ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ ಸುಗ್ಗಿಗೆ ಖರೀದಿ ಭರಾಟೆ ಜೋರು

Last Updated 12 ಜನವರಿ 2021, 19:35 IST
ಅಕ್ಷರ ಗಾತ್ರ

ಬೆಂಗಳೂರು: ಮಕರ ಸಂಕ್ರಾಂತಿಯ ಖರೀದಿ ಭರಾಟೆ ಜೋರಾಗಿದೆ. ಎರಡು ದಿನ್ನ ಮುನ್ನವೇ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಕೊಳ್ಳಲು ಜನ ಮುಗಿಬಿದ್ದರು. ನಗರದ ಮಾರುಕಟ್ಟೆಗಳು ಹಾಗೂ ಮಳಿಗೆಗಳಲ್ಲಿ ಮಂಗಳವಾರಭಾರಿ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಯಲ್ಲಿ ತೊಡಗಿದ್ದರು.

ನಗರದ ಕೆ.ಆರ್‌.ಮಾರುಕಟ್ಟೆಯಂತೂ ಗ್ರಾಹಕರಿಂದ ಗಿಜಿಗುಡುತ್ತಿತ್ತು. ಹೂವು, ಹಣ್ಣು, ತರಕಾರಿ ಹಾಗೂ ದಿನಸಿ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು.

ಮಾರುಕಟ್ಟೆಯ ಒಳಗೆ ಹಾಗೂ ಹೊರಭಾಗಗಳಲ್ಲಿ ಟನ್‌ಗಟ್ಟಲೆ ಕಬ್ಬಿನ ಜಲ್ಲೆಗಳನ್ನು ಮಾರಾಟಕ್ಕೆ ಇಡಲಾಗಿದೆ. ರಸ್ತೆಗಳಲ್ಲಿ ಮತ್ತು ತಳ್ಳು ಗಾಡಿಗಳಲ್ಲಿ ಗೆಣಸು, ಅವರೆಕಾಯಿ, ಕಡಲೆಕಾಯಿ ರಾಶಿ ಹಾಕಿಕೊಂಡು ಮಾರಲಾಗುತ್ತಿದೆ.

ಹಬ್ಬಕ್ಕೆ ಹೂವಿನ ದರಗಳು ಗಗನಕ್ಕೇರಿವೆ. ಬಿಳಿ ಕಬ್ಬು ಒಂದು ಜಲ್ಲೆಯ ಸಗಟು ದರ ₹50 ಹಾಗೂ ಕಪ್ಪು ಬಣ್ಣದ ಕಬ್ಬು ₹70ರವರೆಗೆ ಮಾರಾಟವಾಗುತ್ತಿವೆ. ಚಿಲ್ಲರೆ ವ್ಯಾಪಾರಿಗಳು ಜಲ್ಲೆಗಳನ್ನು ತುಂಡರಿಸಿ, ಒಂದನ್ನು ₹10 ಮತ್ತು ₹20ಕ್ಕೆ ಮಾರಾಟ ಮಾಡುತ್ತಿದ್ದಾರೆ.

ಬಸವನಗುಡಿ, ಗಾಂಧಿಬಜಾರ್, ಮಲ್ಲೇಶ್ವರ, ಜಯನಗರ, ಜೆ.ಪಿ.ನಗರ, ಹೆಬ್ಬಾಳ, ಯಶವಂತಪುರ, ಇಂದಿರಾನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹಬ್ಬಕ್ಕಾಗಿ ಕಿರು ಮಾರುಕಟ್ಟೆಗಳು ತಲೆ ಎತ್ತಿವೆ. ಬಟ್ಟೆಗಳ ಮಾರಾಟವೂ ಕಳೆಗಟ್ಟಿದೆ. ತಿಂಗಳುಗಳಿಂದ ಗ್ರಾಹಕರಿಲ್ಲದೇ ಭಣಗುಡುತ್ತಿದ್ದ ಬಟ್ಟೆ ಮಳಿಗೆಗಳಲ್ಲೂ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ.

ಸಂಕ್ರಾಂತಿ ಹಬ್ಬದ ವಿಶೇಷವಾದ ‘ಎಳ್ಳು–ಬೆಲ್ಲ’ ತಯಾರಿಸಲು ಬೆಲ್ಲ, ಎಳ್ಳು, ಬಣ್ಣದ ಬತಾಸು, ಕೊಬ್ಬರಿ ಖರೀದಿಯಿಂದಾಗಿ ದಿನಸಿ ಮಾರಾಟ ಮಳಿಗೆಗಳಲ್ಲೂ ಗ್ರಾಹಕರ ಸಂಖ್ಯೆ ಹೆಚ್ಚು ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT