ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ನಿವೇಶನಗಳೇ ಕಸದ ಕೇಂದ್ರ!

ನಿರ್ಮಾಣವಾಗದ ಒಣಕಸ ಸಂಗ್ರಹ ಕೇಂದ್ರಗಳು l ತ್ಯಾಜ್ಯ ದಹನದಿಂದ ಪರಿಸರದ ಮೇಲೆ ದುಷ್ಪರಿಣಾಮ
Last Updated 31 ಅಕ್ಟೋಬರ್ 2019, 2:15 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ದೊಡ್ಡ ಕ್ಷೇತ್ರ ಮಹದೇವಪುರ. ಇಲ್ಲಿನ ವಾರ್ಡ್‌ಗಳ ವ್ಯಾಪ್ತಿಯೂ ವಿಸ್ತಾರವಾಗಿದೆ. ಆದರೆ, ಇಲ್ಲಿನ ಎಂಟು ವಾರ್ಡ್‌ಗಳ ಪೈಕಿ ಆರರಲ್ಲಿ ಒಣತ್ಯಾಜ್ಯ ಸಂಗ್ರಹ ಕೇಂದ್ರಗಳೇ (ಡಿಡಬ್ಲ್ಯುಸಿಸಿ) ಇಲ್ಲ. ಅದರಲ್ಲಿಯೂ, ಕಟ್ಟಡ ತ್ಯಾಜ್ಯ ಈ ಕ್ಷೇತ್ರದ ಜನರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ.

ಯಾವುದೇ ಖಾಲಿ ನಿವೇಶನ ಅಥವಾ ಜಾಗ ಕಂಡರೂ, ರಾತ್ರೋರಾತ್ರಿ ಅದು ಕಸ ಸುರಿಯುವ ಜಾಗವಾಗಿ ಮಾರ್ಪಟ್ಟಿರುತ್ತದೆ. ಆದರೆ, ಕಸ ಸಂಗ್ರಹಿಸಲು ಗುರುತಿಸಲಾಗಿರುವ ಜಾಗ ಅಥವಾ ಕೇಂದ್ರದಲ್ಲಿ ಮಾತ್ರ ಸರಿಯಾಗಿ ವಿಲೇವಾರಿ ನಡೆಯುತ್ತಿಲ್ಲ. ಬಿಬಿಎಂಪಿ ಅಧಿಕಾರಿಗಳು ಇದನ್ನು ನೋಡಿಯೂ ನೋಡದಂತೆ ಇದ್ದಾರೆ ಎಂದು ದೂರುತ್ತಾರೆ ಸ್ಥಳೀಯರು.

‘ನಗರದೊಳಗೆ ಒಂದು ವಾರ್ಡ್‌3ರಿಂದ 4 ಕಿ.ಮೀ.ವ್ಯಾಪ್ತಿಯಲ್ಲಿ ಹರಡಿಕೊಂಡಿದ್ದರೆ, ಈ ಕ್ಷೇತ್ರದಲ್ಲಿ ಒಂದು ವಾರ್ಡ್‌ ವ್ಯಾಪ್ತಿ 12 ಚದರ ಕಿ.ಮೀ. ನಷ್ಟಿದೆ. ಇಷ್ಟು ದೊಡ್ಡ ವಾರ್ಡ್‌ಗಳಲ್ಲಿ ತ್ಯಾಜ್ಯ ಸಂಗ್ರಹ ಸರಿಯಾಗುತ್ತಿಲ್ಲ. ಅದರಲ್ಲಿಯೂ ಕಟ್ಟಡ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯಲಾಗುತ್ತಿದೆ’ ಎಂದು ಅನುರಾಧಾ ಗೋವಿಂದ್‌ ಹೇಳುತ್ತಾರೆ.

‘ಕಟ್ಟಡ ತ್ಯಾಜ್ಯ ಮತ್ತು ಒಣ ಕಸವನ್ನು ಎಸೆಯುವುದಲ್ಲದೆ, ಅದನ್ನು ಸುಡಲಾಗುತ್ತದೆ. ಅದರಿಂದ ಪರಿಸರ ಮಾಲಿನ್ಯವೂ ಆಗುತ್ತಿದೆ. ಒಣ ಕಸ ಸಂಗ್ರಹಿಸುವ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಅವರು ದೂರಿದರು.

ಅನಿವಾರ್ಯವಾಗಿದೆ: ‘ದೊಡ್ಡ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಂದ ಮಾತ್ರ ಸಮರ್ಪಕವಾಗಿ ಕಸ ಸಂಗ್ರಹಿಸ
ಲಾಗುತ್ತಿದೆ. ಸಾಮಾನ್ಯ ಮನೆಗಳಿಂದ ಕಸವನ್ನು ತೆಗೆದುಕೊಳ್ಳುತ್ತಿಲ್ಲ. ಇಂತಹ ಮನೆಗಳ ನಿವಾಸಿಗಳು ಅನಿವಾರ್ಯವಾಗಿ ಖಾಲಿ ಜಾಗದಲ್ಲಿ ಕಸ ಎಸೆಯುವ ಸ್ಥಿತಿ ಇದೆ’ ಎಂದು ಎಸ್. ಶೋಭಾ ಹೇಳಿದರು.

‘ಶಾಸಕರು, ಸ್ಥಳೀಯ ಎಂಜಿನಿಯರ್‌ಗಳು, ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಡಿ.ರಂದೀಪ್ ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ಈ ಬಗ್ಗೆ ದೂರು ಸಲ್ಲಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ’ ಎಂದು ಅವರು ಹೇಳಿದರು.

‘ವಾರ್ಡ್‌ ಸಮಿತಿ ಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರೆ ಗಮನ ಹರಿಸುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಅಷ್ಟರಲ್ಲಿ ಅವರ ವರ್ಗಾವಣೆಯಾಗಿರುತ್ತದೆ. ಆರು ತಿಂಗಳ ನಂತರ ನೋಡಿದರೂ ಪರಿಸ್ಥಿತಿ ಹಾಗೆಯೇ ಇರುತ್ತದೆ’ ಎಂದು ಅವರು ಹೇಳಿದರು.

‘ಈ ಸಮಸ್ಯೆ ನಿವಾರಣೆಗಾಗಿ ಕಾರ್ಯಪಡೆ ರಚಿಸುವುದಾಗಿ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಹೇಳಿದ್ದರು. ಆದರೆ, ಈವರೆಗೆ ಅಂತಹ ಕಾರ್ಯಪಡೆಯಿಂದ ಯಾವುದೇ ‘ಕಾರ್ಯ’ ಆರಂಭವಾಗಿಲ್ಲ’ ಎಂದು ಸ್ಥಳೀಯರು ದೂರುತ್ತಾರೆ.

ಈ ಬಗ್ಗೆ ಮಾಹಿತಿ ಪಡೆಯಲು ರಂದೀಪ್‌ ಅವರನ್ನು ಸಂಪರ್ಕಿಸಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ಕಾಡುತ್ತಿದೆ ‘ಕಸ ಮಾಫಿಯಾ’!

ವಾರ್ಡ್‌ಗಳಲ್ಲಿನ ಕೆಲವು ಪ್ರಜ್ಞಾವಂತರು ಸೇರಿಕೊಂಡು ಡಿಡಬ್ಲ್ಯುಸಿಸಿ ಪುನಶ್ಚೇತನಕ್ಕೆ ಮುಂದಾದರೂ, ಸ್ಥಳೀಯವಾಗಿ ಕಸ ಸಂಗ್ರಹಿಸುವವರ ‘ಮಾಫಿಯಾ’ ಇದಕ್ಕೆ ಅಡ್ಡಿಯಾಗುತ್ತಿದೆ ಎಂದು ದೂರುತ್ತಾರೆ ಸ್ಥಳೀಯರು.

‘ವರ್ತೂರಿನಲ್ಲಿ ಬಿಬಿಎಂಪಿಯೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಡಿಡಬ್ಲ್ಯುಸಿಸಿ ಮಾಡಿತು. ಅಲ್ಲಿ ಒಂದು ದಿನವೂ ಕೆಲಸ ನಡೆಯಲಿಲ್ಲ.ಅಲ್ಲಿನ ಶೆಡ್‌ ಕಿತ್ತು, ಉಪಕರಣಗಳನ್ನೆಲ್ಲ ಕೆಲವರು ಕದ್ದೊಯ್ದರು’ ಎಂದು ಸ್ಥಳೀಯರು ಹೇಳುತ್ತಾರೆ.

‘ಹಗದೂರು ವಾರ್ಡ್‌ನಲ್ಲಿ ಖಾಸಗಿ ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ₹20 ಲಕ್ಷ ಘೋಷಿಸಿದ್ದವು. ಆದರೆ, ಜಾಗ ನೀಡುವುದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಯಿತು. ಘೋಷಿಸಲಾಗಿದ್ದ ಹಣವನ್ನೂ ಕಂಪನಿಯವರು ವಾಪಸ್‌ ತೆಗೆದುಕೊಂಡರು’ ಎಂದರು.

‘ಬಿಬಿಎಂಪಿಯಲ್ಲಿ ಹೆಸರು ನೋಂದಾಯಿಸಿದ ಸಂಗ್ರಹಗಾರರು ಮಾತ್ರ ಕಸ ಸಂಗ್ರಹಿಸಬೇಕು. ಆದರೆ, ಅಪಾರ್ಟ್‌ಮೆಂಟ್‌ಗಳಿಂದ ಬೇರೆ ಯಾರೋ ಸಂಗ್ರಹಿಸುತ್ತಾರೆ. ನಾವು ‘ಹಸಿರು ದಳ’ ಎಂದು ಮಾಡಿಕೊಂಡು ಕಸ ಸಂಗ್ರಹ ಮತ್ತು ಬೇರ್ಪಡಿಸುವ ಕುರಿತು ಜಾಗೃತಿ ಮೂಡಿಸುತ್ತಿದ್ದೆವು. ಕೆಲವರು ಹಸಿರು ದಳದ ಕಾರ್ಯಕರ್ತರನ್ನೂ ಹೆದರಿಸಿ ಓಡಿಸಿದರು’ ಎಂದು ಸ್ಥಳೀಯರು ಹೇಳಿದರು.

*ಡಿಡಬ್ಲುಸಿಸಿಗಳು ಹದಗೆಟ್ಟ ಸ್ಥಿತಿಯಲ್ಲಿವೆ. ಅವುಗಳಿಗೆ ವಿದ್ಯುತ್‌–ನೀರಿನ ಸಂಪರ್ಕ ಕಲ್ಪಿಸಿಲ್ಲ. ಅಲ್ಲಿನ ನೌಕರರಿಗೆ ಆರು ತಿಂಗಳಿನಿಂದ ವೇತನವಿಲ್ಲ. ಹೀಗಾಗಿ, ಕಸದ ಸಮಸ್ಯೆ ಹೆಚ್ಚಾಗಿದೆ

– ಸೀಮಾ ಶರ್ಮಾ, ಬೆಳ್ಳಂದೂರು ವಾರ್ಡ್‌

*ರಾಜಕಾಲುವೆಗಳು ತ್ಯಾಜ್ಯ ಎಸೆಯುವ ಚರಂಡಿಗಳಾಗಿ ಮಾರ್ಪಟ್ಟಿವೆ.ಅಪಾರ್ಟ್‌ಮೆಂಟ್‌ಗಳಿಂದ ಮಾತ್ರ ಕಸ ಸಂಗ್ರಹಿಸಲಾಗುತ್ತಿದೆ

– ವೀರಭದ್ರಯ್ಯ ಹಿರೇಮಠ, ವರ್ತೂರು ವಾರ್ಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT