ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿ: ಸಂಕಷ್ಟ ನೀಗಲು ಶಂಕರನ ಸ್ಮರಣೆ

ಮಹಾಶಿವರಾತ್ರಿಯಲ್ಲಿ ಕಂಗೊಳಿಸಿದ ದೇಗಲುಗಳ * ಓಂ ನಮಃ ಶಿವಾಯ ಅನುರಣನ
Last Updated 11 ಮಾರ್ಚ್ 2021, 21:14 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ದೇಗುಲಗಳಲ್ಲಿ ಗುರುವಾರ ‘ಓಂ ನಮಃ ಶಿವಾಯ’ ಮಂತ್ರಪಠಣ ಜೋರಾಗಿತ್ತು. ಮಹಾಶಿವರಾತ್ರಿ ಅಂಗವಾಗಿ ರಾಜಧಾನಿಯಲ್ಲಿನ ಈಶ್ವರ ದೇಗುಲಗಳು ತಳಿರು–ತೋರಣಗಳಿಂದ ಕಂಗೊಳಿಸಿದವು. ಕೋವಿಡ್‌ ನಿರ್ಬಂಧಗಳಿದ್ದರೂ, ಭಕ್ತಾದಿಗಳ ಸಂಭ್ರಮ ಮಾತ್ರ ಎಂದಿನಂತೆಯೇ ಇತ್ತು.

ಬೆಳಿಗ್ಗೆಯಿಂದಲೇ ದೇಗುಲಗಳತ್ತ ಜನ ಹೆಜ್ಜೆ ಹಾಕಿ ದೇವರ ಆಶೀರ್ವಾದ ಪಡೆದರು. ಮಹಾದೇವನಿಗೆ ಬಿಲ್ವಪತ್ರೆ, ಹೂವು, ಹಣ್ಣು ಕಾಯಿ ಅರ್ಪಿಸಿದರು. ಬಹುತೇಕರು ಉಪವಾಸ ಹಾಗೂ ಜಾಗರಣೆ, ಶಿವನ ಜಪ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.

ಬಹುತೇಕ ದೇವಾಲಯಗಳಲ್ಲಿ ಶಿವಲಿಂಗಗಳು, ಈಶ್ವರನ ನಾನಾ ಅವತಾರಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಸಂಜೆ ನಂತರ ಶಿವ ಸಹಸ್ರನಾಮ ಪಠಣ, ಸಂಕೀರ್ತನೆ, ಪುರಾಣ ಪಠಣ, ಉಪನ್ಯಾಸ, ಸಂಗೀತೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಗವಿಪುರದ ಗವಿಗಂಗಾಧರೇಶ್ವರ ದೇವಾಲಯ, ಹಲಸೂರಿನ ಸೋಮೇಶ್ವರ ದೇವಾಲಯ, ಮಲ್ಲೇಶ್ವರದ ಕಾಡು ಮಲ್ಲೇಶ್ವರ ಮತ್ತು ನಂದಿ ತೀರ್ಥ ದೇವಾಲಯ, ಹಳೆ ವಿಮಾನ ನಿಲ್ದಾಣ ರಸ್ತೆಯ ಶಿವೋಹಂ ಶಿವಾ ದೇವಸ್ಥಾನ, ಚಾಮರಾಜಪೇಟೆಯ ರಾಮೇಶ್ವರ ದೇವಾಲಯ, ಕೋಟೆಯ ಜಲಕಂಠೇಶ್ವರ ದೇವಾಲಯ, ಬನಶಂಕರಿಯ ಪುಣ್ಯಕ್ಷೇತ್ರ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯ, ಚಿಕ್ಕಪೇಟೆಯ ಕಾಶಿ ವಿಶ್ವನಾಥ ಸ್ವಾಮಿ ದೇವಾಲಯ ಸೇರಿದಂತೆ ನಗರದ ಶಿವ ದೇವಾಲಯಗಳಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೂ ಭಕ್ತರು ದರ್ಶನಕ್ಕೆ ಬರುತ್ತಲೇ ಇದ್ದರು.

ಕಾಡುಮಲ್ಲೇಶ್ವರ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಕಾಡುಮಲ್ಲೇಶ್ವರ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಐದು ಹೆಡೆಗಳ ನಾಗಾಭರಣ: ನಗರದ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವರ ವಿಗ್ರಹಕ್ಕೆ ಐದು ಹೆಡೆಗಳ ನಾಗಾಭರಣ ಕವಚ ಅಳವಡಿಸಲಾಗಿತ್ತು. ನಾಗದೇವರ ಬಾಯಿಯಿಂದ ಶಿವಲಿಂಗಕ್ಕೆ ಜಲಾಭಿಷೇಕ ಆಗುವುದನ್ನು ಭಕ್ತರು ಕಣ್ತುಂಬಿಕೊಂಡರು. ಪ್ರತಿ ಗಂಟೆ ಗಂಟೆಗೂ ವಿಶೇಷ ರುದ್ರಭಿಷೇಕ ಮಾಡಲಾಯಿತು. ಇಡೀ ದೇವಾಲಯವನ್ನು ಹಣ್ಣು ಹಾಗೂ ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು.

ದೇವಸ್ಥಾನದ ಅಂಗಳದಲ್ಲಿ ರಾತ್ರಿ ‘ಗಿರಿಜಾ ಕಲ್ಯಾಣ ಶಿವಲೀಲೆ’ ನಾಟಕ ಪ್ರದರ್ಶನಗೊಂಡಿತು.

ಬೆಳ್ಳಿಯ ಕವಚ ಧಾರಣೆ: ಬಸವನಗುಡಿಯ ಗವಿಗಂಗಾಧರೇಶ್ವರ ದೇಗುಲದಲ್ಲಿನ ಶಿವಲಿಂಗಕ್ಕೆ ಮುಂಜಾನೆಯಿಂದ ಸಂಜೆವರೆಗೆ ರುದ್ರಾಭಿಷೇಕ ನಡೆಯಿತು. ಸಂಜೆ ಸ್ವಾಮಿಗೆ ಬೆಳ್ಳಿಯ ಕವಚ ಧಾರಣೆ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಸ್ವಾಮಿಯ ಅಭಿಷೇಕ ಹಾಗು ಅಲಂಕಾರವನ್ನು ಭಕ್ತರು ಕಣ್ತುಂಬಿಕೊಳ್ಳಲು ಅನುವಾಗುವಂತೆ ದೇವಾಲಯದ ಹೊರಭಾಗದಲ್ಲಿ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು.

ಮೃತ್ತಿಕಾ ಶಿವಲಿಂಗ: ಮಲ್ಲೇಶ್ವರದಲ್ಲಿ ನಂಜನಗೂರು ಶ್ರೀಕಂಠೇಶ್ವರ ಸೇವಾ ಸಂಘವು ಶ್ರೀ ಕಂಠೇಶ್ವರ ಭವನದಲ್ಲಿ ಸಾರ್ವಜನಿಕರಿಗಾಗಿ ‘ಮೃತ್ತಿಕಾ ಶಿವಲಿಂಗ ದರ್ಶನ’ಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆಯಿಂದ ಸಂಜೆವರೆಗೆ ವಿಶೇಷ ಪೂಜೆ, ವಿವಿಧ ಸಂಘಟನೆಗಳಿಂದ ಭಜನೆ ವೇದಪಾರಾಯಣ ನಡೆಯಿತು. ಸಂಜೆ ಸ್ವಾಮಿಗೆ ರುದ್ರಾಭಿಷೇಕ ಮಾಡಲಾಯಿತು.

ಹಳೆ ವಿಮಾನ ನಿಲ್ದಾಣ ರಸ್ತೆಯ ಶಿವೋಹಂ ಶಿವ ದೇವಸ್ಥಾನದಲ್ಲಿ ಸರದಿಯಲ್ಲಿ ಸಾಗಿದ ಭಕ್ತರು ಶಿವಲಿಂಗಕ್ಕೆ ಅಭಿಷೇಕ ಮಾಡಿದರು. ಕೊಳದಲ್ಲಿ ದೀಪ ಹೆಚ್ಚಿ ಬಿಡುವ ಮೂಲಕ ಭಕ್ತಿ ಮೆರೆದರು.

ಬಹುತೇಕ ದೇಗುಲಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಮಾಸ್ಕ್ ಧರಿಸಿದವರಿಗೆ ಮಾತ್ರ ದೇಗುಲ ಪ್ರವೇಶಿಸಲು ಅವಕಾಶವಿತ್ತು. ಪ್ರಮುಖ ದೇವಸ್ಥಾನಗಳಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿತ್ತು.

ಶಿವ–ಪಾರ್ವತಿಗೆ ವಿಶೇಷ ಅಲಂಕಾರ
ಹನುಮಂತ ನಗರದಲ್ಲಿನ ಶ್ರೀರಾಮಾಂಜನೇಯ ಗುಡ್ಡದ ಹಿಂಭಾಗದಲ್ಲಿರುವ ಶ್ರೀ ಶೇಷ ಮಹಾಬಲಮುರಿ ಗಣಪತಿ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಶಿವ, ಪಾರ್ವತಿ ಹಾಗೂ ಉಳಿದ ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ದ್ರಾಕ್ಷಿ, ಮುತ್ತು, ಹಣ್ಣು, ಕಬ್ಬು, ಗಂಟೆಗಳು ಹಾಗೂ ಇನ್ನಿತರ ಫಲ–ಪುಷ್ಪ, ವಸ್ತುಗಳನ್ನು ಬಳಸಿ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಿದ್ದು ಆಕರ್ಷಕವಾಗಿತ್ತು. ಮಾಜಿ ಶಾಸಕ ಕೆ.ಚಂದ್ರಶೇಖರ್ ಹಾಗೂ ದೇಗುಲದ ಆಡಳಿತ ಮಂಡಳಿಯ ಪದಾಧಿಕಾರಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಚಾಮರಾಜಪೇಟೆಯ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ. ಜಮೀರ್ ಅಹಮದ್ ಇದ್ದರು
ಚಾಮರಾಜಪೇಟೆಯ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ. ಜಮೀರ್ ಅಹಮದ್ ಇದ್ದರು

ದೇಗುಲಗಳತ್ತ ಗಣ್ಯರ ದಂಡು
ಜನಪ್ರತಿನಿಧಿಗಳು, ಚಿತ್ರನಟರು ಮತ್ತು ಇತರೆ ಗಣ್ಯರು ದೇಗುಲಕ್ಕೆ ತೆರಳಿ ಶಿವನ ದರ್ಶನ ಪಡೆದರು. ಬಸವನಗುಡಿಯ ಗವಿಗಂಗಾಧರೇಶ್ವರ ದೇಗುಲಕ್ಕೆ ಕೃಷಿ ಸಚಿವ ಆರ್‌. ಶಂಕರ್‌, ಶಾಸಕ ಎಲ್‌.ಎ.ರವಿ ಸುಬ್ರಹ್ಮಣ್ಯ, ನಟ ದರ್ಶನ್ ಸೇರಿದಂತೆ ಹಲವು ಗಣ್ಯರು ತೆರಳಿ ಪೂಜೆ ಸಲ್ಲಿಸಿದರು. ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇಗುಲಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಭೇಟಿ ನೀಡಿ ದೇವರ ದರ್ಶನ ಪಡೆದರೆ, ಚಾಮರಾಜಪೇಟೆಯ ಶ್ರೀಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು. ಕ್ಷೇತ್ರದ ಶಾಸಕ ಜಮೀರ್ ಅಹಮದ್ ಇದ್ದರು.

ಕೊರೊನಾ ಶಿವ ವಿಗ್ರಹದ ಆಕರ್ಷಣೆ
ವಿಶ್ವವನ್ನೇ ಕಾಡುತ್ತಿರುವ ಕೋವಿಡ್ ಬಿಕ್ಕಟ್ಟು ನೀಗಲಿ ಎಂದು ಪ್ರಾರ್ಥಿಸಿ, ವಿಲ್ಸನ್‌ ಗಾರ್ಡನ್‌ನಲ್ಲಿ 35 ಅಡಿ ಎತ್ತರದ ಕೊರೊನಾ ಶಿವ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು. ವಿಮೋಚನಾ ವೆಲ್‌ಫೇರ್‌ ಟ್ರಸ್ಟ್ ವತಿಯಿಂದ ಈ ಬೃಹತ್‌ ಮೂರ್ತಿಯನ್ನು ನಿರ್ಮಿಸಲಾಗಿದೆ. ನೂರಾರು ಭಕ್ತರು ಭೇಟಿ ನೀಡಿ, ಕೊರೊನಾದಿಂದ ದೇಶವನ್ನು ಮುಕ್ತವಾಗಿಸುವಂತೆ ಪ್ರಾರ್ಥಿಸಿದರು.

ಕೈಲಾಸಪರ್ವತ ಅಲಂಕಾರ
ನಗರದ ಶ್ರೀ ಬನಶಂಕರಿ ಅಮ್ಮನವರ ದೇಗುಲ ಸೇರಿದಂತೆ ವಿವಿಧ ಕಡೆ ಶಿವ ದೇವರಿಗೆ ವಿಶೇಷ ಅಲಂಕಾರ ಹಾಗೂ ಕೈಲಾಸ ಪರ್ವತ ಅಲಂಕಾರ ಮಾಡಲಾಗಿತ್ತು. ದೇಗುಲದ ಆವರಣದಲ್ಲಿ ಶಿವ, ಪಾರ್ವತಿ ಹಾಗೂ ನಂದಿ ಸಮೇತ ತಲೆ ಎತ್ತಿದ್ದ ಪರ್ವತ ಭಕ್ತರ ಗಮನ ಸೆಳೆಯಿತು.

ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯಲು ಗುರುವಾರ ಭಕ್ತಾದಿಗಳು ಸರದಿಯಲ್ಲಿ ನಿಂತಿದ್ದ ದೃಶ್ಯ -ಪ್ರಜಾವಾಣಿ ಚಿತ್ರ
ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯಲು ಗುರುವಾರ ಭಕ್ತಾದಿಗಳು ಸರದಿಯಲ್ಲಿ ನಿಂತಿದ್ದ ದೃಶ್ಯ -ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT