ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇವಪುರ ವಲಯದ ಜನಸ್ಪಂದನ : ನೀರಿನ ಬವಣೆ ಬಿಚ್ಚಿಟ್ಟ ಸಚಿವ ಪರಮೇಶ್ವರ

Last Updated 29 ಜೂನ್ 2019, 19:27 IST
ಅಕ್ಷರ ಗಾತ್ರ

ಬೆಂಗಳೂರು: ಕುಡಿಯುವ ನೀರಿಲ್ಲ, ಸಂಚಾರ ದಟ್ಟಣೆ ಹೆಚ್ಚಾಗಿದೆ, ಒಳಚರಂಡಿ ವ್ಯವಸ್ಥೆ ಇಲ್ಲ, ಸೊಳ್ಳೆಗಳ ಕಾಟ... ಹೀಗೆ ಸಮಸ್ಯೆಗಳ ಸರಮಾಲೆಯನ್ನು ನಾಗರಿಕರು ಬೆಂಗಳೂರು ಅಭಿವೃದ್ಧಿ ಸಚಿವ ಜಿ. ಪರಮೇಶ್ವರ ಬಳಿ ಹೇಳಿಕೊಂಡರು. ಅದಕ್ಕೆ ಪರಿಹಾರ ಸೂಚಿಸುವ ಬದಲು ಸಚಿವರು ನೀರಿನ ಬವಣೆಯೂ ಸೇರಿದಂತೆ ನಗರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನೇ ಜನರ ಮುಂದೆ ಬಿಡಿಸಿಟ್ಟರು.

ಮಹದೇವಪುರ ಮತ್ತು ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನಸಾಮಾನ್ಯರ ಅಹವಾಲುಗಳನ್ನು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಲು ಗರುಡಾಚಾರ್ ಪಾಳ್ಯದಲ್ಲಿ ‌ಶನಿವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಸತತ ನಾಲ್ಕೂವರೆ ಗಂಟೆಗಳು ಜನರ ಅಹವಾಲುಗಳನ್ನು ಸಚಿವರು ಆಲಿಸಿದರು. ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವ ಲಕ್ಷಣ ಕಾಣಿಸದ ಕಾರಣ ಬಹುತೇಕ ಮಂದಿ ಸಭೆ ಮುಕ್ತಾಯಕ್ಕೆ ಮುನ್ನವೇ ಜಾಗ ಖಾಲಿ ಮಾಡಿದರು.

‘58 ಜನ ಸಮಸ್ಯೆಗಳನ್ನು ಹೇಳಿಕೊಂಡಿದ್ದೀರಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಒಂದೆಡೆಯಾದರೆ, ನಮ್ಮ ಸಮಸ್ಯೆಗಳನ್ನೂ ನಿಮಗ ತಿಳಿಸುವ ಸಲುವಾಗಿ ಈ ಸಭೆ ಕರೆಯಲಾಗಿದೆ. ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲೂ ಸಭೆ ನಡೆಸುತ್ತೇನೆ ’ ಎಂದು ಮಾತು ಆರಂಭಿಸಿದರು.

‘250 ಚದರ ಕಿ.ಮೀ ಇದ್ದ ಬೆಂಗಳೂರು ಈಗ 800 ಚದರ ಕಿ.ಮೀ ಆಗಿದೆ. 2050ನೇ ಇಸವಿ ವೇಳೆಗೆ ನಗರದ ಜನಸಂಖ್ಯೆ 3.20 ಕೋಟಿ ಆಗಲಿದೆ ಎಂದು ಅಂದಾಜಿಸಿದ್ದೇವೆ. ಸದ್ಯ ನಗರಕ್ಕೆ ನಿತ್ಯ 140 ಕೋಟಿ ಲೀಟರ್‌ ನೀರಿಗೆ ಬೇಡಿಕೆ ಇದೆ. ಲಭ್ಯ ಇರುವ ಕಾವೇರಿ ನೀರಿನಿಂದ ಬೆಂಗಳೂರಿನ ಶೇ 70ರಷ್ಟು ಪ್ರದೇಶದ ಬೇಡಿಕೆಯನ್ನು ಮಾತ್ರ ಪೂರೈಸಬಹುದು. ಇನ್ನುಳಿದ ಶೇ 30ರಷ್ಟು ಪ್ರದೇಶಕ್ಕೆ ಮತ್ತು ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ಎಲ್ಲಿಂದ ನೀರು ತರಬೇಕು’ ಎಂದು ಪ್ರಶ್ನಿಸಿದರು.

‘ಕಾವೇರಿಯ 5ನೇ ಹಂತವನ್ನು ಪ್ರಾರಂಭ ಮಾಡುತ್ತಿದ್ದೇವೆ. ಹೆಚ್ಚುವರಿಯಾಗಿ ನಿತ್ಯ 70 ಕೋಟಿ ಲೀಟರ್‌ ನೀರನ್ನು ನಗರಕ್ಕೆ ತರಲು ಸುಮಾರು ₹5,500 ಕೋಟಿ ಖರ್ಚು ಮಾಡುತ್ತಿದ್ದೇವೆ. ಇನ್ನು ಎರಡು ವರ್ಷದಲ್ಲಿ ಈ ಕೆಲಸ ಮುಗಿಯಲಿದೆ’ ಎಂದರು.

‘ಇಷ್ಟನ್ನು ಬಿಟ್ಟರೆ ಮತ್ತೆ ಒಂದು ತೊಟ್ಟು ನೀರು ಕೂಡ ಕಾವೇರಿಯಿಂದ ಸಿಗುವುದಿಲ್ಲ. ಈ ವರ್ಷದ ಸ್ಥಿತಿಯಂತೂ ಘೋರವಾಗಿದೆ. ಜುಲೈ 30 ದಾಟಿದರೆ ಕಾವೇರಿ ನೀರು ಮುಗಿಯುತ್ತದೆ.ಇದನ್ನು ಹೇಳಿದರೆ ನೀವು ಗಾಬರಿಯಾಗುತ್ತೀರಿ. ಜುಲೈನಲ್ಲಿ ಮಳೆ ಬಾರದಿದ್ದರೆ ಬೆಂಗಳೂರಿನ ಜನರ ಸ್ಥಿತಿ ಏನಾಗುತ್ತದೆಯೋ ಗೊತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಈ ಕಾರಣದಿಂದಲೇ ಮುಂದಿನ ಐದು ವರ್ಷ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ನಿರ್ಮಾಣಕ್ಕೆ ಅನುಮತಿ ನೀಡುವುದಿಲ್ಲ ಎಂದು ನಾನು ಹೇಳಿದ್ದೇನೆ. ನಗರದ ಹೊರ ವಲಯಗಳಲ್ಲಿ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದುಕೊಂಡು ನೂರಾರು ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ನಿರ್ಮಾಣಗೊಂಡಿವೆ. ಅವುಗಳಿಗೆ ನೀರನ್ನು ಹಾಗೂ ಮೂಲ ಸೌಕರ್ಯವನ್ನು ಕೊಡುವವರು ಯಾರು’ ಎಂದು ಪ್ರಶ್ನಿಸಿದರು.

‘ನೀರನ್ನು ಪಡಿತರ ವ್ಯವಸ್ಥೆಯಡಿ ವಿತರಿಸುವ ಸ್ಥಿತಿ ಬೆಂಗಳೂರಿಗೆ ಬರುವುದು ಬೇಡ. ಜನರು ಮಿತವಾಗಿ ನೀರನ್ನು ಬಳಿಸಿ. ಎತ್ತಿನಹೊಳೆಯಿಂದ 2.5 ಟಿಎಂಸಿ ಅಡಿ ನೀರು ತರಲಾಗುತ್ತಿದೆ. ಲಿಂಗನಮಕ್ಕಿಯಿಂದ 10 ಟಿಎಂಸಿ ಅಡಿ ನೀರು ತರಲು ಸಾಧ್ಯವಿದೆಯೇ ಎಂಬುದನ್ನು ಈಗ ಪರಿಶೀಲಿಸುತ್ತಿದ್ದೇವೆ. ಈ ಯೋಜನೆ ಸಾಕಾರವಾದರೆ ಬೆಂಗಳೂರು ಜನರ ಸದ್ಯದ ನೀರಿನ ದಾಹ ತೀರಿಸಬಹುದು’ ಎಂದರು.

ರಸ್ತೆ ದುರಸ್ತಿ ಕಾರ್ಯದಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದೆ, ರಾಜಕಾಲುವೆಗೆ ಒಳಚರಂಡಿ ನೀರು ಸೇರುತ್ತಿದೆ, ತ್ಯಾಜ್ಯ ಸಮಸ್ಯೆ ಹೆಚ್ಚಳದಿಂದ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ, ಕೆರೆಗಳು ಅಭಿವೃದ್ಧಿಯಾಗುತ್ತಿಲ್ಲ, ವಿದ್ಯುತ್ ಸಂಪರ್ಕ ಇಲ್ಲದಿರುವುದು, ಬೀದಿ ದೀಪಗಳು ಹಾಳಾಗಿರುವುದು ಸೇರಿ ನೂರಾರು ಸಮಸ್ಯೆಗಳನ್ನು ಜನರು ಬಿಡಿಬಿಡಿಯಾಗಿ ವಿವರಿಸಿದರು.

‘ಪಾಲಿಕೆ ಆಡಳಿತ ವಿಕೇಂದ್ರೀಕರಣ’

‘180 ಚದರ ಕಿಲೋ ಮೀಟರ್ ಇರುವ ಮಹದೇವಪುರ ವಲಯವನ್ನು ಬಿಬಿಎಂಪಿಯಿಂದ ವಿಭಾಗಿಸಿ ಪ್ರತ್ಯೇಕ ಪಾಲಿಕೆಯನ್ನಾಗಿಸಬೇಕು’ ಎಂದು ವೈಟ್‌ಫೀಲ್ಡ್‌ ನಿವಾಸಿ ಅಂಜಲಿ ಸೈನಿ ಎಂಬುವರು ಒತ್ತಾಯಿಸಿದರು.

ಅವರೊಂದಿಗೆ ಹಲವರು ಬಿತ್ತಿಪತ್ರಗಳನ್ನು ಪ್ರದರ್ಶನ ಮಾಡಿ, ‘₹500 ಕೋಟಿಗೂ ಹೆಚ್ಚು ತೆರಿಗೆಯನ್ನು ಮಹಾದೇವಪುರ ವಲಯವೊಂದರಿಂದಲೇ ಸಂಗ್ರಹವಾಗುತ್ತಿದೆ. ಆದರೆ, ಮೂಲ ಸೌಕರ್ಯಕ್ಕೆ ನಾವು ಬಿಬಿಎಂಪಿ ಮುಂದೆ ಬೇಡುವುದು ತಪ್ಪಿಲ್ಲ’ ಎಂದು ಹೇಳಿದರು.

ಬಳಿಕ ಪ್ರತಿಕ್ರಿಯಿಸಿದ ಪರಮೇಶ್ವರ, ‘ಬಿಬಿಎಂಪಿಯನ್ನು ಐದು ಭಾಗಗಳನ್ನಾಗಿ ವಿಂಗಡಿಸಬೇಕು ಎಂದು ಬಿ.ಎಸ್. ಪಾಟೀಲ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಈ ವರದಿ ಜಾರಿ ಆಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ, ಬಿಬಿಎಂಪಿ ಮೇಲಿರುವ ಒತ್ತಡ ಕಡಿಮೆ ಮಾಡಿ 8 ವಲಯಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು. ಎಲ್ಲದಕ್ಕೂ ಬಿಬಿಎಂಪಿ ಆಯುಕ್ತರ ಆದೇಶಕ್ಕೆ ಕಾದು ಕುಳಿತುಕೊಳ್ಳುವುದನ್ನು ತಪ್ಪಿಸಲಾಗುವುದು’ ಎಂದು ತಿಳಿಸಿದರು.

‘ವಿಜ್ಞಾನನಗರದಲ್ಲಿ ಇಂದಿರಾ ಕ್ಯಾಂಟೀನ್ ನಮ್ಮ ಜಮೀನಿನಲ್ಲಿದೆ. ದಬ್ಬಾಳಿಕೆ ಮಾಡಿ ಕಟ್ಟಿಸಿದ್ದಾರೆ’ ಎಂದು ರಾಮಾಂಜಿನಪ್ಪ ಆರೋಪಿಸಿದರು.

‘ಸರ್ಕಾರಿ ಜಾಗ ಅಲ್ಲ ಎಂದು ಪಾಲಿಕೆ ಸದಸ್ಯ ಎಸ್.ಜಿ. ನಾಗರಾಜ್ ಅವರಿಗೆ ಎಷ್ಟೇ ಹೇಳಿದರೂ ಕೇಳದೆ ಕ್ಯಾಂಟೀನ್ ಕಟ್ಟಿಸಿದರು’ ಎಂದು ಅಳಲು ತೋಡಿಕೊಂಡರು. ‘ನಮ್ಮದೇ ಜಾಗ ಎಂದು ತಹಶೀಲ್ದಾರ್ ಕಚೇರಿ ವರದಿ ನೀಡಿದೆ. ಹೈಕೋರ್ಟ್‌ ಕೂಡ ನಮ್ಮ ಪರವಾಗಿಯೇ ಆದೇಶ ನೀಡಿದೆ. ಆದಷ್ಟು ಬೇಗ ನಮ್ಮ ಜಾಗವನ್ನು ಮರಳಿಸಿ’ ಎಂದು ಅಂಗಲಾಚಿದರು.

‘ಅಂಬೇಡ್ಕರ್‌ ಭವನದಲ್ಲಿ ಮೀನು ಹಿಡಿಯುತ್ತಿದ್ದಾರೆ’

‘ದೇವಸಂದ್ರ ವಾರ್ಡ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನ ಈಗ ನೀರಿನ ಹೊಂಡವಾಗಿ ಮಾರ್ಪಟ್ಟಿದೆ. ಜನ ಅಲ್ಲಿ
ಮೀನು ಹಿಡಿಯುತ್ತಿದ್ದಾರೆ’ ಎಂದು ಚಳವಳಿ ಅರುಣ್ ಹೇಳಿದರು.

‘₹18 ಕೋಟಿ ಮೊತ್ತದ ಯೋಜನೆ ಇದಾಗಿದ್ದು, ₹4 ಕೋಟಿಯನ್ನು ಸಮಾಜ ಕಲ್ಯಾಣ ಇಲಾಖೆ ಭರಿಸುತ್ತಿದೆ. ಆರು ವರ್ಷಗಳ ಹಿಂದೆ ಆರಂಭವಾಗಿದ್ದ ಕಾಮಗಾರಿ ಪಿಲ್ಲರ್ ಹಂತದಲ್ಲೇ ಸ್ಥಗಿತಗೊಂಡಿದೆ. ಈ ಜಾಗದಲ್ಲಿ ನೀರು ತುಂಬಿಕೊಂಡಿದ್ದು, ಅದರಲ್ಲಿ ಬಿದ್ದು 8 ಜನ ಸಾವನ್ನಪ್ಪಿದ್ದಾರೆ. ಕೂಡಲೇ ಕಾಮಗಾರಿಗೆ ಮರು ಚಾಲನೆ ನೀಡಬೇಕು’ ಎಂದು ಮನವಿ ಮಾಡಿದರು.

ವಾರ್ಡ್‌ ಸಮಿತಿ ಸಭೆಗೂ ಬನ್ನಿ: ಮೇಯರ್

‘ಪ್ರತಿ ತಿಂಗಳು ಮೊದಲನೇ ಶನಿವಾರ ವಾರ್ಡ್‌ ಸಮಿತಿ ಸಭೆಗಳು ನಡೆಯುತ್ತವೆ. ನಾಗರಿಕರು ಇದರಲ್ಲಿ ಭಾಗವಹಿಸಿದರೆ ಸಾಕಷ್ಟು ಸಮಸ್ಯೆಗಳು ಅಲ್ಲೇ ಪರಿಹಾರವಾಗುತ್ತವೆ’ ಎಂದು ಮೇಯರ್ ಗಂಗಾಂಬಿಕೆ ಹೇಳಿದರು.

‘ವಾರ್ಡ್‌ ಕಚೇರಿ ಎಲ್ಲಿದೆ, ಅಧಿಕಾರಿಗಳು ಯಾರು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡು ಸಂಪರ್ಕದಲ್ಲಿರಿ. ಆಗ ಸಮಸ್ಯೆಗೆ ಪರಿಹಾರ ಸುಲಭ’ ಎಂದರು.

233 ಮಾರ್ಷಲ್‌ ನೇಮಕ

‘ರಾತ್ರಿ ವೇಳೆ ಕಸವನ್ನು ಗುಟ್ಟಾಗಿ ರಸ್ತೆ ಬದಿ ಸುರಿದು ಹೋಗುವ ಜನರನ್ನು ಹಿಡಿದು ದಂಡ ಹಾಕಲು 233 ಮಾರ್ಷಲ್‌ಗಳನ್ನು ಸದ್ಯದಲ್ಲೆ ನೇಮಕ ಮಾಡಲಾಗುವುದು’ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದರು.

ರಸ್ತೆಗಳಲ್ಲಿ ಕಸ ಬೀಳುತ್ತಿರುವ ಬಗ್ಗೆ ಹಲವರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಅವರು, ‘ಮಾಜಿ ಸೈನಿಕರನ್ನು ಮಾರ್ಷಲ್‌ಗಳನ್ನಾಗಿ ನೇಮಿಸಿಕೊಳ್ಳಲು ಉಪಮುಖ್ಯಮಂತ್ರಿ ಅವರು ಅನುಮೋದನೆ ನೀಡಿದ್ದಾರೆ. ಇನ್ನೊಂದು ತಿಂಗಳಲ್ಲಿ ಎಲ್ಲಾ ವಾರ್ಡ್‌ಗಳಿಗೂ ಮಾರ್ಷಲ್‌ಗಳ ನೇಮಕ ಆಗಲಿದೆ’ ಎಂದರು.

**

ವಾಸವಿದ್ದ ಮನೆಯನ್ನು ರಸ್ತೆ ಅಭಿವೃದ್ಧಿಗಾಗಿ ಬಿಟ್ಟುಕೊಟ್ಟಿದ್ದೇವೆ. 16 ತಿಂಗಳಿಂದ ಬಾಡಿಗೆ ಮನೆಯಲ್ಲಿದ್ದೇವೆ. ಟಿಡಿಆರ್ ಪಡೆಯಲು ಸುತ್ತಾಡಿ ಸಾಕಾಗಿದೆ. ದಯವಿಟ್ಟು ಪರಿಹಾರ ಕೊಡಿಸಿ ‌

–ಸುರೇಖಾ, ಹೊರಮಾವು ನಿವಾಸಿ

**

ಕಕ್ಕಸಿನ ನೀರು, ಮಳೆ ನೀರು ಹರಿಯುವ ಚರಂಡಿ ಸೇರುತ್ತಿದೆ. ಒಳಚರಂಡಿ ವ್ಯವಸ್ಥೆ ಇಲ್ಲದೆ, ದುರ್ವಾಸನೆ ಹೆಚ್ಚಾಗಿದೆ. ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ
–ಮೋಹನ್, ಹೊರಮಾವು ನಿವಾಸಿ

**

ಕುಡಿಯುವ ನೀರು ಸಿಗುತ್ತಿಲ್ಲ. ಒಳಚರಂಡಿ ಸಮಸ್ಯೆಗೆ ಪರಿಹಾರ ದೊರಕುತ್ತಿಲ್ಲ. ಬಿಬಿಎಂಪಿ ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನೇ ಕೇಳಿಸಿಕೊಳ್ಳುತ್ತಿಲ್ಲ
–ಎನ್‌. ರಮೇಶ್, ಮಾರತಹಳ್ಳಿ ವಾರ್ಡ್‌ ಪಾಲಿಕೆ ಸದಸ್ಯ

**

ನಾನು ಎಲೆ ಮಲ್ಲಪ್ಪ ಚೆಟ್ಟಿ ಕೆರೆಯಲ್ಲಿ ರೋಯಿಂಗ್‌ ಅಭ್ಯಾಸ ನಡೆಸುತ್ತೇವೆ. ಈ ಕೆರೆಗೆ ಕಟ್ಟಡಗಳ ತ್ಯಾಜ್ಯ ಸುರಿಯಲಾಗುತ್ತಿದೆ
-ಶ್ರೇಯಾ, ರಾಷ್ಟ್ರಮಟ್ಟದ ರೋಯಿಂಗ್ ಆಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT