ಶನಿವಾರ, ಜನವರಿ 28, 2023
15 °C
ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ದುರಸ್ತಿ ಕಾರ್ಯ

1 ಲಕ್ಷಕ್ಕೂ ಅಧಿಕ ವಿದ್ಯುತ್‌ ಪರಿವರ್ತಕಗಳ ನಿರ್ವಹಣೆ: ಮಹಾಂತೇಶ ಬೀಳಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದುರಸ್ತಿ ಸ್ಥಿತಿಯಲ್ಲಿರುವ ಹಾಗೂ ತಾಂತ್ರಿಕ ದೋಷದಿಂದ ಕೂಡಿರುವ 1,02,713 ವಿದ್ಯುತ್ ಪರಿವರ್ತಕಗಳ ನಿರ್ವಹಣೆಯನ್ನು ಬೆಸ್ಕಾಂ ಕಳೆದ ಏಳು ತಿಂಗಳಲ್ಲಿ ಕೈಗೊಂಡಿದೆ.

ವಿದ್ಯುತ್‌ ಪರಿವರ್ತಕ ನಿರ್ವಹಣೆಯನ್ನು ಎಲ್ಲ 535 ಸೆಕ್ಷನ್‌ಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ನಿರ್ವಹಣೆ ಅಭಿಯಾನಕ್ಕೆ ಇದೇ ವರ್ಷದ ಮೇ 5ರಂದು ಚಾಲನೆ ನೀಡಲಾಗಿತ್ತು. ನಿರ್ವಹಣೆ ಕಾರ್ಯವನ್ನು ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಆರಂಭಿಸಲಾಗಿತ್ತು. ನ.24ರ ವೇಳೆಗೆ 1,02,713 ವಿದ್ಯುತ್‌ ಪರಿವರ್ತಕಗಳ ನಿರ್ವಹಣೆ ಕಾರ್ಯ ಪೂರ್ಣಗೊಳಿಸಲಾಗಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್‌ ಪರಿವರ್ತಕಗಳ ನಿರ್ವಹಣೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಇತ್ತೀಚೆಗೆ ನಡೆದ ಪರಿಶೀಲನಾ ಸಭೆಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ನಿರ್ವಹಣೆ ಸಂದರ್ಭದಲ್ಲಿ ವಿದ್ಯುತ್‌ ಪರಿವರ್ತಕಗಳಲ್ಲಿನ ‘ಬುಶ್‌’ಗಳು ಸಡಿಲಗೊಂಡಿದ್ದರೆ ಗಟ್ಟಿಗೊಳಿಸಲಾಗುತ್ತಿದೆ. ಸಡಿಲಗೊಂಡ ವೈರ್‌ಗಳನ್ನು ಸರಿಪಡಿಸಲಾಗುತ್ತಿದೆ ಮತ್ತು ಆಯಿಲ್‌ ನಿರ್ವಹಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ವಿದ್ಯುತ್‌ ಪರಿವರ್ತಕಗಳಿಗೆ ಶಾಶ್ವತ ಕಾಯಕಲ್ಪ ಒದಗಿಸಲಾಗುತ್ತಿದೆ. ವಿದ್ಯುತ್‌ ಪರಿವರ್ತಕಗಳ ನಿರ್ವಹಣೆಯಿಂದಾಗಿ ಅವುಗಳ ಕಾರ್ಯಕ್ಷಮತೆ ಹೆಚ್ಚಾಗುವುದರಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಸಲು ನೆರವಾಗುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಬೆಸ್ಕಾಂ ವ್ಯಾಪ್ತಿಯ ಬೆಂಗಳೂರು ನಗರ ಜಿಲ್ಲೆಯಲ್ಲಿ 35,235 ವಿದ್ಯುತ್‌ ಪರಿವರ್ತಕಗಳ ನಿರ್ವಹಣೆ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 12,365, ತುಮಕೂರು ಜಿಲ್ಲೆಯಲ್ಲಿ 16,234, ಚಿತ್ರದುರ್ಗ ಜಿಲ್ಲೆಯಲ್ಲಿ 12230 , ರಾಮನಗರದಲ್ಲಿ 9,873, ಚಿಕ್ಕಬಳ್ಳಾಪುರದಲ್ಲಿ 7,981, ಕೋಲಾರದಲ್ಲಿ 4018 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 4,687 ವಿದ್ಯುತ್‌ ಪರಿವರ್ತಕಗಳ ನಿರ್ವಹಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು