ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆನೀರಿನ ಸರಾಗ ಹರಿವಿಗೆ ಕ್ರಮ ಕೈಗೊಳ್ಳಿ: ತುಷಾರ್‌ ಗಿರಿನಾಥ್‌

ದಕ್ಷಿಣ ವಲಯದ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಮುಖ್ಯ ಆಯುಕ್ತ
Last Updated 16 ಮೇ 2022, 16:20 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಪದೇ ಪದೇ ಸಮಸ್ಯೆ ಉಂಟಾಗುವ ಪ್ರದೇಶಗಳಿಗೆ ಪಾಲಿಕೆಯ ಮುಖ್ಯಆಯುಕ್ತ ತುಷಾರ್‌ ಗಿರಿನಾಥ್‌ ಅವರು ಸೋಮವಾರ ಭೇಟಿ ನೀಡಿದರು. ಸಮಸ್ಯೆ ಉಂಟಾಗದಂತೆ ತಡೆಯಲು ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಕ್ರಮಕೈಗೊಳ್ಳುವಂತೆ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಜಯನಗರ ವಾರ್ಡ್‌ನ ಮನುವನದ ಬಳಿಯ ರಾಜಕಾಲುವೆ ಮಳೆಯಾದಾಗ ತುಂಬಿ ಹರಿಯುವ ಸಮಸ್ಯೆ ನೀಗಿಸಲು ಸೂಚನೆ ನೀಡಿದರು. ಇಲ್ಲಿ ರಾಜಕಾಲುವೆ ಸೇತುವೆಯ ಕೆಳಗೆ ಕೊಳವೆಗಳು ಹಾದು ಹೋಗಿವೆ. ಮನುವನದಿಂದ ಪೈಪ್‌ಲೈನ್ ರಸ್ತೆ ಜಂಕ್ಷನ್‌ವರೆಗೆ ಕೊಳಚೆ ನೀರಿನ ಕೊಳವೆಗಳು ರಾಜಕಾಲುವೆ ಮೂಲಕ ಹಾದು ಹೋಗಿವೆ. ಮಳೆಗಾಲ ಪ್ರಾರಂಭಕ್ಕೂ ಮುನ್ನ ಕೊಳವೆಗಳನ್ನು ಬದಲಿಸಿ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡಬೇಕು. ಗಾಳಿ ಆಂಜನೇಯ ದೇವಸ್ಥಾನದ ಬಳಿ ಸೇತುವೆಯ ಕೆಳಭಾಗದಲ್ಲಿ ರಾಜಕಾಲುವೆಯ ಹೂಳು ತೆಗೆಯಬೇಕು. ಅಕ್ಕ-ಪಕ್ಕದ ಪ್ರದೇಶದಲ್ಲಿ ಚರಂಡಿಗಳಲ್ಲಿ ಹೂಳೆತ್ತಿ ವೃಷಭಾವತಿ ಕಣಿವೆಗೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸುವಂತೆ ಎಂದು ಜಲಮಂಡಳಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಾಯಂಡಹಳ್ಳಿ ಜಂಕ್ಷನ್ ಬಳಿಯ ರಾಜಕಾಲುವೆ ದುರಸ್ತಿ ಕಾಮಗಾರಿಯನ್ನು ಮಳೆಗಾಲಕ್ಕೂ ಮುಂಚಿತವಾಗಿ ಪೂರ್ಣಗೊಳಿಸಬೇಕು. ಸ್ಥಳದಲ್ಲಿ ರಾಶಿ ಹಾಕಿದ್ದ ಹೂಳನ್ನು ಕೂಡಲೆ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು.

ಡಿಸೋಜಾನಗರದ ಸ್ಕೈಲೈನ್ ಅಪಾರ್ಟ್‌ಮೆಂಟ್‌ ಸಮುಚ್ಚಯದ ಬಳಿ ಕೊಳಚೆ ನೀರು ನೇರವಾಗಿ ರಾಜಕಾಲುವೆಗೆ ಸೇರುತ್ತಿತ್ತು. ಇದನ್ನು ತಡೆಯಲು ಕ್ರಮ ಕೈಗೊಳ್ಳದ ಜಲಮಂಡಳಿ ಅಧಿಕಾರಿಗಳಿಗೆ ನೋಟೀಸ್ ನೀಡಲು ಮುಖ್ಯ ಆಯುಕ್ತರು ಸೂಚಿಸಿದರು. ಇಲ್ಲಿ ಪಾಲಿಕೆಯು ರಾಜಕಾಲುವೆಗೆ ಕಾಂಕ್ರೀಟ್‌ ತಡೆಗೋಡೆ ನಿರ್ಮಿಸಲಾಗುತ್ತಿದ್ದು, ಕಾಮಗಾರಿಯನ್ನು ಗಡುವಿನೊಳಗೆ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು. ಅಪಾರ್ಟ್‌ಮೆಂಟ್‌ ಸಮುಚ್ಚಯಕ್ಕೆ ಹೋಗಲು ನಿರ್ಮಿಸಿರುವ ಸೇತುವೆಯ ನವೀಕರಣಕ್ಕೆ ವಿಸ್ತೃತ ಯೋಜನಾ ವರದಿ ಸಿದ್ದಪಡಿಸುವಂತೆ ಸಲಹೆ ನೀಡಿದರು.

ಕಾಮಾಕ್ಯ ಚಿತ್ರಮಂದಿರದ ಬಳಿ ಇತ್ತೀಚೆಗೆ ಭಾರಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿತ್ತು. ಈ ಸಮಸ್ಯೆ ನೀಗಿಸಲು, ಇಲ್ಲಿನ ರಾಜಕಾಲುವೆ ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜೆ.ಪಿ ನಗರದಲ್ಲಿ ಮಳೆಯಾದರೆ ರಾಜಕಾಲುವೆಯಲ್ಲಿ ನೀರು ಹಿಮ್ಮುಖವಾಗಿ ಚಲಿಸಿ ರಸ್ತೆ ಮೇಲೆ ನೀರು ನಿಂತು ಮನೆಗಳಿಗೆ ನೀರು ನುಗ್ಗುತ್ತದೆ. ಹೂಳನ್ನು ತೆಗೆದು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ರಸ್ತೆ ಮೇಲೆ ನೀರು ನಿಲ್ಲುವುದನ್ನು ತಪ್ಪಿಸಲು ಪಂಪ್‌ ಅಳವಡಿಸಬೇಕು ಎಂದು ಮುಖ್ಯ ಆಯುಕ್ತರು ಸಲಹೆ ನೀಡಿದರು.

ಗಿರಿನಗರ ವಾರ್ಡ್‌ನಲ್ಲಿ ವಿವೇಕಾನಂದ ಉದ್ಯಾನದಲ್ಲಿ ₹ 5 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ಅಭಿವೃದ್ಧಿ ಕಾಮಗಾರಿ ಹಾಗೂ ವಿದ್ಯಾಪೀಠ ವೃತ್ತದ ಬಳಿ ₹ 2 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಬಿಬಿಎಂಪಿ ಕಚೇರಿ ಕಟ್ಟಡ ಹಾಗೂ ಕ್ರೀಡಾ ಸಂಕೀರ್ಣವನ್ನು ಪರಿಶೀಲಿಸಿದರು.

ಎಸ್.ಜೆ.ಪಿ ರಸ್ತೆಯ ಜಮಿಯಾ ಮಸೀದಿಯ ಬಳಿ ಒಳಚರಂಡಿ ಕೊಳವೆಗಳನ್ನು ರಸ್ತೆಯಲ್ಲೇ ಅಳವಡಿಸುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ. ಎಸ್.ಜೆ.ಪಿ ಉದ್ಯಾನದ ಕೊಳವೆ ಅಳವಡಿಸಲು ಸಲಹೆ ನೀಡಿದರು. ಕೋರಮಂಗಲದಲ್ಲಿರುವ ‘ಕಸ-ರಸ’ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ದಾಸಪ್ಪ ಆಸ್ಪತ್ರೆಯ ಕಾಮಗಾರಿಯನ್ನು ಹಾಗೂ ಗಣೇಶ ಮಂದಿರ ವಾರ್ಡ್‌ನಲ್ಲಿ ₹ 24 ಕೋಟಿ ವೆಚ್ಚದಲ್ಲಿ ನಾಲ್ಕು ಅಂತಸ್ತುಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಕಾಮಗಾರಿಯನ್ನು ಮುಖ್ಯ ಆಯುಕ್ತರು ಪರಿಶೀಲಿಸಿದರು. ದಾಸಪ್ಪ ಆಸ್ಪತ್ರೆ ಆವರಣದಲ್ಲಿದ್ದ ಕಟ್ಟಡದ ಅವಶೇಷಗಳನ್ನು ಕೂಡಲೆ ತೆರವುಗೊಳಿಸಲು ಸೂಚನೆ ನೀಡಿದರು. ಇಲ್ಲಿನ ಪ್ರಯಾಣಿಕರ ತಂಗುದಾಣದ ಬಳಿ ಮಳೆ ನೀರು ನಿಂತಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶಾಸಕರಾದ ರವಿ ಸುಬ್ರಹ್ಮಣ್ಯ, ಸೌಮ್ಯಾ ರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT