ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ವರ್ಷದಿಂದ ಅಂಬೇಡ್ಕರ್‌ ವಿಷಯದಲ್ಲಿ ಪಿಜಿ ಕೋರ್ಸ್‌

₹4 ಕೋಟಿ ವೆಚ್ಚದಲ್ಲಿ ಬುದ್ಧ ಧ್ಯಾನಮಂದಿರ ಶೀಘ್ರ
Last Updated 6 ಡಿಸೆಂಬರ್ 2020, 14:22 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂದಿನ ಶೈಕ್ಷಣಿಕ ವರ್ಷದಿಂದ ಡಾ. ಬಿ.ಆರ್. ಅಂಬೇಡ್ಕರ್‌ ಅವರ ವಿಷಯದಲ್ಲಿಯೇ ಸ್ನಾತಕೋತ್ತರ ಪದವಿ ಕೋರ್ಸ್‌ ಆರಂಭಿಸಲಾಗುವುದು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್ ತಿಳಿಸಿದರು.

ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಭಾನುವಾರ ಪರಿನಿರ್ವಾಣ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಂಶೋಧನೆ ಮತ್ತು ಬುಡಕಟ್ಟು ವಿಷಯಗಳಲ್ಲಿ ಪಿಜಿ ಡಿಪ್ಲೊಮಾ ಕೋರ್ಸ್‌ ಕೂಡ ಆರಂಭಿಸಲಾಗುವುದು’ ಎಂದು ಹೇಳಿದರು.

‘ಈ ಉದ್ದೇಶಕ್ಕಾಗಿ ₹1 ಕೋಟಿ ವೆಚ್ಚದಲ್ಲಿ ಈಗಿನ ಅಧ್ಯಯನ ಕೇಂದ್ರದ ಮೊದಲನೇ ಮಹಡಿಯಲ್ಲಿ ಸುಸಜ್ಜಿತ ತರಗತಿಗಳನ್ನು ನಿರ್ಮಿಸಲಾಗುವುದು‌. ಅಧ್ಯಯನ ಕೇಂದ್ರದಲ್ಲಿ ಅಪೂರ್ಣಗೊಂಡಿರುವ ಪ್ರವೇಶದ್ವಾರವನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ವಿಶ್ವವಿದ್ಯಾಲಯದ ಆವರಣದಲ್ಲಿ ₹4 ಕೋಟಿ ವೆಚ್ಚದಲ್ಲಿ ಬುದ್ಧ ಧ್ಯಾನ ಮಂದಿರ ನಿರ್ಮಿಸಲಾಗುವುದು’ ಎಂದೂ ಅವರು ತಿಳಿಸಿದರು.

ಸಾಹಿತಿ ಡಾ. ಸಿದ್ಧಲಿಂಗಯ್ಯ, ‘ತುಳಿತಕ್ಕೊಳಗಾದ ಜನ ಆಲಸ್ಯ ಮತ್ತು ಕೀಳರಿಮೆಯಿಂದ ಹೊರಬಂದು ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಎನ್ ಸಂಜೀವ್ ರಾಜ್, ‘ಎಂ.ಎ ಇನ್‌ ಅಂಬೇಡ್ಕರ್ ಸ್ಟಡೀಸ್’ ಸೇರಿದಂತೆ ಉದ್ದೇಶಿತ ಕೋರ್ಸ್‌ಗಳ ಆರಂಭಕ್ಕೆ ಅಗತ್ಯ ಪಠ್ಯಕ್ರಮವನ್ನು ಸಿದ್ಧಪಡಿಸಲಾಗುತ್ತಿದೆ’ ಎಂದರು.

ಸಿಂಡಿಕೇಟ್ ಸದಸ್ಯರಾದ ಡಾ.ಸುಧಾಕರ್, ಧಮಚಾರಿ ಡಾ. ರಾಜಾನಂದ ಮೂರ್ತಿ ಬೋಧ್, ಪ್ರೊ. ದಶರಥ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿಶೇಷಾಧಿಕಾರಿ ಪ್ರೊ.ಎಂ ನಾರಾಯಣಸ್ವಾಮಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ.ಸಿದ್ಧಯ್ಯ ಬೆಳಗಟ್ಟಿ, ಪ್ರೊ. ಹೊನ್ನಸಿದ್ಧಾರ್ಥ, ಪ್ರೊ.ಮುರಳೀಧರ, ಪ್ರೊ‌ ನಾಗಯ್ಯ, ಡಾ.ಶಾರದಾ, ಡಾ.ಶ್ರೀಕಂಠಯ್ಯ, ಡಾ.ಕೊಟ್ರೇಶಪ್ಪ, ಡಾ.ಶೇಖರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT