ಬುಧವಾರ, ಜುಲೈ 28, 2021
23 °C
ತ್ವರಿತವಾಗಿ ಕೆಲಸ ಮುಗಿಸುವಂತೆ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಸೂಚನೆ

ಮಲ್ಲೇಶ್ವರ ಕ್ಷೇತ್ರ: ₹ 100 ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂದಾಜು ₹ 100 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಗುಣಮಟ್ಟಕ್ಕೆ ಆದ್ಯತೆ ನೀಡಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಯಿಂದ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು‌ ಬುಧವಾರ ಮಾತನಾಡಿದರು. ಬಳಿಕ ಎಂಜಿನಿಯರ್‌ಗಳ ಸಭೆ ನಡೆಸಿದರು.

ಕಾಮಗಾರಿಗಳಲ್ಲಿ ಲೋಪವಾಗದಂತೆ ವಿವಿಧ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು. ಕಾಮಗಾರಿ ವೇಳೆ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಅಂದಾಜು ₹ 60 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ, ಮಳೆ ನೀರುಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಡೆಸಬೇಖು. ಪಾದಚಾರಿ ರಸ್ತೆಗಳನ್ನು ಒಪ್ಪ ಓರಣವಾಗಿ  ನಿರ್ಮಿಸಬೇಕು ಎಂದು ಅವರು ಸಲಹೆ ನೀಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ 69 ಕಿ.ಮೀ. ಉದ್ದದಷ್ಟು ಕೇಬಲ್‌ಗಳನ್ನು ನೆಲದಡಿ ಅಳವಡಿಸಲಾಗುತ್ತದೆ. ಪಾದಚಾರಿ ರಸ್ತೆ ಕಿರಿದಾಗಿರುವ ಕಡೆ 59 ಕಿ.ಮೀ. ಉದ್ದದಷ್ಟು ಟ್ವಿಸ್ಟೆಡ್‌ ಕೇಬಲ್‌ (ಎಬಿ ಕೇಬಲ್‌) ಅಳವಡಿಸಲಾಗುತ್ತದೆ. ಈ ವೇಳೆ ಬೆಸ್ಕಾಂ ನೆಲದ ಕೆಳಗೆ ಹಾಕಿರುವ ವಿದ್ಯುತ್ ಸಂಪರ್ಕಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.  ಉದ್ಯಾನಗಳನ್ನು ₹ 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಕಾಮಗಾರಿ ನಡೆಸುವಾಗ ಉದ್ಯಾನದಲ್ಲಿ ನಡಿಗೆ ಪಥದ ಜೊತೆ ಯೋಗ ಮಾಡಲು ಸ್ಥಳಾವಕಾಶ ಕಲ್ಪಿಸಬೇಕು. ಜನರಿಗೆ ಆಸನ ವ್ಯವಸ್ಥೆ ಮಾಡಬೇಕು. ಗಿಡ ಮರಗಳ ರಕ್ಷಣೆಗಾಗಿ ಸುತ್ತಲೂ ಕಬ್ಬಿಣದ ಗ್ರಿಲ್ ಅಳವಡಿಸಬೇಕು. ಸ್ವಚ್ಛತೆ ಕಾಪಾಡುವುದಕ್ಕೂ ಆದ್ಯತೆ ನೀಡಬೇಕು ಎಂದು ನಿರ್ದೇಶಣ ನೀಡಿದರು.

‘ಗುಟ್ಟಹಳ್ಳಿಯಲ್ಲಿ ಆಸ್ಪತ್ರೆಯನ್ನು ನವೀಕರಿಸಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲಾಗುತ್ತದೆ. ಆಟದ ಮೈದಾನವನ್ನು ₹ 17 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಈ ಮೈದಾನದಲ್ಲಿ ಅನ್ಯ ಚಟುವಟಿಕೆ ಬದಲು ಕ್ರೀಡೆಗಳಿಗೆ ಆದ್ಯತೆ ಸಿಗುವಂತಾಗಬೇಕು. ಮೈದಾನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕಸ ಸುರಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.

‘ಒಳಾಂಗಣ ಕ್ರೀಡಾಂಗಣವನ್ನೂ ₹ 2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.