ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರೈವತ್ತರ ಬಾಪು----–ಸಾವಿರ ನೆನಪು

Last Updated 2 ಅಕ್ಟೋಬರ್ 2018, 19:47 IST
ಅಕ್ಷರ ಗಾತ್ರ

ಬೆಂಗಳೂರು: ನೂರೈವತ್ತರ ಜನ್ಮದಿನದಂದು ಗಾಂಧೀಜಿ ಅವರ ಹತ್ತಾರು ಮುಖಗಳ ಸಾವಿರ ನೆನಪುಗಳು ನಗರದಲ್ಲಿ ಮಂಗಳವಾರ ತೆರೆದುಕೊಂಡವು. ನಗರದ ವಿವಿಧ ಕಡೆಗಳಲ್ಲಿ ನಡೆದ ಗಾಂಧಿ ಜಯಂತಿ, ಹೊಸ ಕಾರ್ಯಕ್ರಮಗಳ ಘೋಷಣೆ, ಸ್ವಚ್ಛತೆ, ವಿಚಾರ ಗೋಷ್ಠಿ, ಚಿಂತನ ಮಂಥನಗಳಿಗೆ ವೇದಿಕೆ ಕಲ್ಪಿಸಿತು.

ವಿವಿಧ ಸಂಘಟನೆ, ರಾಜಕೀಯ ಪಕ್ಷಗಳ ಮುಖಂಡರು ಅಲ್ಲಲ್ಲಿ ಗಾಂಧಿ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಕೆಲವೆಡೆ ಸತ್ಯಾಗ್ರಹ ಸ್ಮರಣೆ, ನಗರಕ್ಕೆ ಗಾಂಧೀಜಿ ಭೇಟಿ ನೀಡಿದ ದಿನಗಳನ್ನೂ ಸ್ಮರಿಸಲಾಯಿತು.

ಗಾಂಧಿ ಭವನ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಇನ್ನು 20 ದಿನಗಳಲ್ಲಿ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನಗರದ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

ಗಾಂಧಿ ಸ್ಮಾರಕ ನಿಧಿ ಹಾಗೂ ವಿವಿಧ ಸಂಘಟನೆಗಳು ಕಾರ್ಯಕ್ರಮ ಆಯೋಜಿಸಿದ್ದವು.

16 ಜಿಲ್ಲೆಗಳಲ್ಲಿ ಈಗಾಗಲೇ ಭವನ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಇಂಥ ಭವನಗಳಲ್ಲಿ ಗ್ರಾಮೀಣ ಯುವಕರಿಗೆ ಕೌಶಲ ಅಭಿವೃದ್ಧಿಪಡಿಸುವ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

ರವೀಂದ್ರ ಕಲಾಕ್ಷೇತ್ರ:ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ‘ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದಮುಖ್ಯಮಂತ್ರಿ, ‘ಗಾಂಧಿಯವರ ಚಿಂತನೆಗಳ ಮೂಲಕ ನಾಡಿನಲ್ಲಿ ಹೊಸ ರೀತಿಯ ಬದಲಾವಣೆಗಳನ್ನು ತರಲು ಸಮ್ಮಿಶ್ರ ಸರ್ಕಾರ ಸಿದ್ಧವಿದೆ. ಇದಕ್ಕೆ ಪ್ರಸನ್ನ ಅವರ ಸಲಹೆ ಮತ್ತು ಸಹಕಾರ ಬೇಕು’ ಎಂದು ಹೇಳಿದರು.

ನೇಕಾರಿಕೆ, ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ, ಗ್ರಾಮೀಣ ಪ್ರದೇಶದ ಜನತೆ ಗೌರವದ ಬದುಕು
ಸಾಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದರು.

ಕಾಂಗ್ರೆಸ್‌ ಕಚೇರಿ: ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಮಾತನಾಡಿದರು.

‘ನಾಲ್ಕೂವರೆ ವರ್ಷ ಸುಳ್ಳಿನ ಸರಪಳಿ ಹೆಣೆದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂದಿನ‌ ಲೋಕಸಭಾ ಚುನಾವಣೆಯಲ್ಲಿ‌
ಬದಲಿಸದಿದ್ದರೆ ದೇಶ ಕಂಟಕ ಎದುರಿಸಬೇಕಾಗುತ್ತದೆ.ಗಾಂಧಿವಾದವನ್ನು ಮೋದಿ ಒಪ್ಪುತ್ತಿಲ್ಲ. ಅವರ ವಾದ ಸಮಾನತೆ, ಸಹಿಷ್ಣುತೆ. ಆದರೆ ಮೋದಿ ವಾದ ತದ್ವಿರುದ್ಧವಾಗಿದೆ. ಆದ್ದರಿಂದ ಜನರು ಎಚ್ಚೆತ್ತುಕೊಳ್ಳಬೇಕು’ ಎಂದರು.

ಗ್ರಾಮ ಸ್ವರಾಜ್ಯವಾದರೆ ಜಯಂತಿಗೆ ಅರ್ಥ:‘ಗಾಂಧಿ ಕಂಡ ಕನಸಿನಂತೆ, ಹಳ್ಳಿಗಳ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಆಗಲೇ ಜಯಂತಿಗೆ ಅರ್ಥ ಬರುತ್ತದೆ’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಹೇಳಿದರು.

ಗಾಂಧಿ ಜಯಂತಿ ದಿನದಂದೇ ಆನಂದರಾವ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಅವರು, ‘ಜಾತಿ, ಹಣ ಬಲದಿಂದ ರಾಜಕೀಯದ ಚುಕ್ಕಾಣಿ ಹಿಡಿಯಲಷ್ಟೇ ಪ್ರಯತ್ನಿಸುತ್ತಿರುವ ರಾಜಕಾರಣಿಗಳು, ಗಾಂಧಿ ತತ್ವಗಳನ್ನೇ ಪಾಲಿಸುತ್ತಿಲ್ಲ. ಇದು ಗಾಂಧಿಗೆ ಮಾಡುತ್ತಿರುವ ಅಪಮಾನ’ ಎಂದು ಕಿಡಿಕಾರಿದರು.

‘ಇಂದಿನ ರಾಜಕಾರಣಿಗಳಿಗೆ ಗಾಂಧಿ, ಲೋಹಿಯಾ ಹಾಗೂ ಅಂಬೇಡ್ಕರ್‌ ಅವರ ತತ್ವಗಳು ಬೇಕಿಲ್ಲ. ಅವರಿಗೆ ಬೇಕಿರುವುದು ಅಧಿಕಾರ ಮಾತ್ರ. ಇದರ ವಿರುದ್ಧ ನಾವು ನಿರಂತರವಾಗಿ ಹೋರಾಟ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT