ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮಲ್ಲತ್ತಹಳ್ಳಿ ಕೆರೆ ಪ್ರದೇಶ ಚಟುವಟಿಕೆಗಳಿಗೆ ನಿರ್ಬಂಧ

Last Updated 15 ಮಾರ್ಚ್ 2023, 5:12 IST
ಅಕ್ಷರ ಗಾತ್ರ

ಬೆಂಗಳೂರು: ‘ಮಲ್ಲತ್ತಹಳ್ಳಿ ಕೆರೆಯ 71 ಎಕರೆ ಪ್ರದೇಶವನ್ನು ಸಂರಕ್ಷಿಸಬೇಕು. ಈ ಕೆರೆ ಪ್ರದೇಶದಲ್ಲಿ ಯಾವುದೇ ರಾಜಕೀಯ ಪಕ್ಷ, ರಾಜಕಾರಣಿ, ವ್ಯಕ್ತಿ, ವ್ಯಕ್ತಿಗಳ ಗುಂಪು ಸಂಘಟನೆಗಳಿಗೆ ಯಾವುದೇ ರೀತಿಯ ಶಾಶ್ವತ ನಿರ್ಮಾಣ ಮತ್ತಿತರ ಚಟುವಟಿಕೆಗಳಿಗೆ ಅವಕಾಶ ಕೊಡಬಾರದು’ ಎಂದು ಹೈಕೋರ್ಟ್‌ ಆದೇಶಿಸಿದೆ.

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲತ್ತಳ್ಳಿಯ ಕೆರೆ ಪ್ರದೇಶದಲ್ಲಿ ಬಯಲು ರಂಗಮಂದಿರ ಹಾಗೂ ಶಿವನ ಮೂರ್ತಿ ಪ್ರತಿಷ್ಠಾಪನೆ ಆಕ್ಷೇಪಿಸಿ ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಹಾಗೂ ಟಿ. ವೆಂಕಟೇಶ್ ನಾಯಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

‘ವ್ಯಾಜ್ಯದಲ್ಲಿರುವ 3 ಎಕರೆ ಹೊರತು ಪಡಿಸಿದಂತೆ ಕೆರೆ ಅಂಗಳದಲ್ಲಿ ಕಟ್ಟಿರುವ ಕಲ್ಯಾಣಿಯಲ್ಲಿ ನಿಗದಿಯಂತೆ ಗಣೇಶ, ದುರ್ಗಾ ಮೂರ್ತಿಗಳ ವಿಸರ್ಜನೆಯಂತಹ ಸೀಮಿತ ಚಟುವಟಿಕೆಗಳಿಗೆ ಸೀಮಿತ ಅವಧಿಗೆ ಮಾತ್ರವೇ ಅನುಮತಿ ನೀಡಬೇಕು. ಬಳಿಕ ಕಲ್ಯಾಣಿಯನ್ನು ಸ್ವಚ್ಛಗೊಳಿಸಬೇಕು. ಕಲ್ಯಾಣಿಯ ಕಲುಷಿತ ನೀರು ಕೆರೆಗೆ ಸೇರದಂತೆ ನೋಡಿಕೊಳ್ಳಬೇಕು’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನಿರ್ದೇಶಿಸಿತು.

‘ಕೆರೆ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡಲು ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಕಾಯ್ದೆಯ ಕಲಂ 12 ಅನ್ನು ಅನ್ವಯಿಸಲು ಅವಕಾಶವಿಲ್ಲ. ಹೀಗಿರುವಾಗ, ಇದಕ್ಕೆಲ್ಲಾ ಅನುಮತಿ ಕೊಟ್ಟವರು ಯಾರು?’ ಎಂದು ನ್ಯಾಯಪೀಠ ಇದೇ ವೇಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

‘ಪಾಲಿಕೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದವರೇ ವ್ಯಾಜ್ಯಗಳನ್ನು ಹುಟ್ಟು ಹಾಕುತ್ತಾರೆ. ಇವರಿಬ್ಬರೂ ನೆಟ್ಟಗೆ ಇದ್ದಿದ್ದರೆ ವ್ಯಾಜ್ಯಗಳಾಗಲೀ ಅಥವಾ ಸಮಸ್ಯೆಗಳಾಗಲೀ ಉದ್ಭವಿಸುತ್ತಿರಲಿಲ್ಲ. ನಾವು ಇವರನ್ನು ನಂಬುತ್ತೇವೆ. ಕಲುಷಿತ ನಗರ, ಕಲುಷಿತ ಸಮಾಜದಲ್ಲಿ ನಾವಿದ್ದೇವೆ. ಜನರು ಮಾಲಿನ್ಯದಲ್ಲಿ ಇರುವಂತಾಗಿದೆ. ಇದೆಲ್ಲಾ ನಾವು ಮಾಡಿದ ಕರ್ಮ. ಪರಿಸ್ಥಿತಿ ಹೀಗೆ ಇದ್ದರೆ ನಮ್ಮ ಮಕ್ಕಳು-ಮೊಮ್ಮಕ್ಕಳು ನಮಗೆ ಹಿಡಿಶಾಪ ಹಾಕುತ್ತಾರೆ’ ಎಂದು ನ್ಯಾಯಪೀಠ ಮೌಖಿಕವಾಗಿ ಆತಂಕ ವ್ಯಕ್ತಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT