ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗದ ಆಯ್ಕೆ ತಕ್ಕಂತೆ ಪದವಿ ಶಿಕ್ಷಣ

ಸಂಯೋಜಿತ ಪದವಿ ರೂಪಿಸಲು ಮುಂದಾದ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ
Last Updated 5 ಸೆಪ್ಟೆಂಬರ್ 2019, 20:12 IST
ಅಕ್ಷರ ಗಾತ್ರ

ಬೆಂಗಳೂರು: ಪದವಿ ಪೂರೈಸಿದ ವಿದ್ಯಾರ್ಥಿಗಳು ಯಾವುದೋ ಒಂದು ಉದ್ಯೋಗದ ಬೆನ್ನು ಹತ್ತಿ,ತಾವು ಓದದೆ ಇರುವಕ್ಷೇತ್ರಕ್ಕೆ ಹೋಗಿ ಕೆಲಸ ಮಾಡುವ ಪ್ರಮೇಯವೇ ಅಧಿಕ. ಇದನ್ನು ತಪ್ಪಿಸಿ, ವಿದ್ಯಾರ್ಥಿಗಳ ಇಚ್ಛೆಯನ್ನು ಅರಿತು ಅದಕ್ಕೆ ತಕ್ಕಂತೆ ಪದವಿ ಶಿಕ್ಷಣ ನೀಡುವ ವಿನೂತನ ಕಾರ್ಯಕ್ರಮಕ್ಕೆ ನಗರದ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ (ಎಂಸಿಯು) ಮುಂದಾಗಿದೆ.

‘ವಿದ್ಯಾರ್ಥಿಗಳಿಗೆ ಹಲವಾರು ಪ್ರಶ್ನಾವಳಿಗಳ ಪತ್ರವನ್ನು ನೀಡಿ, ಎರಡು ಸಾಲಿನ ಉತ್ತರ ಪಡೆದು, ಅವರ ಇಚ್ಛೆಯಂತೆ ಪದವಿಯಲ್ಲಿ ಸಂಯೋಜನೆ (ಕಾಂಬಿನೇಷನ್‌) ಒದಗಿಸಿಕೊಡುವ ಪ್ರಯತ್ನವನ್ನು ನಾವು ಮಾಡಲು ಹೊರಟಿದ್ದೇವೆ.ಈಗಾಗಲೇ ಉತ್ತರ ಪರಿಶೀಲಿಸುವ ಕೆಲಸ ಆರಂಭವಾಗಿದ್ದು, ಮುಂದಿನಶೈಕ್ಷಣಿಕ ಸಾಲಿನಿಂದಲೇ ಹೊಸ ಸಂಯೋಜನೆಯ ಪದವಿ ನೀಡುವ ಯೋಜನೆ ಇದೆ’ ಎಂದು ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಡಾ.ಎಂ.ಎಸ್‌.ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ದೇಶದಲ್ಲಿ ಇಂದು 907 ವಿಶ್ವವಿದ್ಯಾಲಯಗಳಿದ್ದು, ಬಡ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕಾಗಿಯೇ ರೂಪುಗೊಂಡ ನಮ್ಮ ವಿಶ್ವವಿದ್ಯಾಲಯ ಎಳೆಯ ಕೂಸು. ಹಾಗಿದ್ದರೂ ವಿನೂತನ ಯೋಜನೆಯೊಂದನ್ನು ರೂಪಿಸುವ ಮೂಲಕ ದೇಶದಲ್ಲಿ ಒಂದು ಮೈಲುಗಲ್ಲು ನಿರ್ಮಿಸುವ ಗುರಿ ಇಟ್ಟುಕೊಂಡಿದ್ದೇವೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯವೂ ಇದೇ ಆಗಿದೆ.ವಿದ್ಯಾರ್ಥಿನಿಯರಿಗೆ ಇದರ ಪ್ರಯೋಜನ ಸಿಗುವ ವಿಶ್ವಾಸ ಇದೆ’ ಎಂದು ಅವರು ಹೇಳಿದರು.

ಏನಿದು ಪ್ರಯೋಗ?: ಆಯ್ಕೆ ಆಧಾರಿತ ವಿಷಯ ಅಧ್ಯಯನ (ಚಾಯ್ಸ್‌ ಬೇಸ್ಡ್‌ ಕ್ರೆಡಿಟ್‌ ಸಿಸ್ಟಂ) ಎಂಬ ಪರಿಕಲ್ಪನೆ ಹಲವು ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಇದೆ. ಇಲ್ಲಿ ಪದವಿ ಹಂತದಲ್ಲೇ ವ್ಯಾಸಂಗ ಕ್ರಮದಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ವಿಷಯಗಳನ್ನು ಮಿಳಿತಗೊಳಿಸಿ ಬೋಧಿಸುವ ಪರಿಕಲ್ಪನೆ ಇರುತ್ತದೆ.ಪದವಿ ಪೂರೈಸಿ ನೇರವಾಗಿ ಉದ್ಯೋಗಕ್ಕೆ ಹೋಗುವವರು ಯಾವ ಕ್ಷೇತ್ರದಲ್ಲಾದರೂ ಕೆಲಸ ಮಾಡಬಹುದು ಎಂಬ ಆತ್ಮವಿಶ್ವಾಸ ಮೂಡಿಸುವುದು ಇದರಿಂದ ಸಾಧ್ಯ ಎಂಬ ನಂಬಿಕೆಯ ಮೇರೆಗೆ ಈ ಬೋಧನಾ ಕ್ರಮ ನಡೆಯುತ್ತದೆ.

ಅದರಂತೆ ಇದೀಗ ಎಲ್ಲ ವಿದ್ಯಾರ್ಥಿಗಳಿಗೆ 6 ಪುಟಗಳ ಪ್ರಶ್ನಾವಳಿ ಕೊಡಲಾಗಿದೆ. ವಿದ್ಯಾರ್ಥಿಗಳ ಹಿನ್ನೆಲೆಯನ್ನು ಅರಿಯುವುದರ ಜತೆಗೆ, ಅವರ ಆಸಕ್ತಿಯನ್ನು ತಿಳಿಯುವ ಪ್ರಯತ್ನವೂ ಇದರಲ್ಲಿರುತ್ತದೆ. ಕೊನೆಗೆ ಕಲಾ ವಿಭಾಗದಲ್ಲಿನ 13 ವಿಷಯಗಳು, ವಿಜ್ಞಾನ ವಿಭಾಗದಲ್ಲಿನ 17 ವಿಷಯಗಳು, ವಾಣಿಜ್ಯ ವಿಭಾಗದಲ್ಲಿನ 12 ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಬಿಎ ವಿದ್ಯಾರ್ಥಿಗಳು ಕಲಾ ವಿಭಾಗದ ಎರಡು ಹಾಗೂ ವಿಜ್ಞಾನ ಅಥವಾ ವಾಣಿಜ್ಯ ವಿಭಾಗದ ತಮ್ಮ ಆಯ್ಕೆಯ ಒಂದು ವಿಷಯ ಆಯ್ದುಕೊಂಡರೆ ಅವರಿಗೆ ಅದೇ ಶಿಕ್ಷಣ ನೀಡಲಾಗುತ್ತದೆ. ಬಿಎಸ್‌ಸಿ, ಬಿಕಾಂನವರಿಗೂ ಇದೇ ರೀತಿಯಲ್ಲಿ ಆಯ್ಕೆಯ ಅವಕಾಶ ಇರುತ್ತದೆ.

ಉನ್ನತ ಶಿಕ್ಷಣಕ್ಕೆ ಹೊಗುವವರಿಗೆ ಇದರಿಂದ ಯಾವ ತೊಂದರೆಯೂ ಇಲ್ಲ. ಪದವಿ ಪೂರೈಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೂ ವಿವಿಧ ವಿಷಯಗಳ ಜ್ಞಾನ ಸಿಗುವಂತಾಗುತ್ತದೆ ಎಂದು ವಿಶೇಷಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ವಿದ್ಯಾರ್ಥಿಗಳ ಮನಸ್ಸಿನ ಭಾವನೆ ಅರಿಯುವ ಪ್ರಯತ್ನ ನಡೆಸಿ, ಅದಕ್ಕೆ ತಕ್ಕಂತೆ ಪದವಿ ಸಂಯೋಜನೆ ರಚಿಸುತ್ತಿದ್ದೇವೆ. ನಮ್ಮ ಪ್ರಯತ್ನ ಯಶಸ್ವಿಯಾಗುವ ವಿಶ್ವಾಸ ಇದೆ.

- ಡಾ.ಎಂ.ಎಸ್‌.ರೆಡ್ಡಿ, ವಿಶೇಷಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT