ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾತ್ಮನ ಸ್ಮರಣೆ, ಪ್ಲಾಸ್ಟಿಕ್ ವಿರುದ್ಧ ಜಾಗೃತಿ

ಬಾಪೂಜಿ ನೆನಪಿನಲ್ಲಿ ವಾಕಥಾನ್‌, ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಜನರು
Last Updated 2 ಅಕ್ಟೋಬರ್ 2019, 20:27 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಚ್ಛತಾ ಆಂದೋಲನ, ಸೈಕಲ್ ಜಾಥಾ, ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ... ಇವು ಬಾಪೂಜಿ ನೆನಪಿನಲ್ಲಿ ಬುಧವಾರ ನಡೆದ ವಿಶೇಷ ಕಾರ್ಯಕ್ರಮಗಳು.

ಸ್ವಚ್ಛತೆಗೆ ಗಾಂಧೀಜಿ ಅವರು ಆದ್ಯತೆ ನೀಡಿದ್ದ ಹಿನ್ನೆಲೆಯಲ್ಲಿ ಅವರ ನೆನಪಿನ ಕಾರ್ಯಕ್ರಮಗಳೂ ಅದೇ ದಾರಿಯಲ್ಲಿ ಸಾಗಿದವು.

ವಾಕಥಾನ್: ಏಕ ಬಳಕೆಯ ಪ್ಲಾಸ್ಟಿಕ್‌ ನಿಷೇಧಗೊಳಿಸುವಂತೆ ಜಾಗೃತಿ ಮೂಡಿ ಸಲು ಅದಮ್ಯ ಚೇತನ ಸಂಸ್ಥೆಯಿಂದ ವಾಕಥಾನ್ ನಡೆಸಲಾಯಿತು.

ಕಾರ್ಯಕ್ರಮಕ್ಕೆ ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತ ಕುಮಾರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ‘ಒಂದು ಬಾರಿ ಬಳಕೆ ಮಾಡಿ ಬಿಸಾಡುವ ಪ್ಲಾಸ್ಟಿಕ್ ಪರಿಸರಕ್ಕೆ ಅತ್ಯಂತ ಮಾರಕ. ಇದರ ಬಳಕೆ ಇಲ್ಲದೆ ನಾವು ಜೀವನ ಮಾಡುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಿಸಿಕೊಂಡಿದ್ದೇವೆ. ಇದನ್ನು ಬದಲಾಯಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಇದರ ವಿರುದ್ಧ ಸಮರ ಸಾರಿದ್ದಾರೆ. ಒಂದು ಬಾರಿ ಬಳಕೆಯ ಪ್ಲಾಸ್ಟಿಕ್ ಬಿಟ್ಟು ಇನ್ನಿತರೆ ಪರಿಸರಸ್ನೇಹಿ ವಸ್ತುಗಳನ್ನು ಬಳಸಲು ಪ್ರಾರಂಭಿಸಬೇಕಾಗಿದೆ’ ಎಂದರು.

ಒಂದು ಕೈಯಲ್ಲಿ ಬಟ್ಟೆ ಬ್ಯಾಗ್ ಇನ್ನೊಂದು ಕೈಯಲ್ಲಿ ಸ್ಟೀಲ್ ಬಾಟಲಿ ಹಿಡಿದು ಮಕ್ಕಳು, ಯುವಕ–ಯುವತಿ ಯರು ಪಾಲ್ಗೊಂಡಿದ್ದರು. ಹಳೆಯ ಸೀರೆ ಗಳಿಂದ ಹೊಲೆದಿದ್ದ ರೇಡ್ಯುಸ್ ಹಾಗೂ ರಿ ಯ್ಯುಸ್ ಬ್ಯಾಗ್(ಆರ್.ಆರ್ ಬ್ಯಾಗ್) ಅಭಿಯಾನಕ್ಕೆ ಇದೇ ವೇಳೆ ಚಾಲನೆ ನೀಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್, ಬಿಬಿಎಂಪಿ ಸದಸ್ಯೆ ವಾಣಿ ವಿ. ರಾವ್, ವಿಶ್ವ ಹಿಂದೂ ಪರಿಷತ್ತಿನ ಡಾ. ವಿಜಯಲಕ್ಷ್ಮಿ ದೇಶ ಮಾನೆ ಭಾಗವಹಿಸಿದ್ದರು.

ರೈಲು ನಿಲ್ದಾಣದಲ್ಲಿ ಜಾಗೃತಿ: ಗಾಂಧಿ ಜಯಂತಿ ಅಂಗವಾಗಿ ನೈರುತ್ಯ ರೈಲ್ವೆ ಇಲಾಖೆಯ ಬೆಂಗಳೂರು ವಿಭಾಗದಿಂದ ಯಶವಂತಪುರ ರೈಲು ನಿಲ್ದಾಣದಲ್ಲಿ ‘ಸ್ವಚ್ಛತಾ ಶಪಥ’ ಕೈಗೊಳ್ಳಲಾಯಿತು. ರೈಲ್ವೆ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಅಶೋಕ್‌ಕುಮಾರ್ ವರ್ಮಾ, ಪ್ರತಿಜ್ಞಾವಿಧಿ ಬೋಧಿಸಿದರು.

ಸೇಂಟ್ ಫ್ರಾನ್ಸಿಸ್ ಡೀ ಸೇಲ್ಸ್ ಪಬ್ಲಿಕ್ ಶಾಲೆ ಮತ್ತು ಫೀಡಸ್ ಇಂಡಿಯಾ ಮಕ್ಕಳು ಸ್ವಚ್ಛತಾ ಅಭಿಯಾನ ನಡೆಸಿದರು.

‘ಖಾದಿಗೆ ಜಿಎಸ್‌ಟಿ ಬೇಡ’

‘ಖಾದಿ ಉತ್ಪನ್ನಗಳ ಮೇಲಿನ ಜಿಎಸ್‌ಟಿ ತೆರವುಗೊಳಿಸುವಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸುತ್ತೇನೆ’ ಎಂದು ಸಂಸದ ತೇಜಸ್ವಿಸೂರ್ಯ ಹೇಳಿದರು.

ಜಯನಗರದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಸರ್ವೋದಯ ಸಂಘದ ಸದಸ್ಯರು ಮನವಿ ಸಲ್ಲಿಸಿದ್ದು, ಈ ಸಂಬಂಧ ಸಚಿವರೊಂದಿಗೆ ಮಾತನಾಡುತ್ತೇನೆ’ ಎಂದರು. ಇದಾದ ಬಳಿಕ ವಿದ್ಯಾರ್ಥಿಗಳೊಂದಿಗೆ ರ‍್ಯಾಲಿ ನಡೆಸಿ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅವರು ಅರಿವು ಮೂಡಿಸಿದರು.

ಉಪವಾಸ ಸತ್ಯಾಗ್ರಹ ಆರಂಭ

ಪವಿತ್ರ ಆರ್ಥಿಕತೆಗೆ ಆಗ್ರಹಿಸಿಗ್ರಾಮ ಸೇವಾ ಸಂಘದ ವತಿಯಿಂದ ಉಪವಾಸ ಸತ್ಯಾಗ್ರಹ ಆರಂಭವಾಗಿದೆ.

‌ಗಾಂಧಿಭವನದ ಹಿಂಭಾಗ ಇರುವ ವಲ್ಲಭ ನಿಕೇತನದಲ್ಲಿ ರಂಗಕರ್ಮಿ ಪ್ರಸನ್ನ ಮತ್ತುಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಅವರು ಸತ್ಯಾಗ್ರಹಕ್ಕೆ ಚಾಲನೆ ನೀಡಿದರು. ಪರಿಸರ ಹೋರಾಟಗಾರ್ತಿ ವಂದನಾಶಿವ ಅವರು ಗುರುವಾರ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ. ಅ.4ರವರೆಗೆ ಗ್ರಾಮ ಸೇವಾ ಸಂಘದ ಯುವ ಹಾಗೂ ಹಿರಿಯ ಕಾರ್ಯಕರ್ತರು ಸರಣಿ ಉಪವಾಸ ನಡೆಸಲಿದ್ದು, ಅ.5ರಿಂದ ಅನಿರ್ದಿಷ್ಟ ಉಪವಾಸ ಆರಂಭವಾಗಲಿದೆ. ದೇಶದ ವಿವಿಧೆಡೆಯಿಂದ ಸಾಮಾಜಿಕ ಕಾರ್ಯಕರ್ತರು ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ ಎಂದು ಗ್ರಾಮ ಸೇವಾ ಸಂಘ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT