ಗುರುವಾರ , ಆಗಸ್ಟ್ 22, 2019
22 °C
ಪ್ರತಿಭಾ ಪುರಸ್ಕಾರದಲ್ಲಿ ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಒತ್ತಾಯ

‘ಮಡಿವಾಳ ಸಮಾಜವನ್ನು ಎಸ್‌ಸಿಗೆ ಸೇರಿಸಿ’

Published:
Updated:
Prajavani

ಬೆಂಗಳೂರು: ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಮಡಿವಾಳ ಮಾಚಿದೇವ ಪ್ರಶಸ್ತಿ ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭಾನುವಾರ ಪ್ರತಿಭಾ ಪುರಸ್ಕಾರ ನೀಡಲಾಯಿತು. 

‘ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಮೂಲಕ ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಮೂಡುಬಿದಿರೆ ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದರು.

‘ಮಡಿವಾಳ ಸಣ್ಣ ಸಮುದಾಯವಾಗಿರುವುದರಿಂದ ರಾಜಕೀಯವಾಗಿ ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಮಾಜದಲ್ಲಿ ಒಬ್ಬರಿಗೊಬ್ಬರ ಕಾಲೆಳೆಯುವ ಕಾರ್ಯ ನಿಲ್ಲಬೇಕು. ಉನ್ನತ ಸ್ಥಾನದಲ್ಲಿರುವವರು ಸಮಾಜದ ಬಡವರಿಗೆ ನೆರವು ನೀಡಿದರೆ ಏಳಿಗೆ ಸಾಧ್ಯವಾಗುತ್ತದೆ’ ಎಂದರು.  

ಸಂಘದ ಅಧ್ಯಕ್ಷ ಆರ್. ವೆಂಕಟ ರಮಣ, ‘ಮಡಿವಾಳ ಮಾಚಿದೇವರ ಪ್ರಶಸ್ತಿಯನ್ನು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವತಿಯಿಂದಲೇ ನೀಡುವಂತೆ ಸಮಾಜದ ಸದಸ್ಯರು ಆಗ್ರಹಿಸಬೇಕು’ ಎಂದರು. 

ಶಾಸಕ ಸಿ.ಎನ್‌. ಅಶ್ವತ್ಥನಾರಾಯಣ ಮಾತನಾಡಿ, ‘ಪ್ರತಿ ರಾಜಕೀಯ ಪಕ್ಷವೂ ವ್ಯಕ್ತಿಗಳನ್ನು ಮತವನ್ನಾಗಿ ನೋಡುತ್ತದೆ. ಆದರೆ, ಮತಕ್ಕಿಂತ ಮಾನವೀಯತೆ ಮುಖ್ಯ. ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.

ಕೆಪಿಎಸ್‍ಸಿ ಸದಸ್ಯ ರವಿಕುಮಾರ್‌, ‘ಹಿಂದುಳಿದ ಸಮಾಜದಲ್ಲಿ ಹೆಚ್ಚು ಏಳಿಗೆ ಹೊಂದಿರುವ ಸಮುದಾಯ ಮಡಿವಾಳ ಸಮಾಜ. ಆದರೆ, ಸರ್ಕಾರ ಒದಗಿಸುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿ ಕೊಳ್ಳದೆ ಇದ್ದರೆ ನಮಗೆ ನಾವೇ ವಂಚನೆ ಮಾಡಿಕೊಂಡಂತೆ’ ಎಂದರು.

Post Comments (+)