ಬುಧವಾರ, ಜೂನ್ 29, 2022
24 °C
ಮಾದನಾಯಕನಹಳ್ಳಿ ಠಾಣೆ ಪೊಲೀಸರ ಕಾರ್ಯಾಚರಣೆ: ಕೇರಳದಲ್ಲಿ ಅಡಗಿದ್ದ ಆರೋಪಿಗಳು

ಕಾರಿನೊಂದಿಗೆ ₹1 ಕೋಟಿ ದೋಚಿದ್ದವರ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ, ಅದರಲ್ಲಿದ್ದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕಾರಿನೊಂದಿಗೆ ₹1 ಕೋಟಿಗೂ ಅಧಿಕ ಮೊತ್ತ ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕೇರಳದ ರಾಜೀವ್‌ (48), ಅಖಿಲ್‌ (28), ಜೆಸಿನ್‌ ಫರಿದ್‌ (28), ಸನಾಪ್‌ (33), ಸಮೀರ್‌ (31), ವಿಷ್ಣುಲಾಲ್‌ (26), ಸನೀಲ್‌ (34), ಸೈನುಲ್ಲಾ (24), ಶಫಿಕ್‌ (31) ಹಾಗೂ ರಶೀದ್‌ (25) ಬಂಧಿತರು. ಇವರಿಂದ ₹9.7 ಲಕ್ಷ ನಗದು, ಎರಡು ಇನ್ನೊವಾ ಕಾರು ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಆರೋಪಿಗಳ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಕೃತ್ಯ ನಡೆದ ಜಾಗದ ಸುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದಿದ್ದ ಸಿಬ್ಬಂದಿ ಅವುಗಳಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಪರಿಶೀಲಿಸಿದ್ದರು. ಕಾರಿನ ಜಾಡು ಹಿಡಿದು ಹೊರಟಾಗ ಆರೋಪಿಗಳು ಬೆಳ್ಳೂರು ಕ್ರಾಸ್‌ ಮೂಲಕ ನಾಗಮಂಗಲ ರಸ್ತೆಯತ್ತ ಹೋಗಿರುವುದು ಗೊತ್ತಾಗಿತ್ತು. ಅಲ್ಲಿ ಬ್ರೀಜಾ ಕಾರು ನಿಲುಗಡೆ ಮಾಡಿದ್ದ ಅವರು ಬಳಿಕ ಇನ್ನೊವಾ ಕಾರು ಹತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು’ ಎಂದು ಮಾಹಿತಿ ನೀಡಿದ್ದಾರೆ.

‘ಆರೋಪಿಗಳು ಸಾಗಿರುವ ಹಾದಿಯಲ್ಲಿನ 250 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅವರು ಕೇರಳದವರು ಎಂಬುದು ಖಾತರಿಯಾಗಿತ್ತು. ಕೇರಳದ ವಿವಿಧ ಕಡೆ ಆರೋಪಿಗಳು ಇರುವ ಮಾಹಿತಿ ಲಭಿಸಿತ್ತು. ಅದರ ಆಧಾರದಲ್ಲಿ ದಾಳಿ ನಡೆಸಿ 10 ಮಂದಿಯನ್ನು ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಪ್ರಕರಣದ ಪ್ರಮುಖ ಆರೋಪಿ ಶ್ರೀಧರನ್‌ ಯಾನೆ ಕೊಡಾಲಿ ಶ್ರೀಧರನ್‌ ತಲೆಮರೆಸಿಕೊಂಡಿದ್ದಾನೆ. ತ್ರಿಶೂರ್‌ ಜಿಲ್ಲೆಯವನಾಗಿರುವ ಈತ ಚಿನ್ನದ ವ್ಯಾಪಾರಿಗಳ ಚಲನವಲನದ ಮೇಲೆ ನಿಗಾ ಇಡುತ್ತಿದ್ದ. ಅವರು ಹಣ ಹಾಗೂ ಚಿನ್ನದ ಗಟ್ಟಿಗಳನ್ನು ಬೇರೆಡೆಗೆ ತೆಗೆದುಕೊಂಡು ಹೋಗುವುದರ ಕುರಿತು ಖಚಿತ ಮಾಹಿತಿ ಕಲೆಹಾಕುತ್ತಿದ್ದ. ಬಳಿಕ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಸಂಪರ್ಕಿಸಿ ಅವರನ್ನು ಸುಲಿಗೆಗೆ ಬಳಸಿಕೊಳ್ಳುತ್ತಿದ್ದ’ ಎಂದು ವಿವರಿಸಿದ್ದಾರೆ.

‘ಪ್ರವಾಸಕ್ಕೆ ಹೋಗಲು ಹಾಗೂ ಗಣ್ಯರಿಗೆ ಇನ್ನೊವಾ ಕಾರು ಬೇಕೆಂದು ಅವುಗಳನ್ನು ಪರಿಚಿತರಿಂದ ಬಾಡಿಗೆ ಪಡೆಯುತ್ತಿದ್ದ. ಆ ಕಾರುಗಳ ಮೂಲಕ ಆರೋಪಿಗಳನ್ನು ಕರ್ನಾಟಕ, ತಮಿಳುನಾಡು ಹೀಗೆ ವಿವಿಧ ರಾಜ್ಯಗಳಿಗೆ ಕಳುಹಿಸಿಕೊಡುತ್ತಿದ್ದ. ಈತನ ವಿರುದ್ಧ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ ಒಟ್ಟು 16 ಪ್ರಕರಣಗಳು ದಾಖಲಾಗಿವೆ. 2009ರಲ್ಲಿ ಚಿಕ್ಕಪೇಟೆ ಠಾಣೆ ವ್ಯಾಪ್ತಿ‌ಯಲ್ಲಿ ದಾಖಲಾಗಿದ್ದ ಸುಲಿಗೆ ಪ್ರಕರಣದಲ್ಲೂ ಈತನ ಕೈವಾಡವಿತ್ತು’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು