ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆಯಂತೆ ಹರಿಯುತ್ತದೆ ಕೊಳಚೆ ನೀರು! ಬೆಂಗಳೂರು ಹೊರವಲಯದ ಪ್ರದೇಶಗಳ ಗೋಳು

ಹೊರವಲಯದ– ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಡಾವಣೆಗಳಲ್ಲಿ ಸೌಕರ್ಯ ಮರೀಚಿಕೆ l ನಿವಾಸಿಗಳ ಗೋಳು
Last Updated 7 ನವೆಂಬರ್ 2020, 18:58 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೊರವಲಯದಲ್ಲಿರುವ, ಕೆಲ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ತಲೆ ಎತ್ತಿರುವ ಬಡಾವಣೆಗಳಲ್ಲಿ ಮೂಲಸೌಲಭ್ಯ ಮರೀಚಿಕೆಯಾಗಿದೆ. ನಗರದ ಸೆರಗಿನಲ್ಲೇ ಇದ್ದರೂ ಬಿಬಿಎಂಪಿ ತೆಕ್ಕೆಗೆ ಸೇರದ ಈ ಬಡಾವಣೆಗಳ ಅಭಿವೃದ್ಧಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಂತಹ ಬಡಾವಣೆಗಳಲ್ಲೊಂದು ಮಹಾಲಕ್ಷ್ಮಿ ಎನ್‌ಕ್ಲೇವ್.

ಬೆಂಗಳೂರು ಉತ್ತರ ತಾಲ್ಲೂಕಿನ ಕೊಡಿಗೆಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿರುವ ಈ ಬಡಾವಣೆಗೆ, ಪಕ್ಕದ ಮಂಗನಹಳ್ಳಿಯಿಂದ ಕೊಳಚೆ ನೀರು ಹರಿದು ಬರುತ್ತಿದೆ. ಬಡಾವಣೆಯ ಮುಖ್ಯರಸ್ತೆಯಲ್ಲಿಯೇ ಎರಡು ವರ್ಷಗಳಿಂದ ಕೊಳಚೆ ನೀರು ಹರಿಯುತ್ತಿದ್ದು, ದುರ್ವಾಸನೆ ಸಹಿಸಿಕೊಂಡೇ ಓಡಾಡುತ್ತಿದ್ದಾರೆ ಸ್ಥಳೀಯರು.

‘ಬಡಾವಣೆಯ ಬಳಿಯಲ್ಲಿಯೇ ನೈಸ್‌ ರಸ್ತೆ ಹಾದುಹೋಗುತ್ತದೆ. ಈ ನೈಸ್‌ರಸ್ತೆಯ ಕೆಳಸೇತುವೆಯ ಮೂಲಕ ಸಾಗುವ ರಸ್ತೆಯೇ ನಮಗೆ ಪ್ರಮುಖ ಸಂಪರ್ಕ ಮಾರ್ಗ. ಮಹಾಲಕ್ಷ್ಮಿ ಎನ್‌ಕ್ಲೇವ್ ಮತ್ತು ಸುತ್ತ–ಮುತ್ತಲಿನ ಬಡಾವಣೆಗಳ ಸಾವಿರಾರು ಮಂದಿ ನಿತ್ಯ ಈ ರಸ್ತೆಯನ್ನೇ ಉಪಯೋಗಿಸುತ್ತಾರೆ. ಮಂಗನಹಳ್ಳಿಯಿಂದ ಹರಿದು ಬರುವ ಕಲುಷಿತ ನೀರು ಈ ರಸ್ತೆಯಲ್ಲೇ ಹರಿಯುತ್ತದೆ’ ಎಂದು ಮಹಾಲಕ್ಷ್ಮಿ ಎನ್‌ಕ್ಲೇವ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್. ವೆಂಕಟಾಚಲಯ್ಯ ಅಳಲು ತೋಡಿಕೊಂಡರು.

‘ಖಾಸಗಿಯಾಗಿ ಬಡಾವಣೆ ಅಭಿವೃದ್ಧಿ ಪಡಿಸಿದ್ದೇವೆ. ನೀರು, ವಿದ್ಯುತ್‌ ನಿರ್ವಹಣೆಗೆ ಎಲ್ಲ ನಾವೇ ವ್ಯವಸ್ಥೆ ಮಾಡಿಕೊಂಡಿದ್ದೇವೆ. ನಮ್ಮಿಂದ ಕಂದಾಯ ಕಟ್ಟಿಸಿಕೊಳ್ಳುವ ಗ್ರಾಮ ಪಂಚಾಯ್ತಿಯವರು ಯಾವುದೇ ಸೌಲಭ್ಯ ನೀಡುತ್ತಿಲ್ಲ. ರಸ್ತೆ ದುರಸ್ತಿಯ ಜೊತೆಗೆ, ಸ್ವಚ್ಛತೆಗೆ ಆದ್ಯತೆ ನೀಡುವ ಕೆಲಸವನ್ನಾದರೂ ಮಾಡಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

ಸಮಸ್ಯೆ ಪರಿಶೀಲಿಸಿ ಕ್ರಮ: ಪಿಡಿಒ: ‘ಸಣ್ಣ-ಪುಟ್ಟ ದುರಸ್ತಿ ಕಾರ್ಯಗಳಿದ್ದರೆ ಗ್ರಾಮ ಪಂಚಾಯ್ತಿಯಿಂದಲೇ ಕೈಗೊಳ್ಳಬಹುದು. ಆದರೆ, ಕಲುಷಿತ ನೀರು ಎಲ್ಲಿಂದ ಬರುತ್ತಿದೆ, ಯಾವ ವ್ಯಾಪ್ತಿಯಲ್ಲಿದೆ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಪಂಚಾಯ್ತಿಯಿಂದ ಸರಿಪಡಿಸುವ ಸಮಸ್ಯೆ ಇದಾಗಿದ್ದರೆ ತಕ್ಷಣಕ್ಕೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಕೊಡಿಗೆಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಭಾಗೀರಥಿ ‘‍ಪ್ರಜಾವಾಣಿ’ಗೆ ತಿಳಿಸಿದರು.

ರಸ್ತೆಯುದ್ದಕ್ಕೂ ಕಸದ ರಾಶಿ

ನೈಸ್‌ ರಸ್ತೆ ಬಳಿಯ ಮಾರ್ಗದ ಉದ್ದಕ್ಕೂ ಕಸದ ರಾಶಿ ಕಾಣಸಿಗುತ್ತದೆ. ಇದರೊಂದಿಗೆ, ಎಲ್ಲೆಲ್ಲಿ ಖಾಲಿ ಜಾಗವಿದೆಯೋ ಅಲ್ಲಿ ಕಸವನ್ನು ಸುರಿಯಲಾಗುತ್ತಿದ್ದು, ದಾರಿಹೋಕರಿಗೆ, ಸ್ಥಳೀಯರಿಗೆ ಸಮಸ್ಯೆಯಾಗಿದೆ.

ವಾರ್ಡ್‌ ಸಂಖ್ಯೆ 130ರಲ್ಲಿರುವ ವಿಶ್ವೇಶ್ವರಯ್ಯ ಬಡಾವಣೆ ಸೇರಿದಂತೆ ಬಿಬಿಎಂಪಿ ವ್ಯಾಪ್ತಿಗೆ ಬರುವ ಬಡಾವಣೆಗಳಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಹದಿನೈದು ದಿನಕ್ಕೆ ಒಮ್ಮೆ ಅಥವಾ ಎರಡು ಬಾರಿ ಕಸ ವಿಲೇವಾರಿ ಆಗಲಿದೆ. ಉಳಿದಂತೆ ನಿವಾಸಿಗಳು ಈ ರಸ್ತೆಯ ಬಳಿಯಲ್ಲಿಯೇ ಕಸ ಬಿಸಾಕುತ್ತಾರೆ.

‘ಒಂದೊಂದು ಕಡೆ ಕಿ.ಮೀ. ಉದ್ದದವರೆಗೆ ಕಸದ ರಾಶಿ ಹಾಕಲಾಗಿದೆ. ಅಕ್ಕ–ಪಕ್ಕದ ಕೋಳಿ ಅಂಗಡಿಯವರೂ ಮಾಂಸದ ತ್ಯಾಜ್ಯವನ್ನು ಇಲ್ಲಿ ತಂದು ಸುರಿಯುತ್ತಾರೆ. ಇದನ್ನು ತಿನ್ನಲು ಬರುವ ಬೀದಿನಾಯಿಗಳು ಜನರ ಮೇಲೆ ದಾಳಿ ಮಾಡುತ್ತಿವೆ’ ಎಂದು ಹಿರಿಯ ನಾಗರಿಕರೊಬ್ಬರು ಹೇಳಿದರು.

‘ಸ್ಥಳಕ್ಕೆ ನಮ್ಮ ತಂಡವನ್ನು ಕಳಿಸಿ ಸಮಸ್ಯೆ ಪರಿಶೀಲಿಸಲು ಸೂಚಿಸುತ್ತೇನೆ. ಸಮರ್ಪಕವಾಗಿ ಕಸ ವಿಲೇವಾರಿ ಮಾಡಲು ಹೇಳುತ್ತೇನೆ. ರಸ್ತೆಯ ಬಳಿಯಲ್ಲಿ ಕಸ ಎಸೆಯದಂತೆ ಸ್ಥಳೀಯರಲ್ಲಿಯೂ ಜಾಗೃತಿ ಮೂಡಿಸಲಾಗುವುದು’ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್‌ (ಕಸ ವಿಲೇವಾರಿ) ‘ಪ್ರಜಾವಾಣಿ’ಗೆ ತಿಳಿಸಿದರು.

ಬಸ್‌ ಸೇವೆ ವಿಸ್ತರಣೆಗೆ ಮನವಿ

ಮಹಾಲಕ್ಷ್ಮಿ ಎನ್‌ಕ್ಲೇವ್ ಅಲ್ಲದೆ ಮಿಥಿಲಾ ನಗರ, ನಂದಗೋಕುಲ, ಪ್ರಕೃತಿ ಲೇಔಟ್ ಸೇರಿದಂತೆ ಸುತ್ತ–ಮುತ್ತಲಿನ ಬಡಾವಣೆಗಳಲ್ಲಿ ಸಾವಿರಾರು ಜನ ವಾಸಿಸುತ್ತಿದ್ದಾರೆ. ಆದರೆ, ಇಲ್ಲಿ ಬಿಎಂಟಿಸಿ ಬಸ್ ಸೌಲಭ್ಯ ಇಲ್ಲ. ರಾಮಸಂದ್ರದವರೆಗೆ ಬಸ್‌ಗಳು ಬರುತ್ತವೆ. ಅಲ್ಲಿಂದ ಸುಮಾರು 2.5 ಕಿ.ಮೀ. ದೂರದಲ್ಲಿರುವ ಈ ಬಡಾವಣೆಗಳಿಗೂ ವಿಸ್ತರಿಸಿದರೆ ಜನರಿಗೆ ಅನುಕೂಲವಾಗುತ್ತದೆ ಎಂದು ವೆಂಕಟಾಚಲಯ್ಯ ಕೋರಿದರು.

‘ಬಡಾವಣೆಗಳ ನಿವಾಸಿಗಳು ಲಿಖಿತವಾಗಿ ಮನವಿ ಸಲ್ಲಿಸಿದರೆ ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬಹುದು. ಶಾಂತಿನಗರದಲ್ಲಿರುವ ಬಿಎಂಟಿಸಿ ಕೇಂದ್ರ ಕಚೇರಿಗೆ ತೆರಳಿ ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ಮನವಿ ಪತ್ರ ಕೊಡಬೇಕು. ಬಸ್‌ ಸೇವೆ ವಿಸ್ತರಿಸುವ ಅಗತ್ಯವಿದ್ದರೆ ಅವರು ಕ್ರಮ ಕೈಗೊಳ್ಳುತ್ತಾರೆ’ ಎಂದು ಬಿಎಂಟಿಸಿ ಸಹಾಯಕ ಸಂಚಾರ ವ್ಯವಸ್ಥಾಪಕ ರಘುಕುಮಾರ್‌ ಹೇಳಿದರು.

***

ಕಲುಷಿತ ನೀರಿನಿಂದ ವಾತಾವರಣ ಹಾಳಾಗುತ್ತಿದೆ. ಕೆಟ್ಟವಾಸನೆ, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ

-ಆರ್. ವೆಂಕಟಾಚಲಯ್ಯ, ಅಧ್ಯಕ್ಷ, ಮಹಾಲಕ್ಷ್ಮಿ ಎನ್‌ಕ್ಲೇವ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ

***

ನಡೆದಾಡಲೂ ಆಗದಷ್ಟು ರಭಸವಾಗಿ ಕೊಳಚೆ ನೀರು ಹರಿಯುತ್ತಿದೆ. ಹಲವರು ಬಿದ್ದು ಗಾಯಗೊಂಡಿದ್ದಾರೆ. ಸರಿಯಾದ ನಿರ್ವಹಣೆ ಇಲ್ಲದೆ ಇರುವುದರಿಂದ ಕೆಳಸೇತುವೆಯ ಕೆಳಗೆ ಕಳ್ಳತನ ಪ್ರಕರಣಗಳೂ ಹೆಚ್ಚಾಗಿವೆ.

- ಪುಟ್ಟಸ್ವಾಮಿ ಗೌಡ, ಉಪಾಧ್ಯಕ್ಷ ಮಹಾಲಕ್ಷ್ಮಿ ಎನ್‌ಕ್ಲೇವ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT