್ಯೆಯಿಂದ ಕೈಗಾರಿಕೆಗಳ ಕಾರ್ಯಾಚರಣೆಯ ನಿರಂತರತೆಗೆ ದೊಡ್ಡ ಹೊಡೆತ ಬಿದ್ದಿದೆ’ ಎಂದು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಪಿ.ದಾನಪ್ಪ ತಿಳಿಸಿದರು.

ಪಿ.ಜಿ. ಮೆನು ಬದಲು: ಸಿಲಿಂಡರ್ಗಳ ದರ ಏರಿಕೆ ಮತ್ತು ಅಭಾವದಿಂದ ಪಿ.ಜಿಗಳಲ್ಲಿ ಹೊಸ ಮೆನು ಜಾರಿ ಮಾಡಲಾಗಿದೆ. ದೋಸೆ, ಪೂರಿ, ಇಡ್ಲಿ, ಚಪಾತಿ ಸೇರಿ ಕೆಲವು ಆಹಾರ ಪದಾರ್ಥಗಳನ್ನು ಸ್ಥಗಿತ ಮಾಡಲಾಗಿದೆ. ಕಡಿಮೆ ಇಂಧನ ಬಳಸಿ ತಯಾರಿಸುವ ಆಹಾರ ನೀಡಲು ಪಿಜಿ ಮಾಲೀಕರ ಸಂಘ, ಎಲ್ಲ ಪಿಜಿಗಳಿಗೆ ಸೂಚನೆ ನೀಡಿದೆ. ಕೆಲವು ಪಿಜಿಗಳಲ್ಲಿ ಮಧ್ಯಾಹ್ನದ ಊಟವನ್ನು ನಿಲ್ಲಿಸಲಾಗಿದೆ.

ಪೊಲೀಸರ ಕಾರ್ಯಾಚರಣೆ: ವಾಣಿಜ್ಯ ಬಳಕೆ ಸಿಲಿಂಡರ್ಗಳ ಕೃತಕ ಅಭಾವ ಸೃಷ್ಟಿಸುವವರು ಮತ್ತು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ನಗರ ವ್ಯಾಪ್ತಿಯಲ್ಲಿ ಪ್ರತಿಯೊಂದು ಗ್ಯಾಸ್ ಗೋದಾಮುಗಳಿಗೆ ಹೊಯ್ಸಳ ಸಿಬ್ಬಂದಿ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ.

ಪಿಎಸ್ಐ ಶ್ರೇಣಿಯ ಅಧಿಕಾರಿಗಳು ಖುದ್ದು ತೆರಳಿ ನಗರದ ಗೋದಾಮುಗಳಲ್ಲಿ ಲಭ್ಯವಿರುವ ಸಿಲಿಂಡರ್ಗಳ ಸಂಖ್ಯೆ, ಬೇಡಿಕೆಗಳ ಪಟ್ಟಿ ಮತ್ತು ವಿತರಣೆಯ ಸಮಗ್ರ ವರದಿ ಸಿದ್ಧಪಡಿಸುತ್ತಿದ್ದಾರೆ.

ಸಿಲಿಂಡರ್ಗಳ ಕೊರತೆಯು ನಗರದ ವಲಸೆ ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತಿದೆ. ‘ಸಣ್ಣ ಸಿಲಿಂಡರ್ಗಳು (3 ಕೆ.ಜಿ ಯಿಂದ 5 ಕೆ.ಜಿ) ಲಭ್ಯವಾಗುತ್ತಿಲ್ಲ. ಕೆಲವೆಡೆ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿವೆ. ಹಿಂದೆ ₹400ಕ್ಕೆ ಸಿಗುತ್ತಿದ್ದ 5 ಕೆ.ಜಿ ರಿಫಿಲ್ ಈಗ ಕಾಳಸಂತೆಯಲ್ಲಿ ₹600ಕ್ಕೆ ಮಾರಲಾಗುತ್ತಿದೆ. ಜೀವನ ನಡೆಸುವುದು ಕಷ್ಟವಾಗಿದೆ’ ಎಂದು ಬಿಹಾರದ ಕಾರ್ಮಿಕ ಬಿರೇಂದ್ರ ಸಿಂಗ್ ತಿಳಿಸಿದರು.

ಅದಮ್ಯ ಚೇತನ ಹಾಗೂ ಇಸ್ಕಾನ್ನಲ್ಲಿ ಎಲ್ಪಿಜಿ ಸಿಲಿಂಡರ್ ಬಳಸದೇ ನವೀಕರಿಸಬಹುದಾದ ಇಂಧನ ಬಳಸಿ ಅಡುಗೆ ತಯಾರಿಸಲಾಗುತ್ತದೆ.

ಹಲವು ಐಟಿ ಕಂಪನಿಗಳು ವರ್ಕ್ ಫ್ರಂ ಹೋಂಗೆ ಅವಕಾಶ ನೀಡುವ ಕುರಿತು ಚರ್ಚೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

‘ಪ್ರಸ್ತುತ ಈ ಕುರಿತು ಚರ್ಚೆಗಳು ಇನ್ನೂ ಪ್ರಾರಂಭಿಕ ಹಂತದಲ್ಲಿವೆ. ಕೆಲವು ಕಂಪನಿಗಳು ಈ ಬಗ್ಗೆ ಯೋಚಿಸುತ್ತಿವೆ. ಮುಂದಿನ ಕೆಲವು ವಾರಗಳವರೆಗೆ ಇದೇ ಪರಿಸ್ಥಿತಿ ಮುಂದುವರಿದರೆ ಈ ನಿರ್ಧಾರ ಕೈಗೊಳ್ಳಬಹುದು’ ಎಂದು ಔಟರ್ ರಿಂಗ್ ರೋಡ್ ಕಂಪನೀಸ್ ಅಸೋಸಿಯೇಷನ್ (ಒಆರ್ಆರ್ಸಿಎ) ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

ಆಟೋ ಮತ್ತು ಕ್ಯಾಬ್ಗಳು ಲಭ್ಯತೆ ಇಲ್ಲದಿರುವುದನ್ನು ಉಲ್ಲೇಖಿಸಿ ಅನೇಕ ಉದ್ಯೋಗಿಗಳು ವರ್ಕ್ ಫ್ರಂ ಹೋಂ ನೀಡುವಂತೆ ಕೂಡ ಬೇಡಿಕೆ ಮುಂದಿಟ್ಟಿದ್ದಾರೆ.

‘ಎರಡು ದಿನಗಳಿಂದ ಆಟೋ ಸೇವೆ ಸಹ ಸರಿಯಿಲ್ಲ. ಜೊತೆಗೆ ಪ್ರಯಾಣ ದರಗಳೂ ಹೆಚ್ಚಾಗಿವೆ. ಇದರಿಂದ ಕಚೇರಿಗೆ ಹೋಗುವುದು ಕಷ್ಟವಾಗಿದೆ’ ಎಂದು ಐಟಿ ಉದ್ಯೋಗಿ ಸಹನಾ ಹೇಳಿದರು.

ದರ ಹೆಚ್ಚಳಕ್ಕೆ ಆಕ್ರೋಶ

ಕೆಲ ಹೋಟೆಲ್ಗಳಲ್ಲಿ ತಿಂಡಿ–ತಿನಿಸುಗಳ ದರವನ್ನು ಹೆಚ್ಚಿಸಿದ್ದು, ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಪಿ.ಜಿಯಲ್ಲಿ ತಿಂಡಿ ಸಿಗದ ಕಾರಣ ಗ್ರಾಹಕರೊಬ್ಬರು ‘ಮಿಸ್ಟರ್ ಆಂಧ್ರ ಮೀಲ್ಸ್ ಹೋಟೆಲ್’ಗೆ ತೆರಳಿ, ಊಟ ಮಾಡಿ ದ್ದರು. ಹೋಟೆಲ್ ಸಿಬ್ಬಂದಿ ಬಿಲ್ನಲ್ಲಿ ಹೆಚ್ಚುವರಿಯಾಗಿ ₹30 ವಸೂಲಿ ಮಾಡಿದ್ದಾರೆ. ಈ ಬಿಲ್ ಅನ್ನು ಗ್ರಾಹಕರು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಹೋಟೆಲ್ಗಳನ್ನು ತೆರೆಯಲು ಸಮಯ ನಿಗದಿಪಡಿಸಿದ್ದೇವೆ. ಬೆಳಿಗ್ಗೆ 6 ಗಂಟೆಗೆ ತೆರೆ ಯುತ್ತಿದ್ದ ಹೋಟೆಲ್ಗಳು ಈಗ ಬೆಳಿಗ್ಗೆ 10 ಗಂಟೆಗೆ ಶುರುವಾಗುತ್ತಿವೆ. ಕಾಫಿ–ಟೀ ಸೇರಿ ದಂತೆ ಅಗತ್ಯ ತಿಂಡಿ–ತಿನಿಸುಗಳನ್ನು ಮಾತ್ರ ತಯಾರಿಸುತ್ತಿದ್ದೇವೆ’ ಎಂದು ನಗರದ ಹೋಟೆಲ್ ಮಾಲೀಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೋಟೆಲ್ ಬಂದ್ ಮಾಡಬೇಡಿ’

ಎಲ್ಪಿಜಿ ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಪೂರೈಕೆ ಸ್ಥಗಿತವಾಗಿರುವ ಕಾರಣ ಹೋಟೆಲ್ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಆದರೆ, ಯಾವುದೇ ಕಾರಣಕ್ಕೂ ಹೋಟೆಲ್ಗಳನ್ನು ಬಂದ್ ಮಾಡಬಾರದು’ ಎಂದು ಬೃಹತ್ ಬೆಂಗಳೂರು ಹೋಟೆಲ್ಗಳ ಮಾಲೀಕರ ಸಂಘದ ಗೌರವ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದರು.

ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದಲ್ಲಿ ಬಂದ್ ಮಾಡಿರುವ ಹೋಟೆಲ್ಗಳನ್ನು ತೆರೆಯುವಂತೆ ಮಾಲೀಕರಿಗೆ ಮನವಿ ಮಾಡುತ್ತಿದ್ದೇವೆ. ಎಲ್ಪಿಜಿಗೆ ಪರ್ಯಾಯವಾಗಿ ಇರುವ ಸೌದೆ ಒಲೆ, ಇಂಡಕ್ಷನ್ ಸ್ಟೌ, ಎಲೆಕ್ಟ್ರಿಕ್ ಉಪಕರಣಗಳನ್ನು ಬಳಸಿಕೊಂಡು ಕಾಫಿ–ಟೀ ಸೇರಿದಂತೆ ಅಗತ್ಯ ತಿಂಡಿ–ತಿನಿಸುಗಳನ್ನು ತಯಾರಿಸಬೇಕು. ನಮ್ಮ ಉದ್ಯಮವೂ ಉಳಿಯಬೇಕು, ಗ್ರಾಹಕರಿಗೂ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನಗರದಲ್ಲಿ ಕೇವಲ 78 ಹೋಟೆಲ್ಗಳನ್ನು ಮಾತ್ರ ಬಂದ್ ಮಾಡಲಾಗಿತ್ತು. ಅವುಗಳನ್ನು ತೆರೆಯುವಂತೆ ಆಯಾ ಹೋಟೆಲ್ಗಳ ಮಾಲೀಕರಿಗೆ ಮನವಿ ಮಾಡಿದ್ದೇವೆ. ಅಗತ್ಯ ಸೇವೆಗಳನ್ನು ಗ್ರಾಹಕರಿಗೆ ನೀಡಬೇಕು. ಇದರಿಂದ ಹೋಟೆಲ್ನಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಹಾಗೂ ಮಾಲೀಕರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ’ ಎಂದು ವಿವರಿಸಿದರು.

ಇಂದಿರಾ ಕ್ಯಾಂಟೀನ್ಗೆ ಬೀಗ

ಎಲ್ಪಿಜಿ ಸಿಲಿಂಡರ್ ಕೊರತೆಯ ಸಮಸ್ಯೆಯಿಂದ ನಗರ ಪಾಲಿಕೆಗಳು ನಿರ್ವಹಣೆ ಮಾಡುತ್ತಿರುವ ಬಹುತೇಕ ಇಂದಿರಾ ಕ್ಯಾಂಟೀನ್ಗಳು ಗುರುವಾರ ರಾತ್ರಿ ಊಟವನ್ನು ಪೂರೈಸಿಲ್ಲ.

‘ಆಹಾರ ತಯಾರಿಸುವ ಅಡುಗೆ ಮನೆಗಳಲ್ಲಿ ಸಿಲಿಂಡರ್ ಕೊರತೆ ಉಂಟಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಆಹಾರ ತಯಾರಿಯನ್ನೇ ನಿಲ್ಲಿಸಲಾಗುತ್ತದೆ. ಸರ್ಕಾರ ಮಧ್ಯ ಪ್ರವೇಶಿಸಿ, ಕ್ರಮ ಕೈಗೊಳ್ಳಬೇಕು ಎಂದು ಪತ್ರ ಬರೆದಿದ್ದೇವೆ.’ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದರು.

ವದಂತಿಗೆ ಕಿವಿಗೊಡಬೇಡಿ: ಡಿ.ಸಿ

ಬೆಂಗಳೂರು ನಗರ ಜಿಲ್ಲೆಯಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ಗಳ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ಮನವಿ ಮಾಡಿದ್ದಾರೆ.

ಎಲ್ಪಿಜಿ ಸಿಲಿಂಡರ್ ಕೊರತೆ ಇಲ್ಲ. ಹಾಗಾಗಿ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಗೃಹಬಳಕೆ ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ಕುಂದುಕೊರತೆ ಇದ್ದಲ್ಲಿ ಸಹಾಯವಾಣಿ: 9611404384 ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದ್ದಾರೆ.

ಪರ್ಯಾಯ ಮಾರ್ಗದತ್ತ ಆಸ್ಪತ್ರೆ

ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಕೊರತೆಯ ಬಿಸಿ ನಗರದ ಆಸ್ಪತ್ರೆಗಳಿಗೂ ತಟ್ಟಲಾರಂಭಿಸಿದ್ದು, ಅಲ್ಲಿನ ಕ್ಯಾಂಟೀನ್ ಮೆನುಗಳನ್ನು ಸೀಮಿತಗೊಳಿಸಲಾಗುತ್ತಿದೆ. ರೋಗಿಗಳಿಗೆ ಸಮಸ್ಯೆಯಾಗದಂತೆ ಸದ್ಯ ಆಹಾರ ಒದಗಿಸಲಾಗುತ್ತಿದೆ.

ಅನೇಕ ಆಸ್ಪತ್ರೆಗಳ ಕ್ಯಾಂಟೀನ್ಗಳು ಅಡುಗೆಗೆ ಎಲ್ಪಿಜಿ ಸಿಲಿಂಡರ್ ಬದಲು, ವಿದ್ಯುತ್ ಬಳಸಿ ಅಡುಗೆ ತಯಾರಿಸುವ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿವೆ. ನಗರದ ಆಯ್ದ ಸರ್ಕಾರಿ ಆಸ್ಪತ್ರೆಗಳಿಗೆ ಇಸ್ಕಾನ್ ಆಹಾರ ಪೂರೈಕೆ ಮಾಡುತ್ತಿದ್ದು, ರೋಗಿಗಳಿಗೆ ಈ ಮೊದಲಿನಂತೆ ಊಟ–ತಿಂಡಿ ದೊರೆಯುತ್ತಿದೆ.

‘ರೋಗಿಗಳಿಗೆ ಆದ್ಯತೆಯ ಮೇರೆಗೆ ಆಹಾರ ಒದಗಿಸಲಾಗುತ್ತಿದೆ. ಸೀಮಿತ ಎಲ್ಪಿಜಿ ಸಿಲಿಂಡರ್ ಪೂರೈಕೆಯಿಂದ, ಆಹಾರ ವಿತರಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ. ಆಹಾರದ ಮೆನುವಿನಲ್ಲಿ ಕಡಿತ ಮಾಡಲಾಗಿದ್ದು, ವಿದ್ಯುತ್ ಆಧಾರಿತ ಅಡುಗೆ ಉಪಕರಣ ಅಳವಡಿಕೆಗೆ ಪೂರೈಕೆದಾರರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ’ ಎಂದು ವೈಟ್ಫೀಲ್ಡ್ನ ಆಸ್ಟರ್ ಆಸ್ಪತ್ರೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ಶ್ರೀಕಾಂತ್ ಸುಬುಧಿ ತಿಳಿಸಿದರು.

‘ನಮ್ಮಲ್ಲಿನ ಎಲ್ಪಿಜಿ ಸಿಲಿಂಡರ್ ದಾಸ್ತಾನು ಶೀಘ್ರದಲ್ಲೇ ಮುಗಿಯಲಿದೆ. ಆದ್ದರಿಂದ ಆಹಾರ ಮೆನುಗಳನ್ನು ಕಡಿತಗೊಳಿಸುತ್ತಿದ್ದೇವೆ. ಅನಿಲವನ್ನು ಉಳಿಸಲು ಅಕ್ಕಿ ಪದಾರ್ಥಗಳನ್ನು ಮಾತ್ರ ನೀಡುತ್ತಿದ್ದೇವೆ’ ಎಂದು ಸರ್ಕಾರಿ ಆಸ್ಪತ್ರೆಯೊಂದರ ಕ್ಯಾಂಟೀನ್ ಪ್ರತಿನಿಧಿ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.